ಡಾ|| ಶಿವರಾಮ ಕಾರಂತರ 90ನೆಯ ವರ್ಷದ ಪೂರ್ತಿ ನೆನಪಿಗಾಗಿ ಅವರಿಗೆ ನಮ್ಮ ಮನ್ನಣೆಯ ದ್ಯೋತಕವಾಗಿ ಶಿವರಾಮ ಕಾರಂತ ಪೀಠವನ್ನು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲು ನಿರ್ಧರಿಸಲಾಯಿತು. ಈ ಪೀಠದ ಸ್ಥಾಪನೆಗೆ ಅವಶ್ಯವಿರುವ ಎಲ್ಲಾ ಕ್ರಮ ಗಳನ್ನು ಪೂರೈಸಿ ಸರಕಾರದಿಂದ ಲಿಖಿತ ಅನುಮೋದನೆ ದೊರೆಯುವ ಹೊತ್ತಿಗೆ ಶಿವರಾಮ ಕಾರಂತರ ಪತ್ರ ಕೈ ಸೇರಿತು. ಕಾರಂತರ ಬಿಡಿ ಲೇಖನಗಳನ್ನೆಲ್ಲಾ ಒಟ್ಟು ಗೂಡಿಸಿ ವಿಶ್ಚವಿದ್ಯಾಲಯದಿಂದ ಪ್ರಕಟಿಸುವ ಸಾಧ್ಯತೆ ಬಗ್ಗೆ ವಿಚಾರಿಸಿದ್ದರು. ಕಾರಂತ ಪೀಠದಿಂದ ಮೊತ್ತ ಮೊದಲನೆಯದಾಗಿ ಎತ್ತಿಕೊಳ್ಳಬಹುದಾದ ಇದಕ್ಕಿಂತ ಚೆನ್ನಾದ ಇನ್ನೊಂದು ಕಾರ್ಯವಿಲ್ಲವೆಂದು ಎನಿಸಿ ಶೀಘ್ರವೇ ಅವರ ಸೂಚನೆಯನ್ನು ಸ್ವೀಕರಿಸಿರುವು ದಾಗಿ ತಿಳಿಸಿದೆ.
ಕಾರಂತರು ಬರೆದ ಪುಸ್ತಕಗಳ ಸಂಖ್ಯೆ ಸಾಕಷ್ಟಿದೆ. ಅವುಗಳಿಗೆ ಸಲ್ಲಬೇಕಾದ ಗೌರವವೂ ಸಂದಿದೆ. ಆದರೆ ಹಲವಾರು ನಿಯತ ಕಾಲಿಕೆಗಳಲ್ಲಿ, ಸನ್ಮಾನ ಗ್ರಂಥಗಳಲ್ಲಿ, ಅಪ್ರಕಟಿತ ಲೇಖನಗಳಲ್ಲಿ ಹಂಚಿ ಹೋದ ಹಾಗೂ ಎಪ್ಪತ್ತು ವರ್ಷಗಳ ಅವರ ಕೃಷಿಯಲ್ಲಿ ಹುಟ್ಟಿಕೊಂಡ ಬಿಡಿ ಲೇಖನಗಳು ಲೆಕ್ಕಕ್ಕಿಲ್ಲ. ಅವುಗಳನ್ನೆಲ್ಲಾ ಒಂದು ಗೂಡಿಸದಿದ್ದರೆ ಅವುಗಳಲ್ಲಿನ ಕಾರಂತ ದರ್ಶನ ಮುಂದಿನ ತಲೆಮಾರಿಗೆ ಕಾಣೆಯಾಗುವ ಸಂದರ್ಭವೇ ಹೆಚ್ಚು. ಆ ದಿಸೆಯಲ್ಲಿ ಕಾರಂತರ ಬಿಡಿ ಲೇಖನಗಳನ್ನೆಲ್ಲಾ ಒಂದು ಗೂಡಿಸಿ ವಿಶ್ವವಿದ್ಯಾಲಯ ಪ್ರಕಟಿಸುವುದು ಕೇವಲ ಕಾರಂತರಿಗೆ ಮರ್ಯಾದೆ ಮಾಡುವುದ ಕ್ಕಾಗಿ ಅಲ್ಲ. ಕಾಲಮಾನದ ಬದಲಾವಣೆಗಳಲ್ಲಿ, ಬೆಳವಣಿಗೆಗಳಲ್ಲಿ, ಸಂಘರ್ಷಗಳಲ್ಲಿ ಒಬ್ಬ ಚಿಂತನಶೀಲ ಪ್ರತಿಭಾನ್ವಿತ ಹಾಗೂ ಕಳಕಳಿಯ ವ್ಯಕ್ತಿ ಯಾವ ರೀತಿ ಸ್ಪಂದಿಸಿದ? ಯಾವ ರೀತಿ ವಿಚಾರಿಸಿದ? ಯಾವ ರೀತಿ ಚಿಂತನೆ, ಸ್ಪಂದನೆಯನ್ನು ಬರವಣಿಗೆಗಳಲ್ಲಿ, ಭಾಷಣಗಳಲ್ಲಿ ಅಭಿವ್ಯಕ್ತಿಸಿದ ಎನ್ನುವುದು ನಾಡಿನ ಇತಿಹಾಸದ ದೃಷ್ಟಿಯಿಂದ ಮೌಲಿಕ.
ಈ ಹಿನ್ನೆಲೆಯಲ್ಲಿ ಅವರ ಎಲ್ಲಾ ಬಿಡಿ ಲೇಖನಗಳನ್ನು ಸೇರಿಸಿ, ವಿಂಗಡಿಸಿ ಎಂಟು ಸಂಪುಟಗಳಾಗಿ 3 ವರುಷದ ಅವಧಿಯಲ್ಲಿ ಪ್ರಟಿಸಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಈಗ ಹೊರ ಬಂದಿರುವುದು ಮೊದಲನೆಯ ಸಂಪುಟ. ಈ ಸಂಪುಟದಲ್ಲಿ ವ್ಯಕ್ತಿ ಚಿತ್ರಣಗಳು ಹಾಗೂ ವಿಮರ್ಶೆಗಳು ಸೇರಿವೆ. ಈ ಲೇಖನಗಳು ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಸೀಮಿತವಾಗದೆ ಕಾರಂತರು ಭೇಟಿಯಾದ ಹಾಗೂ ಕಾರಂತರ ಬದುಕನ್ನು ಪ್ರಭಾವಿಸಿದ ಅನೇಕ ವ್ಯಕ್ತಿಗಳ ಚಿತ್ರಣವಿದೆ.
ಪುಟಗಳು: 523
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !