ಮಂಡ್ಯ ಪಕ್ಕ ಇರುವ ಚಿಕ್ಮಂಡ್ಯದಿಂದ ಹುಬ್ಬಳ್ಳಿ ಪಕ್ಕದ ಹೆಬ್ಬಳ್ಳಿ ಎಂಬ ಹಳ್ಳಿಯ ಕರುನಾಡು ಗ್ರಾಮೀಣ ಬ್ಯಾಂಕಿಗೆ ಉದ್ಯೋಗಿಯಾಗಿ ಬರುವ ಯುಗಾದಿ ಗೌಡ, ಅದೇ ಬ್ಯಾಂಕಲ್ಲಿ ಕೆಲಸ ಮಾಡುತ್ತಿರುವ ವಿದ್ಯಾ ಪಾಟೀಲ್ ಜತೆ ಪ್ರೀತಿಯಲ್ಲಿ ಬೀಳುವ ಕತೆ.
ಯುಗಾದಿ ಗೌಡನಿಗೆ ಕರುನಾಡು ಗ್ರಾಮೀಣ ಬ್ಯಾಂಕಲ್ಲಿ ಕೆಲಸ ಸಿಕ್ಕಿದೆ. ಅದೇ ಬ್ಯಾಂಕಲ್ಲಿ ಕೆಲಸ ಮಾಡುತ್ತಿರುವ ವ್ಯಾಸ್ರಾಜ್ ಅನಂತ ಪದ್ಮನಾಭ ಶೆಣೈ ಕುಡ್ಲನ ರೂಮಿಗೆ ಬಂದು ಸೇರಿಕೊಳ್ಳುತ್ತಾನೆ. ಅವನ ಮನೆ ಓನರ್ ಚನ್ನಪ್ಪ ಪಾಟೀಲ್. ಅವನ ಮಗಳೇ ವಿದ್ಯಾ ಪಾಟೀಲ್. ಯುಗಾದಿ ಕೆಲ್ಸಕ್ಕೆ ಸೇರಿದ ದಿನವೇ ಶೆಣೈಗೆ ಕರ್ತವ್ಯ ಲೋಪ ಮತ್ತು ಬೇಜವಾಬ್ದಾರಿ ನಡವಳಿಕೆ ಕಾರಣಕ್ಕಾಗಿ ದಾಂಡೇಲಿಗೆ ಎತ್ತಂಗಡಿ ಮಾಡುತ್ತಾನೆ ಮ್ಯಾನೇಜರ್ ಪ್ರಕಾಶ್ ಬೇವಿನಗಿಡದ್. ಹೊಸಬ ಮಂಡ್ಯದ ಯುಗಾದಿಗೆ ಹುಬ್ಬಳ್ಳಿ ಭಾಷೆ ಸಮಸ್ಯೆ ಜತೆಗೆ ಕನಿಷ್ಠ ಪ್ಯೂನ್ ಕೂಡ ಇಲ್ಲದ ಜಾಗದಲ್ಲಿ ವಿದ್ಯಾ ಪಾಟೀಲ್ ಎಂಬ ಹುಡುಗಿಯ ಕೈಯ್ಯಲ್ಲಿ ಕೆಲಸ ಕಲಿಯುವ ಕಷ್ಟ ಬೇರೆ.
ಮದುವೆಯಾಗಿರದ ವಿದ್ಯಾ ಈಗಾಗಲೇ ೩೯ ಗಂಡುಗಳನ್ನು ರಿಜೆಕ್ಟ್ ಮಾಡಿ ಆಗಿದೆ. ವಿದ್ಯಾ ಮದುವೆ ಮಾಡಿಸುವುದೇ ಅವಳ ತಂದೆ ತಾಯಿಗೆ ಮಿಷನ್ ಇಂಪಾಸಿಬಲ್ ಆಗಿರುತ್ತದೆ. ಇಂತ ಸಂದರ್ಭದಲ್ಲಿ ಚನ್ನಪ್ಪ ಪಾಟೀಲರ ಶಿಷ್ಯ, ವಿದ್ಯಾಳ ಬಾಲ್ಯದ ಗೆಳೆಯ ಕಂ ಒನ್ ಸೈಡ್ ರೋಮಿಯೋ ಉಣಕಲ್ಲಿನ ಡಾನ್ ಪಾಪ್ಯಾ ವಿದ್ಯಾಳನ್ನು ಹೆಂಗಾದರೂ ಪಡೆಯಲೇಬೇಕೆಂದು ಪಣ ತೊಟ್ಟಿದ್ದಾನೆ. ಅವನು ಡಾನ್ ಆದರೂ ಅವಳನ್ನು ಎದುರಿಸುವ ಶಕ್ತಿ ಅವನಿಗಿಲ್ಲ. ಜತೆಗೆ ಡಾನ್ ಎಂಬ ಕಪ್ಪುಚುಕ್ಕೆ ಬೇರೆ.
ವಿದ್ಯಳಿಗೆ ಗಂಡು ಹುಡುಕಿ ಸುಸ್ತಾಗಿದ್ದ ಅಪ್ಪ ಅಮ್ಮ ಕೊನೆಗೆ ಅವಳ ಮತ್ತು ಪಾಪ್ಯಾನ ಬಾಲ್ಯ ಸ್ನೇಹಿತ ಏಎಸ್ಸೈ ಕುಮಾರ್ ಲಕ್ಷಾಪತಿ ವೀರಪ್ಪನಗೊಳ್ ಜತೆ ಹೆಂಗಾದರೂ ಮಾಡಿ ಲಗ್ನ ಮಾಡಿಸಲು ನಿರ್ಧಾರ ಮಾಡುತ್ತಾರೆ. ಅದೇ ಸಮಯಕ್ಕೆ ವಿದ್ಯಾಳಿಗೆ ಯುಗಾದಿ ಮೇಲೆ ಪ್ರೇಮಾಂಕುರವಾಗುತ್ತದೆ. ಅವಳು ತನ್ನ ಪ್ರೇಮವನ್ನು ಮನೆಯವರ ಮುಂದೆ ರಾಜಾರೋಷವಾಗಿ ಹೇಳುವಾಗಲೇ ಮಂಡ್ಯದಿಂದ ಯುಗಾದಿಯ ಅಪ್ಪ ಅಮ್ಮ ಅತ್ತೆ ಅತ್ತೆ ಮಗಳು ಬರುತ್ತಾರೆ. ಯುಗಾದಿ ಇನ್ ಶಾಕ್. ಇಂಟರ್ವಲ್.
ಮದುವೆ ಹೋಗಲಿ ಪ್ರೇಮದ ಆಲೋಚನೆಯಲ್ಲೇ ಇರದ ಯುಗಾದಿಗೆ ವಿದ್ಯಾಳ ಪ್ರೇಮ ಕಷ್ಟಕ್ಕೆ ಸಿಲುಕಿಸುತ್ತದೆ. ಎರಡೂ ಕುಟುಂಬದವರು ಸಂಬಂಧವನ್ನು ಒಪ್ಪದೇ ಶುರುವಲ್ಲೇ ಎಂಡ್ ಮಾಡಿಕೊಳ್ಳಲು ಪ್ರಯತ್ನ ಪಡುತ್ತಾರೆ. ಅಷ್ಟರಲ್ಲಿ ಯುಗಾದಿಗೆ ವಿದ್ಯಾ ಮೇಲೆ ಲವ್ ಆಗುತ್ತದೆ. ಎರಡೂ ಕುಟುಂಬಗಳನ್ನು ಒಂದು ಮಾಡುವ ಬದಲಿಗೆ ಚಾಲೆಂಜ್ ಮಾಡುತ್ತಾರೆ ಯುವ ಪ್ರೇಮಿಗಳು.
ಅದೇ ಜಿದ್ದಿಗೆ ಎರಡೂ ಕುಟುಂಬಗಳು ಸಮ್ಮಿಶ್ರ ಸರ್ಕಾರ ರಚಿಸಿ ಮಕ್ಕಳನ್ನು ದೂರ ಮಾಡಲು ಆಟಗಳನ್ನು ಆಡಲು ಶುರು ಮಾಡುತ್ತಾರೆ. ಅದಕ್ಕೆ ಪ್ರತಿಯಾಗಿ ಮಕ್ಕಳೂ ಸಹ ತಮ್ಮ ಕಮ್ಮಿ ಇಲ್ಲದಂತೆ ತಂತ್ರಕ್ಕೆ ಪ್ರತಿತಂತ್ರ ಹೂಡುತ್ತಾರೆ. ಯುವ ಪ್ರೇಮಿಗಳು ಒಂದಾಗುವುದು ಎರಡೂ ಕುಟುಂಬದವರಿಗೆ ಅಷ್ಟೇ ಅಲ್ಲದೇ ಪಾಪ್ಯಾ, ಕುಮಾರ, ಶೆಣೈ, ಪಾರೂಗೂ ಸಹ ಇಷ್ಟ ಇಲ್ಲ.
ಇಂತ ಸಂದರ್ಭದಲ್ಲಿ ಬ್ಯಾಂಕ್ ಸಾಲದ ವಿಚಾರವಾಗಿ ಯುಗಾದಿ ಮೇಲೆ ಕೋಪದಲ್ಲಿ ಕುದಿಯುತ್ತಿದ್ದ ಕೇಸರಿ ಪೈಲ್ವಾನ್ ಸಹ ಇಬ್ಬರನ್ನೂ ಕಿಡ್ನ್ಯಾಪ್ ಮಾಡಿದಾಗ ಅದನ್ನು ಮೊಟುಕು ಗೊಳಿಸಿ ಪಾಪ್ಯಾ ಮತ್ತೊಮ್ಮೆಅವರಿಬ್ಬರನ್ನು ಕಿಡ್ನ್ಯಾಪ್ ಮಾಡುತ್ತಾನೆ. ಯುವ ಪ್ರೇಮಿಗಳನ್ನು ದಾರಿಗೆ ತರಲು ಸುಪಾರಿ ಕೊಟ್ಟಿದ್ದ ಅವರ ಅಪ್ಪಂದಿರು ಮಕ್ಕಳನ್ನು ಉಳಿಸಿಕೊಳ್ಳಲು ಬರುವಾಗ ಪಾಪ್ಯಾನನ್ನೂ ಸೇರಿಸಿ ಸೋಲೋಮನ್ ಬಕ್ರಿವಾಲ ಕಿಡ್ನ್ಯಾಪ್ ಮಾಡುತ್ತಾನೆ. ಅದು ಕೊನೆಗೆ ಇನ್ಸ್ಪೆಕ್ಟರ್ ಸರ್ದಾರ್ ಸಿಂಗನ ಮುಂದೆ ನಿಲ್ಲುತ್ತದೆ.