ರಾಷ್ಟ್ರಕವಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಒಂದು ಪಾತ್ರ ಅನಲೆ. ಇದು ಮೂಲರಾಮಾಯಣದಲ್ಲಿ ಇಲ್ಲದ ಪಾತ್ರ; ಸ್ವತಃ ಕುವೆಂಪು ಅವರದೇ ಸೃಷ್ಟಿ. ಕುವೆಂಪು ಅವರ ಮಹಾಕಾವ್ಯದ ಸಂದರ್ಭದಲ್ಲಿ ಅನಲೆ ಪಾತ್ರದ ಉಗಮ-ವಿಕಾಸ-ವ್ಯಾಪ್ತಿ-ಚೌಕಟ್ಟು-ಔಚಿತ್ಯ ಮೊದಲಾದವನ್ನು ವಿವರವಾಗಿ ಚರ್ಚಿಸಲಾಗಿದೆ.
’ಅನಲ’ ಎಂದರೆ ಬೆಂಕಿ, ಅಗ್ನಿ ಎಂದರ್ಥ. ಭಾರತೀಯ ದರ್ಶನದ ಪ್ರಕಾರ ಅಗ್ನಿ ಪರಿಶುದ್ಧಕಾರಕ. (ಬದುಕಿನಲ್ಲಿ ಬೆಂದವನು ಬೇಂದ್ರೆಯಾಗುತ್ತಾನೆ!) ಇಲ್ಲಿ ಅನಲೆ ಪರಿಶುದ್ಧಕಾರಕಳಾಗಿದ್ದಾಳೆ. ರಾವಣತ್ವವನ್ನು ಆವಾಹಿಸಿಕೊಂಡಿದ್ದ ಪಾತ್ರಗಳು, ಅವಳಿಂದ ರಾಮತ್ವವನ್ನು ಆವಾಹಿಸಿಕೊಳ್ಳುತ್ತವೆ. ಅನಲೆ ತನ್ನ ಸುತ್ತಲಿನವರನ್ನೆಲ್ಲಾ ಉದ್ಧಾರಪಥದತ್ತ ಕೊಂಡೊಯ್ಯುತ್ತಾಳೆ. ಇಲ್ಲಿನ ರಾವಣ, ಶೂರ್ಪನಖಿ, ಇಂದ್ರಜಿತು ಅವರಲ್ಲದೆ ರಾಮನ ಪಾತ್ರವೂ ಕೂಡಾ ಅನಲೆ ಎಂಬ ಒರೆಗಲ್ಲಿಗೆ ಉಜ್ಜಲ್ಪಡುತ್ತದೆ!