ಇದೊಂದು ಅಂತರರಾಷ್ಟ್ರೀಯ ಬೇಹುಗಾರಿಕೆಗೆ ಸಂಬಂಧಿಸಿದ ಸಾಹಸಮಯ ಕಾದಂಬರಿ. ಭಾರತದ ಶ್ರೇಷ್ಠ ಸೀಕ್ರೆಟ್ ಏಜೆಂಟ್ ಕಾರ್ತಿಕ್ ಚೀನಾದ ಸಸ್ಯಶಾಸ್ತ್ರ ವಿಜ್ಞಾನಿ ಡಾ.ವಾಂಗ್ಸುರ ಮಗಳನ್ನು ಚೀನೀಯರಿಂದ ರಕ್ಷಿಸಲು ಪ್ಯಾರಿಸ್ಸಿಗೆ ಹೋಗುತ್ತಾನೆ. ಡಾ.ವಾಂಗ್ಸು ಎರಡು ಮಹತ್ತರ ಸಂಶೋಧನೆಗಳನ್ನು ಮಾಡಿರುತ್ತಾರೆ. ಅದರಲ್ಲಿ ಒಂದು ಅಧಿಕ ಇಳಿವರಿ ಕೊಡುವ ಭತ್ತದ ಬೆಳೆಗೆ ಸಹಾಯವಾಗುವ ದ್ರಾವಣ. ಇನ್ನೊಂದು ಎಲ್ಲಾ ಬೆಳೆಯನ್ನೂ ನಾಶ ಮಾಡುವ ದ್ರಾವಣ. ಪ್ರಾಗ್ ನಲ್ಲಿ ನಡೆಯುವ ವಿಜ್ಞಾನ ಮೇಳದಲ್ಲಿ ಮಗಳೊಂದಿಗೆ ಚೀನಾದಿಂದ ಬಂದಿರುತ್ತಾರೆ. ಸರ್ವಾಧಿಕಾರಿ ಧೋರಣೆಯ ಚೀನಾ ತಮ್ಮ ಸಂಶೋಧನೆಯನ್ನು ಬಲವಂತವಾಗಿ ಶತೃ ದೇಶಗಳ ಮೇಲೆ ಉಪಯೋಗಿಸಿ ಹಾನಿ ಮಾಡುವ ಸಾಧ್ಯತೆಯನ್ನು ಮನಗಂಡು ವಿಜ್ಞಾನ ಸಮ್ಮೇಳನದ ನಂತರ ಬೇರೊಂದು ದೇಶಕ್ಕೆ ಪಲಾಯನ ಮಾಡಲು ಹೋಗಿ ವಿಫಲರಾಗುತ್ತಾರೆ. ಮತ್ತೆ ಚೀನೀಯರ ಕೈಗೆ ಸಿಕ್ಕಿ ವಾಪಸ್ಸು ಚೀನಾಕ್ಕೆ ಮರಳುತ್ತಾರೆ. ಆದರೆ ಅವರ ಮಗಳು ತಪ್ಪಿಸಿಕೊಂಡು ಪ್ಯಾರಿಸ್ಸಿಗೆ ಹೋಗಿರುತ್ತಾಳೆ. ಅವಳನ್ನು ರಕ್ಷಿಸಿದ ನಂತರ ರಹಸ್ಯವಾಗಿ ಚೀನಾ ದೇಶಕ್ಕೆ ಟಕ್ಲಾಮಕಾನ್ ಮರುಭೂಮಿಯ ಮೂಲಕ ಪ್ರವೇಶಿಸಿ ಡಾ.ವಾಂಗ್ಸುರನ್ನೂ ರಕ್ಷಿಸಿ ಭಾರತಕ್ಕೆ ಕರೆತರುತ್ತಾನೆ. ಅನೇಕ ಸಾಹಸಮಯ ಘಟನೆಗಳು ಕಾದಂಬರಿಯಲ್ಲಿ ಹಾಸುಹೊಕ್ಕಾಗಿವೆ.