ಈ ಕಾದಂಬರಿ ನಮ್ಮ ದೇಶ ಸಾಗುತ್ತಿರುವ ದಿಕ್ಕಿನತ್ತ ಬೆರಳು ತೋರಿಸುತ್ತದೆ. ಪ್ರಗತಿಯ ಬೆನ್ನುಹತ್ತಿದ ಮನುಷ್ಯನಿಗೆ ಸುಖವೆನ್ನುವುದು ಕೇವಲ ಮರೀಚಿಕೆಯಷ್ಟೆ ಎಂಬ ಧ್ವನಿಗೆ ಪೂರಕವಾಗಿ ಸೃಷ್ಟಿಸಿರುವ ಪರಿಸರ ಹಾಗೂ ಪಾತ್ರಗಳು ಒಂದು ವಿಶಿಷ್ಟ ಅನುಭವವನ್ನು ಕಟ್ಟಿಕೊಡುತ್ತವೆ. ಮಳೆಯಿಲ್ಲದೆ ಪಾಳುಬಿದ್ದ ಒಂದು ಊರು ಗಣಿಗಾರಿಕೆಯಿಂದಾಗಿ ಹೇಗೆ ಇನ್ನಷ್ಟು ಅಧೋಗತಿಗಿಳಿಯಿತೆಂದು ಸೂಚಿಸುವ ಈ ಕಥನದಲ್ಲಿ ವಿಚಾರಗಳ ಒಂದು ಮೆರವಣಿಗೆಯೇ ನಡೆದುಹೋಗುತ್ತದೆ. ಇರುವುದೊಂದೇ ಭೂಮಿಯೆಂಬ ಪರಿಸರ ಪ್ರಜ್ಞೆಯ ಜೊತೆಜೊತೆಗೇ ಇಲ್ಲಿ ವಿವಿಧ ಜನಾಂಗಗಳ, ಧರ್ಮಗಳ ರಾಜಕೀಯ ಸುಳಿಗಳೂ ಇವೆ. ಮಾವೋರಿ ಮತ್ತು ಮಾರಿಯೋರಿ ಜನಾಂಗಗಳ ಚರಿತ್ರೆಯನ್ನು ವಿವರಿಸುವಾಗ ಕರಗುತ್ತಿರುವ ಓಜೋ಼ನ್ ಕವಚ, ವಿನಾಶದ ಅಂಚಿನಲ್ಲಿರುವ ರಣಹದ್ದು, ಸೊರಗುತ್ತಿರುವ ಮಧ್ಯಪ್ರಾಚ್ಯ, ಪರಮಾಣು ತ್ಯಾಜ್ಯದ ವಿಲೇವಾರಿ, ಬರಿದಾಗುತ್ತಿರುವ ಇಂಧನಮೂಲ, ಜಾಗತೀಕರಣ, ಭಯೋತ್ಪಾದನೆ, ಇವೇ ಮೊದಲಾದ ತಲ್ಲಣಗೊಳಿಸುವ ವಿವರಗಳೂ ಸೇರಿಕೊಳ್ಳುತ್ತವೆ. ಊರಿನ ಮುಖ್ಯಸ್ಥ ಮಂಜಯ್ಯ, ಗವಿಮಠದ ಶರಣಪ್ಪ, ಪ್ರೊಫೆಸರ್ ಭದ್ರಯ್ಯ, ಪೊಲೀಸ್ ಅಧಿಕಾರಿ ಮರಿಗೌಡ, ಡೆರಿಕ್ ಡಿಸೋಜಾ಼, ಜಗನ್ನಾಥ, ಶಾಸಕ ಹುಚ್ಚಪ್ಪ, ತೆರೆಮರೆಯಲ್ಲಿರುವ ಕಂದಾಯ ಮಂತ್ರಿ, ಇತ್ಯಾದಿ ಪಾತ್ರಗಳು ಕಥನದ ಸಂಭಾವ್ಯಶಕ್ತಿಯನ್ನು ಹೆಚ್ಚಿಸುವಂತೆ ವರ್ತಿಸುತ್ತವೆ.