ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ನಿಕಷಕ್ಕೆ ಒಡ್ಡಿ ನೋಡಿದರೆ, ನೀವು ಬರೆದಿರುವ ಕತೆಗಳ ಪೈಕಿ ಕೆಲವು ಕತೆಗಳಾಗಿಲ್ಲ. ಅನುಭವಗಳನ್ನು ಬಡಿದು, ಕಿವಿಹಿಂಡಿ, ಬೈದು, ಹೇಗಾದರೂ ಪಳಗಿಸಿ ಕತೆಯಾಗಿಸಲೇ ಬೇಕು ಎಂಬ ಹಟವೂ ನಿಮಗಿಲ್ಲ. ಹೀಗಾಗಿ ಎಷ್ಟು ದಕ್ಕಿದರೆ ಅಷ್ಟೇ ಕತೆಗಾರನ ಭಾಗ್ಯ ಎಂಬ ಔದಾರ್ಯದಿಂದ ನೀವು ಅವುಗಳನ್ನು ಅವುಗಳ ಪಾಡಿಗೆ ಬಿಟ್ಟುಬಿಟ್ಟಿದ್ದೀರಿ. ಈ ಮುಕ್ತತೆಯೇ ನಿಮ್ಮ ಕತೆಗಳ ಶಕ್ತಿ. ಅದು ನಿಮ್ಮ ವ್ಯಕ್ತಿತ್ವದಲ್ಲಿರುವ ಗುಣವೂ ಹೌದು.
"ಹರಿವ ತೊರೆಯ ಲಹರಿ"ಯ ಪಂಚಮನ ಅವ್ಯಕ್ತ ಪ್ರೇಮ, "ಸಂಸಾರ ಬಂಧನಾತ್" ಕತೆಯ ಚಾರ್ವಿ, ಊರ್ಮಿ ಮತ್ತು ಅಲೋಕ ನಡುವಣ ಘಟನೆ ಮತ್ತು ವಿಘಟನೆ, "ಕಿ" ಮತ್ತು "ಕ" ಪಾತ್ರಗಳ ಮಾತುಕತೆಯಲ್ಲೇ ಹುಟ್ಟುವ ಅಧ್ಯಾತ್ಮ, ಚಂದ್ರಹಾಸನ ಬದುಕಿನ ಅನ್ಯಮನಸ್ಕತೆ, "ಚಂಡೆ"ಯ ಲಯದಲ್ಲಿ ತನ್ನನ್ನು ನೀಗಿಕೊಳ್ಳುವ ಶಾಲಿನಿ, "ನಂಬಿದ ದೈವ"ದ ಸತ್ಯಕತೆ- ಹೀಗೆ ಕತೆಗಳ ವೈವಿಧ್ಯ ಗಮನ ಸೆಳೆಯುವಂತಿದೆ. "ಕಾಗೆ ಮತ್ತು ಕಡ್ಲೆಬೇಳೆ ಪಾಯಸ" ಕತೆಯಂತೂ ಸಾಂಕೇತಿಕತೆಯನ್ನು ಮೈವೆತ್ತಂತೆ ಮೂಡಿ ಬಂದಿದೆ. ಅಂಥ ಕತೆಯೊಂದನ್ನು ನಿಮಗೆ ಬರೆಯಲು ಸಾಧ್ಯವಾಯಿತಲ್ಲ ಎಂಬ ಹೊಟ್ಟೆಕಿಚ್ಚಿನೊಂದಿಗೇ ನಿಮಗೆ ಅಭಿನಂದನೆ ಹೇಳುತ್ತಿದ್ದೇನೆ.
- ಜೋಗಿ
ಕತೆಗೆ ಸೂಕ್ತವಾದ ವಸ್ತುಗಳು ನಮ್ಮ ಸುತ್ತಮುತ್ತ ಇದ್ದೇ ಇರುತ್ತವೆ. ಅವುಗಳನ್ನು ಆಯುವ ಸಾಮರ್ಥ್ಯ ಕತೆಗಾರನಿಗೆ ಬೇಕು. ಸಂತೋಷನ ಮನೆಯ-ಹಳ್ಳಿಯ- ಪರಿಸರದಲ್ಲಿ ಅಂತಹ ಸೂಕ್ತ ವಸ್ತುಗಳಿದ್ದು ಅವನಿಗೆ ಕತೆ ಬರೆಯಲು ಪೊಗದಸ್ತಾದ ವಾತಾವರಣವನ್ನು ಕಲ್ಪಿಸಿಕೊಟ್ಟಿರಬೇಕು. ಅಂತೆಯೇ ನಗರದ ಸಂಪರ್ಕಕ್ಕೆ ಬಂದ ಬಳಿಕ ಅಲ್ಲಿನ ಆಧುನಿಕ-ವ್ಯತಿರಿಕ್ತ-ವಾತಾವರಣವೂ ಬರವಣಿಗೆಯ ಮಗ್ಗುಲು ಬದಲಾಯಿಸಲು ಪೂರಕವಾಗಿದ್ದಿರಬೇಕು. ಹೀಗೆ ಇವುಗಳನ್ನು ತನ್ನ ಬರಹಕ್ಕೆ ಪೂರಕವಾಗಿ ಬಳಸಿ ಕೊಂಡದ್ದಕ್ಕೆ ಸಾಕಷ್ಟು ನಿದರ್ಶನಗಳು ಪ್ರಸ್ತುತ ಸಂಕಲನದಲ್ಲಿವೆ.
ಹಳ್ಳಿ-ನಗರದ ಸಮಪಾಕದಲ್ಲಿ ಮೇಳೈಸಿದ ಕತೆಗಳೂ ಇಲ್ಲಿವೆ. ‘ನಂಬಿದ ದೈವ’, ‘ಕಾಗೆ ಮತ್ತು ಕಡ್ಲೆಬೇಳೆ ಪಾಯಸ’, ‘ಪೈದಂಗಳೆ’, ‘ಚೆಂಡೆ’ ಮುಂತಾದ ಕತೆಗಳು ಹಳ್ಳಿಯ ಬದುಕಿಗೆ, ಅಲ್ಲಿನ ನಂಬಿಕೆಗೆ ಹೆಚ್ಚಿನ ಮಹತ್ವವನ್ನು ನೀಡಿವೆಯಾದರೆ ‘ಹೇಳಿಕೊಳ್ಳಲಾಗದ ನಾನು’, ‘ಮಧುಕರ ವೃತ್ತಿ ಎನ್ನದು’, ‘ಸಂಸಾರ ಬಂಧನಾತ್’, ‘ಚೆಂಡೆ’ ಮುಂತಾದ ಕತೆಗಳು ಗಂಡ ಹೆಂಡಿರ ನಡುವೆ ಸೃಷ್ಟಿಯಾಗುವ ಅವಿಶ್ವಾಸದ ಕುರಿತವುಗಳು. ಹಳ್ಳಿಯಲ್ಲಾಗಲಿ ನಗರದಲ್ಲಾಗಲಿ ಅವಿಶ್ವಾಸ, ವೈಮನಸ್ಸು ಒಂದೇ ತೆರನಾಗಿರುತ್ತವೆ ಎಂಬುದನ್ನು ಹೆಚ್ಚಿನ ಕತೆಗಳು ಪ್ರತಿಪಾದಿಸುತ್ತವೆ.
ಹಾಗೇನೆ ತಲೆಮಾರಿನಿಂದ ಭೂತಾರಾಧನೆಯನ್ನು ನಡೆಸಿಕೊಂಡು ಬಂದವರು ಅದರೊಳಗಿನ ಕಲಾರಾಧನೆಗಿಂತಲೂ ದೈವಾರಾಧನೆಯ ನಂಬಿಕೆಯೇ ಮುಖ್ಯವೆಂದು ಪರಿಗಣಿಸುವುದಾಗಲೀ (ನಂಬಿದ ದೈವ, ಪೈದಂಗಳೆ), ಕಾಗೆಯೊಂದು ಅಪಶಕುನದ ಸಂಕೇತವಾಗಿ ವ್ಯಕ್ತಿಯ ವ್ಯಕ್ತಿತ್ವವನ್ನು ಮೂಲೆಪಾಲು ಮಾಡುವುದಾಗಲೀ (ಕಾಗೆ ಮತ್ತು ಕಡ್ಲೆಬೇಳೆ ಪಾಯಸ), ಪುನರ್ಜನ್ಮದ ನಂಬಿಕೆಯ ಮೂಲಕ ಹುಟ್ಟಿಗೆ ಪೂರ್ವಾತ್ಮಕ ಹಿನ್ನೆಲೆ ಕಲ್ಪಿಸುವುದಾಗಲೀ (ಜನ್ಮಾಂತರ) ಮನುಷ್ಯನ ನಂಬಿಕೆಯ ಮೇಲೆ ಆಟವಾಡುವ ಸಾಧನಗಳು.
ಕೆಲವು ಕತೆಗಳು ಗುರಿ ಸಾಧಿಸುವ ಉದ್ದೇಶಕ್ಕಾಗಿ ನಾಟಕೀಯತೆಯನ್ನು ಬಳಸಿಕೊಂಡದ್ದು ಇವೆ. ಉದಾಹರಣೆಗೆ ‘ಹೇಳಿಕೊಳ್ಳಲಾಗದ ನಾನು’ವಿನಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಹೆಂಡತಿ ಹಾಗೂ ಮಗನಿಂದ ಬೇರ್ಪಟ್ಟ ಓರ್ವ ತಂದೆ ಒಂದೊಮ್ಮೆ ಅಪರಿಚಿತ ಸಮುದ್ರತೀರದಲ್ಲಿ ಅಪರಿಚಿತವಾಗಿಯೇ ಅವರನ್ನು ಸಂಧಿಸುವುದು, ತಾನು ಬರೆದಿಟ್ಟ ಆತ್ಮಚರಿತ್ರೆಯ ಹಾಳೆಯೊಂದು ಚೀಲದಿಂದ ಜಾರಿ ಗಾಳಿಯಲ್ಲಿ ಅಚಾನಕ್ಕಾಗಿ ಹಾರಿ ಆಕೆಯ ಕಾಲಬುಡಕ್ಕೆ ತಲುಪುವುದು ಇತ್ಯಾದಿ. ಆ ಮಗು ಈ ಅಜ್ಜನನ್ನು ಕಂಡು ಜನ್ಮವಾಸನೆಯೋ ಎಂಬಂತೆ ‘ಆ ಅಜ್ಜನಿಗೆ ಏನು ಕೂಡ್ತಾ ಇಲ್ಲ, ಏನಾದರೂ ಕೊಡೋಣವೇನಪ್ಪಾ’ ಎಂದು ತನ್ನ ಅಪ್ಪನಿಗೆ ಹೇಳುವುದು ಕೂಡ ನಾಟಕೀಯ ಅಂಶಗಳೆ. ಆದರೆ ಅಲ್ಲಿ ಬಳಕೆಯಾದ ಭಾಷೆ ಕಾವ್ಯಾತ್ಮಕ ರೂಪದ್ದಾಗಿದ್ದು ಓದುಗನಾದವನ ಮನಸ್ಸಿನಲ್ಲಿ ಅವರ ನಡುವೆ ನಾಟಕೀಯ ಬೆಸುಗೆ ಸಾಧಿಸುವುದು ಸಾಧ್ಯವಾದದ್ದು ಕತೆಯ ಹೆಚ್ಚುಗಾರಿಕೆ. ಅಲ್ಲಿನ ನಾಟಕೀಯತೆಯನ್ನು ಪಕ್ಕಕ್ಕೆ ತಳ್ಳಿ ಅವರ ಪರಸ್ಪರ ಊಹಾತ್ಮಕ ಮಿಲನವನ್ನು ಏರ್ಪಡಿಸಿಕೊಟ್ಟದ್ದಕ್ಕೆ ಕತೆಗಾರನಿಗೆ ಭೇಷ್ ಎನ್ನೋಣ.
ಅನುಕೂಲಸ್ಥರಾದರೂ ಬದುಕಿನಲ್ಲಿ ಎದುರಿಸಬೇಕಾದ ಜಂಜಡಗಳನ್ನು ಎದುರಿಸಿಯೇ ಸಿದ್ಧವೆಂಬ ಸಾಮಾನ್ಯ ಪ್ರಕಲ್ಪದೊಂದಿಗೆ ಹೊರಡುವ ಕತೆ ‘ಗಂಧ’. ಇದು ಹಳ್ಳಿಯನ್ನೂ ನಗರವನ್ನೂ ಪರಸ್ಪರ ಸಂಧಿಸುವಂತೆ ಮಾಡುತ್ತದೆ. ನಾಲ್ಕಾರು ಸಮಸ್ಯೆಗಳು ಏಕಕಾಲಕ್ಕೆದುರಾದಾಗ ಹೆಣ್ಣೊಬ್ಬಳು ಅದನ್ನೆದುರಿಸುವ ಬಗೆಯನ್ನಿಲ್ಲಿ ಸಂಘರ್ಷಾತ್ಮಕ ರೂಪದಲ್ಲಿ ಅನಾವರಣಗೊಳಿಸುವ ಯತ್ನ ನಡೆದಿದೆ. ಕತೆಯನ್ನು ತುಸು ಪರಿವರ್ತನೆಗೊಳಿಸಿ ಹ್ಯಾಪಿ ಎಂಡಿಂಗ್ ಕೊಡುತ್ತಿದ್ದರೆ ಕತೆಯ ಮೇಲೆ ಮತ್ತಷ್ಟು ಪ್ರೀತಿ ಬರುತ್ತಿತ್ತು. ಕತೆಯ ಪ್ರಾರಂಭಿಕ ಓಘವನ್ನು ಗಮನಿಸುವಾಗ ಇದೊಂದು ಸ್ತ್ರೀವಾದಿ ಕತೆಯಾಗಿ ರೂಪುಗೊಳ್ಳುವುದೆಂಬ ಭಾವನೆ ಉಂಟಾಗುತ್ತದೆ. ನಿರ್ಮಲಾ ಕತೆಯ ಉತ್ತರಾರ್ಧದಲ್ಲಿ ಮುಂದುವರಿಯದೆ ಮೊಟಕುಗೊಂಡು ಮುಖ್ಯ ವೇದಿಕೆಯಿಂದ ನಿರ್ಗಮಿಸುತ್ತಾಳೆ. ಸೂರ್ಯನ ಅಪ್ಪ ಶೇಖರಪ್ಪಯ್ಯರ ಬದಲಿಗೆ ನಿರ್ಮಲಾ ಮುಂದಿನ ಭಾಗವನ್ನು ನಿರ್ವಹಿಸುತ್ತಿದ್ದರೆ ಆ ಕಾರ್ಯ ಸಾಧಿತವಾಗುತ್ತಿತ್ತು.
ಅದಾದರೆ ಆಗುತ್ತಿತ್ತು, ಇದಾದರೆ ಆಗುತ್ತಿತ್ತು - ಇತ್ಯಾದಿ ಮಾತುಗಳಿಲ್ಲಿ ಕಾಣಿಸಿಕೊಂಡರೂ ಮೂಲಕತೆಯನ್ನು ಅಂತೆಯೇ ಇಟ್ಟುಕೊಂಡರೂ ಆಸ್ವಾದಿಸುವುದಕ್ಕೆ ಅಡ್ಡಿಯಿಲ್ಲ. ಒಂದು ದುರಂತ ನಾಟಕಕ್ಕೆ ಬೇಕಾಗುವ ವಸ್ತು ಕತೆಯೊಳಗೆ ಹುದುಗಿದೆ. ‘ಗಂಧ’ ಎಂಬ ಹೆಸರು ಹೊತ್ತ ಈ ಕತೆ ಹೆಸರಿಗೆ ಬೇಕಾದಷ್ಟು ನ್ಯಾಯ ಒದಗಿಸುವುದಿಲ್ಲ ವಾದರೂ ಕತೆಯನ್ನು ಕಟ್ಟಿದ ಬಗೆ, ಕತೆಯ ಶೈಲಿ ಇತ್ಯಾದಿಗಳು ಗಮನ ಸೆಳೆಯುತ್ತವೆ.
ಆದರೆ ‘ಮಧುಕರ ವೃತ್ತಿ ಎನ್ನದು’ವಿನಲ್ಲಿ ವಿಚಿತ್ರ ವ್ಯಕ್ತಿತ್ವದ ವಿಶಾಲ ಸಹನಾಶೀಲನಾದ ಮಧುಕರನೊಂದಿಗೆ ಜಟಾಪಟಿಯ ಸಂಸಾರ ನಡೆಸಿದ್ದರೂ ಮಕ್ಕಳಾಗಬೇಕೆಂಬ ಮಧುಕರನ ಹಂಬಲ ವಿಶಾಲಳ ಜೀನಿನೊಳಗಿನ ರೋಗಭೀತಿಯಿಂದ ಸಾಧ್ಯವಾಗದೆ ಹೋದ ಬಳಿಕ ಅದನ್ನೂ ಗಂಭೀರವಾಗಿಸದೆ ದತ್ತು ಸ್ವೀಕರಿಸಿ ಸಂತೋಷ ಕಂಡುಕೊಳ್ಳುವ ಮಾತನ್ನು ಮಧುಕರ ಎತ್ತುತ್ತಾನೆ. ವಿಚಿತ್ರವೆಂದರೆ ವಿಚ್ಛೇದನ ಪಡೆದು ಹೊರಡುವಾಗ ಮನೆಯ ಸಕಲ ಸರಂಜಾಮುಗಳನ್ನು ಒಯ್ದುಬಿಡುವುದು! ಪ್ರಸ್ತುತ ಚಿತ್ರಣ ಸ್ತ್ರೀವಾದಿಗಳ ಕಣ್ಣು ಕೆಂಡವಾಗುವುದಕ್ಕೆ ನಿಮಿತ್ತವಾಗಬಲ್ಲುದು ಎಂಬುದು ಒಂದು ಮಾತಾದರೆ ಹೆಣ್ಣನ್ನು ಹೀಗೂ ಚಿತ್ರಿಸಬೇಕೇ ಎಂಬುದು ಇನ್ನೊಂದು ಪ್ರಶ್ನೆ.
‘ಕಿ..ಕಾ...’ ಎನ್ನುವುದು ಆಧುನಿಕ ತಲೆಮಾರು ವೈವಾಹಿಕ ಬದುಕನ್ನು ಕಂಡುಣ್ಣುವ ಕುರಿತದ್ದಾಗಿದೆ. ಭಾರತೀಯ ಸಂಸ್ಕಾರ ಹಾಗೂ ಯೂರೋಪಿನ ಸಾಂಸಾರಿಕ ಬದುಕುಗಳ ಚಿತ್ರಣ ಇಲ್ಲಿದೆ. ಸಿದ್ಧಸೂತ್ರಗಳನ್ನು ಕಡಿಯುವ ಹುಮ್ಮಸ್ಸು ಯುವತಿಯರಲ್ಲೇ ಹೆಚ್ಚು ಅಂತರ್ಗತಗೊಂಡಿರುವಂತೆಯೂ ಈ ಕತೆ ಭಾಸ ಮಾಡಿಕೊಡುತ್ತದೆ. ನಾಟಕದ ಸಂಭಾಷಣೆಯ ರೂಪದಲ್ಲಿ ಪ್ರಸ್ತುತ ಕತೆಯಿರುವುದಕ್ಕೂ ಆಧುನಿಕ ಬದುಕಿನ ನಾಟಕೀಯತೆಗೂ ತುಲನೆ ಕಂಡುಬರುವ ರೀತಿಯಲ್ಲಿ ಕತೆಯನ್ನು ಹೊಸೆಯಲಾಗಿದೆ. ಹೇಳುವ ವಿಷಯ ಸೀಮಿತ ರೂಪದ್ದಾದರೂ ಭಾಷೆ, ಭಾವಗಳ ಮೂಲಕ ವಸ್ತುವನ್ನು ಕಟ್ಟಿಕೊಡುವ ತಂತ್ರಗಾರಿಕೆ ಇಲ್ಲಿದೆ. ಹಾಗಾಗಿ ಇದನ್ನೊಂದು ಪ್ರಯೋಗಾತ್ಮಕ ಚಿಂತನಶೀಲ ಕತೆಯೆನ್ನುವೆ.
‘ಜನ್ಮಾಂತರ’ ಕತೆಯಲ್ಲಿ ಕ್ರೈಸ್ತ ಯುವತಿ ಕೆಟ್ಟ ಕನಸಿನ ಹಿಂದಿನ ಅರ್ಥವನ್ನು ಹುಡುಕುತ್ತಾ ಹೋಗಿ, ಜ್ಯೋತಿಷ್ಯದ ಹಿಂದೆ ಬಿದ್ದು ಪುನರ್ಜನ್ಮವನ್ನು ಒಪ್ಪುವ ಮಟ್ಟಕ್ಕೆ ಬರುವಲ್ಲಿ ನಂಬಿಕೆ ಎಂಬುದು ಬಲವಾದ ಆಟ ಆಡುವುದನ್ನು ಗಮನಿಸಬಹುದು.
‘ಹರಿವ ತೊರೆಯ ಲಹರಿ’ ಎಂಬುದು ಒಂದು ಕಾವ್ಯಾತ್ಮಕ ಕತೆ. ಇಲ್ಲಿ ವಸ್ತು ಕಾವ್ಯದ ಲಯದೊಂದಿಗೆ ಮಿಳಿತಗೊಂಡು ತನ್ನ ಮಹತ್ತನ್ನು ಗೌಣವಾಗಿಸಿ ಶೈಲಿಯ, ಲಯಗಾರಿಕೆಯ ಮಹತ್ತನ್ನು ಹೆಚ್ಚಿಸಿದೆ. ‘ಚೆಂಡೆ’, ‘ಪೈದಂಗಳೆ’ ಕತೆಗಳು ಹಳ್ಳಿಯ ಪರಿಸರವನ್ನು ಮನೋಜ್ಞವಾಗಿ ಕಟ್ಟಿಕೊಡುವ ಸಂದರ್ಭದಲ್ಲಿಯೂ ಭಾಷೆ ನರ್ತನವಾಡಿದೆ.
-ಡಾ|| ನಾ. ದಾಮೋದರ ಶೆಟ್ಟಿ
ಪುಟಗಳು: 112
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !