ಇಲ್ಲಿ ಅಂಕಣ ಬರಹಗಳ ಚೌಕಟ್ಟಿನ ಒಳಗೆ ದೇರ್ಲ ಅವರು ಮರಗಿಡಗಳನ್ನು ಮಾತನಾಡಿಸುತ್ತಾರೆ, ಹಸುರಿನ ಒಡನಾಡಿಗಳ ಜೊತೆಗೆ ಬೆರೆಯುತ್ತಾ ನಮ್ಮ ನಡುವಿನ ಕಾಣದ ಸತ್ಯಗಳನ್ನು ತೋರಿಸುತ್ತಾರೆ. ಇಲ್ಲಿನ ಒಂದೊ೦ದು ಅಂಕಣವೂ ಒಂದೊಂದು ಬತ್ತದ ಕಣದಂತೆ ಪೊಲಿಯನ್ನು ತುಂಬಿಕೊಂಡಿದೆ. ಪ್ರತಿಯೊಂದು ಬರಹದ ಹಿಂದೆ ವ್ಯಾಪಕ ಅಧ್ಯಯನಶೀಲತೆ ಇದೆ, ಬೆರಗುಗಣ್ಣಿನ ಶೋಧವಿದೆ, ಪ್ರೀತಿಯ ಒಡನಾಟವಿದೆ, ನಿರಾಶೆಯನ್ನು ಮೆಟ್ಟಿ ನಿಲ್ಲುವ ಛಲವಿದೆ. ಇಲ್ಲಿ ಹಸಿರು ಹೊನ್ನಿನ ಸಮಸ್ತವೂ ಭರವಸೆಯನ್ನು ಕೊಡುತ್ತದೆ. ಒಂದೊಂದು ಹಳ್ಳಿಯ ಒಬ್ಬೊಬ್ಬ ಕೃಷಿಕರ ಪ್ರಯೋಗಶೀಲತೆಯ ಸಾಧನೆಗಳು ಬೆರಗು ಮತ್ತು ಅಭಿಮಾನ ಹುಟ್ಟಿಸುತ್ತವೆ. ಸರಕಾರದ ಇಲಾಖೆಗಳು, ಕೃಷಿವಿಜ್ಞಾನ ಕೇಂದ್ರಗಳು, ಆಧುನಿಕ ಕೃಷಿ ಉಪಕರಣಗಳು ಇವೆಲ್ಲವೂ ಕೃಷಿಕರಿಗೆ ಅನ್ಯವಾಗುತ್ತಾ ಬರುವ ಸ೦ಕಥನಗಳು ನಮ್ಮ ಸರಕಾರದ ಯೋಜನೆಗಳ ಕಾಯಿಲೆಗಳನ್ನು ಬಯಲುಮಾಡುತ್ತದೆ.
ದೇರ್ಲ ಅವರ ಬರಹಗಳಲ್ಲಿ ಜೀವಂತವಾಗಿ ನಮ್ಮ ಗಮನ ಸೆಳೆಯುವ ವ್ಯಕ್ತಿಗಳು ಬಹುರೂಪಿಗಳು. ತೇಜಸ್ವಿಯವರ “ಕರ್ವಾಲೊ'ದ ಮಂದಣ್ಣನಂತಹ ಜ್ಞಾನ ಭಂಡಾರದ ಅಪೂರ್ವ ಕೃಷಿಕರು ನಮ್ಮ ಬದುಕು ಬರಹಗಳ ಹೊಸ ಭರವಸೆಯ ನಾಯಕರಂತೆ ಕಾಣಿಸಿಕೊಳ್ಳುತ್ತಾರೆ. ನಾವು ಕಾಣದ ಕೇಳದ ಹಳ್ಳಿಗಳ ಅನೇಕ ಕೃಷಿಕರು ನಮ್ಮ ನಿಜವಾದ ಮಾರ್ಗದರ್ಶಕರಾಗಿ ಆತ್ಮೀಯರಾಗುತ್ತಾರೆ.
ಡಾ। ಬಿ.ಎ. ವಿವೇಕ ರೈ
ಪುಟಗಳು: 178
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !