ಕನ್ನಡ ನುಡಿ ಮತ್ತು ಪ್ರದೇಶದ ಕುರಿತು ಎಲ್ಲಿಯೂ ಬೋರ್ ಹೊಡೆಸದೇ, ಪುನರಾವರ್ತನೆ ಮಾಡದೆ ಮಾಹಿತಿಗಳನ್ನು ನೀಡುತ್ತ, ಆಕರ ಗ್ರಂಥಗಳನ್ನು ಉಲ್ಲೇಖಿಸುತ್ತ ವಸಂತ ಶೆಟ್ಟಿಯವರು ಬರೆದಿದ್ದಾರೆ. ಪಾಕಿಸ್ತಾನ - ಬಾಂಗ್ಲಾ ವಿಭಜನೆ, ರಷ್ಯಾ ಒಡೆಯುವಲ್ಲಿ ಭಾಷೆಯ ಪಾತ್ರವನ್ನು ಚರ್ಚಿಸಿದ್ದಾರೆ.
ಬಹುಶಃ ಕನ್ನಡ ಭಾಷೆಯ ಕುರಿತು ಇಷ್ಟೊಂದು ವಿಸ್ತ್ರತವಾದ ಚರ್ಚೆ, ಆಶಾವಾದ ಹುಟ್ಟಿಸುವ, ಕನ್ನಡ ಬೆಳೆಸುವ ಕುರಿತು ವಿದ್ವತ್ಪೂರ್ಣ ಲೇಖನಗಳು ಬಂದಿದ್ದು ಬಹಳ ಕಡಿಮೆ. ನವೆಂಬರ್ ಕನ್ನಡಿಗರೇ ಅಧಿಕವಾಗುತ್ತಿರುವ ಹೊತ್ತಿನಲ್ಲಿ ಇಂತಹ ಹೊತ್ತಿಗೆಗಳು ಮಹತ್ವದ ಅಂಶಗಳನ್ನು ಹೇಳುತ್ತವೆ.
ಟೋಟಲ್ ಫೆರ್ಟಲಿಟಿ ರೇಟ್ ( ಟಿ.ಎಫ್. ಆರ್) ಗೂ ಕನ್ನಡದ ಉಳಿವಿಗೂ ಸಂಬಂಧವೇನು? ಕಲಿಕೆಯ ಮಟ್ಟದಲ್ಲಿ ಭಾರತದ ಸ್ಥಾನ ಎಲ್ಲಿದೆ ಮತ್ತು ಏಕಿದೆ? ಎಂಬಂತಹ ಅಪರೂಪದ ಅಂಶಗಳನ್ನು ಕೃತಿಯುದ್ದಕ್ಕೂ ಕಾಣಬಹುದು. ಭಾಷಾನೀತಿ, ಭಾಷೆಗೂ ಅನ್ನಕ್ಕೂ ಇರುವ ಸಂಬಂಧ ಇವು ಕೇವಲ ಬೀಸು ಬರಹಗಳಾಗಿ ಇಲ್ಲಿಲ್ಲ, ಪ್ರತೀ ಲೇಖನಕ್ಕೆ ಆಧಾರವಿದೆ. ಪಂಜಾಬಿ ರ್ಯಾಪ್ ಸಂಗೀತ, ಇಸ್ರೇಲಿನ ಬೆನ್ ಯಹೂದ್ ನಿಂದ ಕನ್ನಡಿಗರು ಕಲಿಯಬೇಕಾದ ವಿಷಯಗಳು ಏನು ಎಂಬ ಕುತೂಹಲಕಾರಿ ಸಂಗತಿಗಳಿವೆ. ಶಿರಸಿಯ ಚಂದನ ಶಾಲೆಯ ಎಂ.ಡಿ, ಎಲ್.ಎಂ. ಹೆಗಡೆಯವರ ಸಂದರ್ಶನ ಸಹ ಇಲ್ಲಿದೆ. ಹೀಗೆ ಇಡೀ ಪುಸ್ತಕ ವೈವಿಧ್ಯಮಯ ಲೇಖನಗಳನ್ನು ಹೊಂದಿದೆ.
ಕನ್ನಡದಲ್ಲೊಂದು ಜಗತ್ತಿದೆ. ಜಗತ್ತಿನಲ್ಲಿ ಕನ್ನಡವೂ ಇದೆ. ಜಾಗತೀಕರಣ, ತಂತ್ರಜ್ಞಾನದ ಕ್ರಾಂತಿಯ ಸಂದರ್ಭದಲ್ಲಿ ಕನ್ನಡದ ಮುಂದಿರುವ ಸವಾಲುಗಳು ಹಿಂದಿನ ಎರಡು ಸಾವಿರ ವರ್ಷಗಳಿಗೆ ಹೋಲಿಸಿದರೆ ಬಹಳ ಬೇರೆ ರೀತಿಯಾದದ್ದು. ಅವುಗಳನ್ನು ಎದುರಿಸುವ ದಾರಿಯೂ ಹಿಂದಿನ ಯೋಚನೆಗಳಿಗಿಂತ ಹೊರತಾಗಿರಬೇಕಾಗಿದೆ. ಪ್ರಪಂಚದ ಬೇರೆ ಬೇರೆ ನುಡಿಗಳು ಕನ್ನಡದ ಮುಂದಿರುವಂತದ್ದೇ ಸವಾಲುಗಳನ್ನು ಎದುರಿಸಿ ಗೆದ್ದ ಬಗೆಯಲ್ಲಿ ಕನ್ನಡಿಗರಿಗೆ ಪಾಠಗಳಿವೆ. ಕನ್ನಡದ ಕುರಿತ ಆಲೋಚನೆಗಳನ್ನು ಸಾಹಿತ್ಯ, ಸಿನೆಮಾದ ಆಚೆ ಚಾಚಿ ಇಪ್ಪತ್ತೊಂದನೇ ಶತಮಾನದ ಕನ್ನಡದ ಸವಾಲುಗಳನ್ನು ಎದುರಿಸುವ ಕುರಿತು ಇಲ್ಲಿ ಕೆಲವು ಚಿಂತನೆಗೆ ಒಡ್ಡುವ ಬರಹಗಳಿವೆ. ಈ ಹೊತ್ತಿಗೆ ಇಬುಕ್ ಆಗಿರುವುದರಿಂದ ಜಗತ್ತಿನ ಎಲ್ಲೆಡೆ ಹಬ್ಬಿರುವ ಕನ್ನಡಿಗರು ಕನ್ನಡದ ಬಗ್ಗೆ, ಕನ್ನಡಿಗರ ಬಗ್ಗೆ ಚಿಂತಿಸಲು, ಕನಸು ಕಾಣಲು ಇಂಬು ನೀಡಿದಲ್ಲಿ ಕೃತಿಯ ಶ್ರಮ ಸಾರ್ಥಕವಾದೀತು ಎಂಬ ಕೃತಿಕಾರರ ಮಾತು ನನ್ನ ಮಾತು ಕೂಡ.
***
ಡಾ. ಅಜಿತ್ ಹರೀಶಿ