ಪ್ರಕಾಶಕರು: ವಂಶಿ ಪ್ರಕಾಶನ
Publisher: Vamshi Prakashana
ಫ್ರೆಡರಿಕ್ ನೀಷೆ ವಿಜ್ಞಾನಿಗಳಿಂದ, ವಿಶ್ವವಿದ್ಯಾಲಯದ ಪ್ರೊಫೆಸರುಗಳಿಂದ ಹಿಡಿದು ಸಾಮಾನ್ಯ ಓದುಗನವರೆಗೆ ಎಲ್ಲರಿಗೂ ಹಿಡಿಸುವ, ಮಾತ್ರವಲ್ಲ, ಎಲ್ಲರಿಗೂ ಪರಮಾಪ್ತನೆನಿಸುವ ಬರಹಗಾರನಾಗಿದ್ದಾನೆ.
ಕಳೆದ ನೂರೈವತ್ತು ವರ್ಷಗಳಲ್ಲಿ ಜನಿಸಿದ ಮಹಾ ಮೇಧಾವಿಗಳಲ್ಲಿ ಒಬ್ಬನಾದ ಫ್ರೆಡರಿಕ್ ನೀಷೆಯ ಬದುಕು ಸಹ ಅವನ ತತ್ವಜ್ಞಾನದಷ್ಟೇ ವಿಚಿತ್ರ ವಿರೋಧಾಭಾಸಗಳಿಂದ ಕೂಡಿದೆ. ಚರ್ಚಿನ ಪಾದ್ರಿಗಳ ವಂಶದಲ್ಲಿ ಜನಿಸಿದ ಈ ವ್ಯಕ್ತಿ ದೇವರ ಸಾವನ್ನು ಘೋಷಿಸಿದ. ಸತ್ಯ ಮತ್ತು ಸ್ವಾತಂತ್ರ್ಯಗಳನ್ನು ಆರಾಧಿಸಿದ ಒಬ್ಬ ತತ್ವಜ್ಞಾನಿ ನಾಜೀವಾದದ ಹರಿಕಾರನೆನಿಸಿದ (ಇದಕ್ಕೆ ಅವನ ತಂಗಿಗೆ ಧನ್ಯವಾದ ಹೇಳಬೇಕು!). ‘ಹೊಸ ಮನುಷ್ಯ’ನ ಅವತರಣವನ್ನು ಸಾರಿದ ಪ್ರವಾದಿ ಕೊನೆಗೆ ಮಾನಸಿಕವಾಗಿ ಅಸ್ವಸ್ಥನಾದ ತನ್ನ ಬದುಕಿನ ಕೊನೆಯ ದಿನಗಳನ್ನು ಕತ್ತಲೆಯಲ್ಲಿ ಕಳೆದ.
ಈ ಕೃತಿಯು ಪ್ರಧಾನವಾಗಿ ರೊನಾಲ್ಡ್ ಹೇಮನ್‍ನ ‘ನೀಷೆ: ಎ ಕ್ರಿಟಿಕಲ್ ಲೈಫ್’ (ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್, ನ್ಯೂಯಾರ್ಕ್, 1980), ವಾಲ್ಟರ್ ಕಾಫ್‍ಮನ್‍ನ ‘ನೀಷೆ: ಫಿಲಾಸಫರ್, ಸೈಕಾಲಜಿಸ್ಟ್, ಆಂಟಿಕ್ರೈಸ್ಟ್’ (ಪ್ರಿನ್ಸ್‍ಟನ್ ಕ್ಲಾಸಿಕ್ಸ್, ನಾಲ್ಕನೆಯ ಆವೃತ್ತಿ 1974) ಕರ್ಟಿಸ್ ಕೇಟ್‍ರ ‘ಫ್ರೆಡರಿಕ್ ನೀಷೆ’ (ಓವರ್‍ಲುಕ್ ಬುಕ್ಸ್, 2002) ಎಂಬ ಜೀವನ ಚರಿತ್ರೆಗಳನ್ನು ಆಧರಿಸಿವೆ.
“ಕನ್ನಡ ಸಾಹಿತ್ಯ ಲೋಕಕ್ಕೂ ವೈಚಾರಿಕ ಲೋಕಕ್ಕೂ ಅತ್ಯಂತ ಅಗತ್ಯವಾಗಿದ್ದ ನೀಷೆಯ ಬಗೆಗಿನ ಒಂದು ಒಳ್ಳೆಯ ಕೃತಿಯನ್ನು ವಾಸುದೇವಮೂರ್ತಿ ಕೊಟ್ಟಿದ್ದಾರೆ. ಕ್ರೈಸ್ತಧರ್ಮಕ್ಕೆ ವಿರೋಧವಾಗಿ ನಿಂತ ಈ ನೀಷೆ ಪಾಶ್ಚಾತ್ಯ ಪ್ರಪಂಚದಲ್ಲಿ ಒಂದು ಹೊಸ ವೈಚಾರಿಕತೆ ಹುಟ್ಟಿಸಿದವನು. ನಮ್ಮ ಎಲ್ಲ ಭಾವುಕ ಸುಳ್ಳುಗಳಿಂದ, ಅನುಭಾವದ ವಂಚನೆಗಳಿಂದ, ಆಧ್ಯಾತ್ಮಿಕ ಕಲ್ಪನೆಗಳಿಂದ ಹೊರಬಂದವನು. ನಮ್ಮನ್ನು ಬೆಚ್ಚಿಸಿ ನಮ್ಮ ಒಳಗನ್ನು ಕನಿಕರವಿಲ್ಲದಂತೆ ಕಾಣಿಸುವ ಈ ದೃಷ್ಟಾರ ನಮ್ಮನ್ನು ಬಿಡುಗಡೆಗೆ ಹುಡುಕುವಂತೆ ಎಲ್ಲ ಧರ್ಮಗಳನ್ನು ಪರೀಕ್ಷಿಸಬಲ್ಲವನು. ಕೆಲವೊಮ್ಮೆ ಇವನನ್ನು ಓದಿದವರು ತಮ್ಮ ಮನಸ್ಸಿನಲ್ಲೇ ನಿಜವೆಂದುಕೊಂಡರೂ ಹೊರಗೆ ಅದನ್ನು ಒಪ್ಪಿಕೊಳ್ಳದವರಾಗಿರುತ್ತಾರೆ. ಹೀಗೆ ನಮಗೆ ನಮ್ಮಿಂದಲೇ ಗುಪ್ತವಾದ ಲೋಕಕ್ಕೆ ಪ್ರವೇಶ ಕೊಡಬಲ್ಲ ದಾನವ ಗುರು ಈ ನೀಷೆ”
-ಯು.ಆರ್. ಅನಂತಮೂರ್ತಿ