ಪ್ರಕಾಶಕರು: ಸಂಕಥನ
Publisher: Sankathana
ಮದರ್ ತೆರೆಸಾ ಅವರ ಸಮಕಾಲಿನರಾದ ಪೋಲೆಂಡ್ ದೇಶದ ಇರೇನಾ ಸೆಂಡ್ಲರ್ ಎಂಬ ಮಹಾನ್ ತಾಯಿ ತಾನು ಹುಟ್ಟಿ ಬೆಳೆದ ನೆಲದಲ್ಲಿ ತನ್ನ ಜೀವವನ್ನು ಒತ್ತೆ ಇಟ್ಟು ಜರ್ಮನಿಯ ನಾಜಿ ಸೇನಾ ಪಡೆಯಿಂದ ಎರಡೂವರೆ ಸಾವಿರ ಯಹೂದಿ ಜನಾಂಗದ ಮಕ್ಕಳನ್ನು ರಕ್ಷಿಸುವ ಮೂಲಕ ಅಪೂರ್ವ ಸೇವೆಗೈದು ಎಲೆ ಮರೆಕಾಯಿಯಂತೆ ಬದುಕುತ್ತಾ 2008ರಲ್ಲಿ ತಮ್ಮ 98ನೇ ವಯಸ್ಸಿನಲ್ಲಿ ನಿಧನರಾದರು.
ಕಮ್ಯೂನಿಸ್ಟ್ ರಾಷ್ಟ್ರವಾಗಿದ್ದ ಪೋಲೆಂಡಿನ ವಾರ್ಸಾ ನಗರದಲ್ಲಿ 1910ರಲ್ಲಿ ಜನಿಸಿದ ಇರೆನಾ ಸೆಂಡ್ಲರ್ ತನ್ನ ತಂದೆ ತಾಯಿಗಳಿಗೆ ಏಕೈಕ ಪುತ್ರಿಯಾಗಿದ್ದು, ವೈದ್ಯರಾಗಿದ್ದ ತನ್ನ ತಂದೆಯ ಸೇವಾ ಮನೋಭಾವ ಮತ್ತು ಉದಾತ್ತ ಗುಣಗಳನ್ನು ಮೈಗೂಡಿಸಿಕೊಂಡು ಬೆಳೆದವರು. ವೃತ್ತಿಯಲ್ಲಿ ವೈದ್ಯರಾಗಿದ್ದುಕೊಂಡು ಹಾಗೂ ಕ್ಯಾಥೊಲಿಕ್ ಕ್ರೈಸ್ತ ಜನಾಂಗಕ್ಕೆ ಸೇರಿದವರಾಗಿದ್ದ ಆಕೆಯ ತಂದೆ ಅಂದಿನ ವಾರ್ಸಾ ನಗರದಲ್ಲಿ ಬದುಕಿದ್ದ ನಾಲ್ಕೂವರೆ ಲಕ್ಷ ಯಹೂದಿ ಸಮುದಾಯದ ಪಾಲಿಗೆ ಆರೋಗ್ಯ ರಕ್ಷಕರಾಗಿದ್ದರು. 1917 ರಲ್ಲಿ ವಾರ್ಸಾ ನಗರಕ್ಕೆ ಸಾಂಕ್ರಾಮಿಕ ರೋಗವೊಂದು ಹರಡಿದ ಸಂರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ಯಹೋದಿಗಳ ಶುಶ್ರೂಷೆಯಲ್ಲಿ ತೊಡಗಿಕೊಂಡಿದ್ದಾಗ, ದುರಾದೃಷ್ಟವಶಾತ್ ರೋಗದ ಸೋಂಕು ತಗುಲಿ ನಿಧನರಾದರು. ಇರೆನಾಗೆ ಆ ಸಂದರ್ಭದಲ್ಲಿ ಕೇವಲ ಏಳು ವರ್ಷ ವಯಸ್ಸಾಗಿತ್ತು.
1939ರಲ್ಲಿ ಅವರ ತಾಯ್ನಾಡಾದ ಪೋಲೆಂಡ್ ರಾಷ್ಟ್ರವನ್ನು ಎರಡನೇಯ ಮಹಾಯುದ್ಧ ಆರಂಭಗೊಂಡಾಗ ಹಿಟ್ಲರ್ ನೇತೃತ್ವದ ಜರ್ಮನೆಯ ನಾಜಿ ಸೇನಾ ಪಡೆ ತನ್ನ ತೆಕ್ಕೆಗೆ ತೆಗೆದುಕೊಂಡಿತು. ವಾರ್ಸಾ ನಗರದಲ್ಲಿ ಬದುಕಿದ್ದ ಯಹೋದಿಗಳ ಪ್ರದೇಶಕ್ಕೆ ತಡೆಗೋಡೆ, ಬೇಲಿ ನಿರ್ಮಾಣ ಮಾಡಿ ಅವರಿಗೆ ನೀರು, ವಿದ್ಯುತ್ ಹಾಗೂ ಆಹಾರ ದೊರಕದಂತೆ ಮಾಡುವುದರ ಮೂಲಕ ಕೊರೆಯುವ ಚಳಿ ಮತ್ತು ಹಸಿವಿನಿಂದ ಅಸುನೀಗುವಂತೆ ಮಾಡಿತು. ನಾಜಿಪಡೆಗಳ ಇಂತಹ ಕ್ರೂರವಾದ ಅಮಾನವೀಯ ಕೃತ್ಯಗಳಿಗೆ ಸಾಕ್ಷಿಯಾದ ಇರೇನಾ ಸೆಂಡ್ಲರ್ ಆರೋಗ್ಯ ಕಾರ್ಯಕರ್ತೆಯಾಗಿ ಅಲ್ಲಿನ ಹಸುಗೂಸುಗಳನ್ನು ಗುಟ್ಟಾಗಿ ವಾರ್ಸಾ ನಗರದಿಂದ ಹೊರಕ್ಕೆ ಸಾಗಿಸಿ ಜೀವ ಉಳಿಸಿದ್ದು ನಿಜಕ್ಕೂ ರೋಮಾಂಚನಕಾರಿಯಾದದ್ದು.
ಅವರು ಮಕ್ಕಳ ಪ್ರಾಣ ಉಳಿಸಲು ಪಟ್ಟ ಶ್ರಮ ಹಾಗೂ ಎದುರಾದ ಆತಂಕಗಳನ್ನು ನಿಭಾಯಿಸಿದ ರೀತಿಯನ್ನು ನಾವು ಈ ಕೃತಿಯನ್ನು ಓದಿ ತಿಳಿಯಬೇಕು. ಆಕೆಯ ಜೊತೆ ಕೈಗೂಡಿಸಿದ ಪತಿ, ಗೆಳೆಯರು ಮತ್ತು ಜರ್ಮನಿಯ ಸೇನಾ ಪಡೆಯ ಲಂಚಕೋರತನ ಇವೆಲ್ಲವೂ ಈ ಕೃತಿಯಲ್ಲಿ ಸವಿವರವಾಗಿ ದಾಖಲಾಗಿವೆ.
ಪುಟಗಳು: 176
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !