ಕನ್ನಡ ಕಥೆಗಳ ಸುಗ್ಗಿ ಕಾಲದಲ್ಲಿ ಅನಿರೀಕ್ಷಿತಗಳ ಹೂರಣ, ವಾಸ್ತವವನ್ನು ಮುಖಕ್ಕೆ ರಾಚುವಂತೆ ತೆರೆದಿಡುತ್ತಾ, ಭಾವಾನುಭೂತಿಗಳ ಹಿಂದೆ ಅಡಗಿರಬಹುದಾದ ಕಹಿಸತ್ಯಗಳನ್ನು ನಮಗೆ ಅನುಸಂಧಾನ ಮಾಡಿಸುತ್ತಾ ಸಾಗುವ ಕತೆಗಳ ಲೇಖಕಿ ಮೇಘನಾ ಕಾನೇಟ್ಕರ್ ಕನ್ನಡದ ಸುಲಲೀತ ಬಳಕೆಯಲ್ಲಿ ಗೆದ್ದಿದ್ದರೆ, ನಮ್ಮೊಂದಿಗೆ ಸಾಗುತ್ತಲೇ ಇರುವ ನೈಜ ಘಟನಾವಳಿಗಳನ್ನು ಕತೆಯ ರೂಪಕ್ಕೆ ತಿರುಗಿಸುತ್ತಾ ಓದುಗರನ್ನು ಹಿಡಿದಿಡುವ ತಂತ್ರ ಇಲ್ಲಿನ ಹೆಚ್ಚುಗಾರಿಕೆ.
ಕಥನ ಪ್ರಕಾರದಲ್ಲಿ ಕಥನ ಶೈಲಿ ಮತ್ತು ವಸ್ತು ಪ್ರಮುಖ ಪಾತ್ರವಹಿಸುವಾಗ ಅವನ್ನೆಲ್ಲ ತಕ್ಕಷ್ಟೇ ಗಣಿಸುತ್ತಲೇ ಸಾಂದರ್ಭಿಕವಾಗಿ ಕತೆ ಹೆಣೆಯುವ ಲೇಖಕಿ, ಎಲ್ಲೋ ಮಸ್ತಿಷ್ಕದಲ್ಲಿದ್ದ ಪಾತ್ರವೊಂದಕ್ಕೆ ಚಕ್ಕನೆ ಜೀವ ತುಂಬಿ ನಿಲ್ಲಿಸುವ ಪರಿ ವಿಭಿನ್ನ. ಶೈಲಿ ಮತ್ತು ವಸ್ತುವನ್ನು ಬಳಸಿಕೊಳ್ಳುವುದರ ಜತೆಗೆ ಫ್ಯಾಂಟಸ್ಸಿಯನ್ನು ಬೆರೆಸುವ ಕಥನಗಾರಿಕೆ ಕನ್ನಡದಲ್ಲಿ ಆಗೀಗ ಸದ್ದು ಮಾಡಿದೆಯಾದರೂ ಆದನ್ನು ತಾಂತ್ರಿಕವಾಗಿ ದುಡಿಸಿಕೊಂಡವರು ಕಡಿಮೆ. ಬರೆಯುತ್ತಲೇ ಅಂಥದ್ದೊಂದು ಸಾಧ್ಯತೆಯತ್ತ ಪ್ರಯತ್ನ ನಡೆಸಿದ ಪ್ರಾಯೋಗಿಕ ಅಂಶ ಎದ್ದು ಕಾಣುತ್ತದೆ.
ಒಂದಷ್ಟು ಭಾವಪೂರಿತ ಜಿಜ್ಞಾಸೆ, ಮತ್ತಿಷ್ಟು ನೈಜತೆ ಜತೆಗೆ ಜೀವನದ ಕಹಿಸತ್ಯಗಳ ಅನಾವಣರಗೊಳಿಸುತ್ತಾ, ಇದೆಲ್ಲ ನಮ್ಮದೇನಾ ಎನ್ನುವಂತೆ ಬರೆಯುವ ಲೇಖಕಿಯಿಂದ ಕನ್ನಡ ಸಾಹಿತ್ಯಕ್ಕೆ ಇನ್ನಿಷ್ಟು ಸಮರ್ಥ ಬರಹಗಳು ಸಲ್ಲಲಿ ಎಂದು ಹಾರೈಸುತ್ತಾ,
- ಸಂತೋಷಕುಮಾರ ಮೆಹೆಂದಳೆ
ಕಾದಂಬರಿಕಾರ ಮತ್ತು ಅಂಕಣಕಾರ.