ʻಶಿವರಾಮ ಕಾರಂತರ ಲೇಖನಗಳುʼ ಎಂಬ ಶೀರ್ಷಿಕೆಯಲ್ಲಿ ಎಂಟು ದಶಕಗಳಿಗೂ ಮೀರಿದ ಅವಧಿಯಲ್ಲಿ ಡಾ| ಕಾರಂತರು ಬರೆದ ಬಿಡಿ ಬರಹಗಳ ಎಂಟು ಸಂಪುಟಗಳ ಪ್ರಕಟಣೆಯ ಕಾರ್ಯವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಮೂಲಕ ಹಮ್ಮಿಕೊಳ್ಳಲಾಗಿದೆ. ಈ ಮಹತ್ವದ ಪ್ರಕಟಣಾ ಕಾರ್ಯದ ಭಾಗವಾಗಿ ಇದೀಗ ಏಳನೆಯ ಸಂಪುಟವು ಹೊರಬರುತ್ತಿದೆ. ಈ ಏಳನೆಯ ಸಂಪುಟವು ನಾಡು ಮತ್ತು ನಿಸರ್ಗ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧವಾದ ಲೇಖನಗಳನ್ನು ಒಳಗೊಂಡಿದೆ.
ಡಾ| ಶಿವರಾಮ ಕಾರಂತರು ಕನ್ನಡ ಸಾಹಿತಿಗಳಾಗಿ, ಚಿಂತಕರಾಗಿ ವಿಜ್ಞಾನ ಲೇಖಕರಾಗಿ, ರಂಗಭೂಮಿ ಪ್ರಯೋಗಶೀಲರಾಗಿ, ಸಂಶೋಧಕರಾಗಿ ಕನ್ನಡಕ್ಕೆ ಅಮೂಲ್ಯ ವಾದ ಕೊಡುಗೆಗಳನ್ನು ಕೊಟ್ಟಿದ್ದಾರೆ. ಈ ಶತಮಾನದ ಆರಂಭದ ದಶಕದಿಂದಲೇ ಕನ್ನಡದಲ್ಲಿ ಬರೆಯಲು ತೊಡಗಿದ ಕಾರಂತರು ಇಂದಿಗೂ ಸಾಹಿತಿಯಾಗಿ, ಕ್ರಿಯಾಶೀಲ ರಾಗಿ ನಮ್ಮ ನಡುವೆ ಇದ್ದಾರೆ. ಈ ಎಂಬತ್ತು ವರ್ಷಗಳ ಅವಧಿಯಲ್ಲಿ ಅನೇಕ ವೈವಿಧ್ಯಮಯವಾದ ವಿಷಯಗಳ ಬಗೆಗೆ ಬರೆದ ಡಾ| ಶಿವರಾಮ ಕಾರಂತರ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ, ಸಂಚಿಕೆಗಳಲ್ಲಿ, ಸಂಪುಟಗಳಲ್ಲಿ ಹಂಚಿಹೋಗಿವೆ. ವ್ಯಾಪಕವಾದ ವೈವಿಧ್ಯಮಯವಾದ ಮತ್ತು ಅಪೂರ್ವವಾದ ಈ ಲೇಖನಗಳನ್ನು ಡಾ| ಶಿವರಾಮ ಕಾರಂತರ ಸಹಾಯಕಿ ಶ್ರೀಮತಿ ಮಾಲಿನಿ ಮಲ್ಯರು ಸಂಗ್ರಹಿಸಿದ್ದಾರೆ. ಒಟ್ಟು ಎಂಟು ಸಂಪುಟಗಳಲ್ಲಿ ಪ್ರಕಟಗೊಳ್ಳುವ ಕಾರಂತರ ಬಿಡಿ ಬರಹಗಳು ವಿಶಾಲಹರಹುವುಳ್ಳ ವಿಷಯಗಳಿಂದ ಮತ್ತು ಮನೋಜ್ಞ ವಿಶ್ಲೇಷಣೆಯಿಂದ ಕೂಡಿವೆ. ಕಾರಂತರ ಈ ಬಿಡಿ ಲೇಖನಗಳನ್ನು ಸಂಪುಟಗಳ ರೂಪದಲ್ಲಿ ಪ್ರಕಟಿಸುವುದು ಅನೇಕ ಕಾರಣಗಳಿಂದ ಮಹತ್ವದ ಕೆಲಸವಾಗುತ್ತದೆ. ಕಾರಂತರಂತಹ ವಿಚಾರಶೀಲ ಲೇಖಕರ ಯೋಚನೆಗಳನ್ನು ಕನ್ನಡದ ಓದುಗರು ಒಂದೆಡೆ ಪಡೆಯಲು ಸಾಧ್ಯವಾಗುತ್ತದೆ. ಸುಮಾರು ಎಂಬತ್ತು ವರ್ಷಗಳ ಅವಧಿಯಲ್ಲಿ ಕಾರಂತರು ತಮ್ಮ ಸುತ್ತಮುತ್ತಲಿನ ಸಾಹಿತ್ಯಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ವಿಷಯಗಳಿಗೆ ತೋರಿಸಿದ ಪ್ರತಿಕ್ರಿಯೆಯನ್ನು ತಿಳಿಯಲು ಅನುಕೂಲವಾಗುತ್ತದೆ. ದಕ್ಷಿಣಕನ್ನಡ ಜಿಲ್ಲೆ ಮತ್ತು ಕರ್ನಾಟಕದ ನಿಸರ್ಗ, ಪರಿಸರ ಮತ್ತು ಸಾಂಸ್ಕೃತಿಕ ಜಗತ್ತಿನಲ್ಲಿ ನಡೆದಿರುವ ಬದಲಾವಣೆಗಳ ಸ್ವರೂಪ ಮತ್ತು ಕಾರಣಗಳನ್ನು ಶೋಧಿಸಲು ಸಾಧ್ಯವಾಗುತ್ತದೆ. ಹೀಗೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ಕಾರಣಗಳಿಂದಾಗಿ ಕಾರಂತರ ಬಿಡಿ ಲೇಖನಗಳ ಪ್ರಕಟಣೆಗೆ ಕನ್ನಡ ಸಾರಸ್ವತ ಜಗತ್ತಿನಲ್ಲಿ ಮಹತ್ವದ ಸ್ಥಾನವಿದೆ. ಮಂಗಳೂರು ವಿಶ್ವವಿದ್ಯಾನಿಲಯವು ಈ ಸಂಪುಟಗಳ ಪ್ರಕಟಣೆಯನ್ನು ಮಾಡುವ ಮೂಲಕ ಜ್ಞಾನಪ್ರಸರಣದ ಬಹಳ ಮುಖ್ಯವಾದ ಕೆಲಸವೊಂದನ್ನು ಮಾಡಿದ ಗೌರವಕ್ಕೆ ಪಾತ್ರವಾಗುತ್ತಿದೆ.
ಪುಟಗಳು: 527
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !