ಮನುಷ್ಯನ ಪ್ರಗತಿ ಸಮಾಜವನ್ನು ಬದಲಿಸುತ್ತದೆ. ಅವನ ಬುದ್ಧಿಯಲ್ಲಾಗುವ ಬೆಳವಣಿಗೆ, ಅವನ ಆಲೋಚನೆಗಳ ವಿಸ್ತಾರ, ಕಲಿಯುವ ವಿದ್ಯೆಗಳೆಲ್ಲವೂ ಅವನನ್ನು ಸುತ್ತಲಿನ ಸಮಾಜದಲ್ಲಿ ಒಂದು ವಿಶಿಷ್ಟವಾದ ಸ್ಥಾನದಲ್ಲಿ ನಿಲ್ಲಿಸುವುದಲ್ಲದೆ, ಸಮಾಜವೂ ಒಂದು ವಿಶಿಷ್ಟವಾದ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಆದರೆ ಇಂತಹ ಸಮಾಜದಲ್ಲಿ ಕೇವಲ ಒಳ್ಳೆಯ ಅಂಶಗಳು ಮಾತ್ರ ಇರುತ್ತವೆಯೇ? ಕೆಟ್ಟ ಅಂಶಗಳು ಇರುವುದಿಲ್ಲವೆ? ಉದಾಹರಣೆಗೆ, ಏಳಿಗೆಯ ಪಥದಲ್ಲಿ ಸಾಗುವ ಮನುಷ್ಯ ಕೆಲವೊಮ್ಮೆ ಪ್ರಾಣಿಗಳ ಜೊತೆ ಇರುವ ತನ್ನ ಸಂಬಂಧಗಳನ್ನು ಮರೆತುಬಿಡುತ್ತಾನೆ. ಈ ಪುಸ್ತಕದಲ್ಲಿ ಬರುವ ಒಂದು ಕತೆ ಬಸ್ಟ್ಯಾಂಡ್ ಪ್ರೇಯಸಿಯಲ್ಲಿ ನೀವು ಇದೇ ಘಟನೆಯನ್ನು ನೋಡುವಿರಿ. ನಾನೀಗ ಹೇಳಿದ್ದು ಕೇವಲ ಒಂದು ಉದಾಹರಣೆಯಾಗಿದ್ದು ಮತ್ತು ಒಂದು ಕತೆಯ ಅಂಶವಾಗಿದ್ದರೂ ಈ ಸಂಕಲನದಲ್ಲಿರುವ ಏಳೂ ಕತೆಗಳು ಏಳು ಅಂಶಗಳನ್ನು ಹೇಳುತ್ತವೆ. ಸಾಮಾಜಿಕ, ಆರ್ಥಿಕ, ಬೌದ್ಧಿಕ ಬೆಳವಣಿಗೆಗಳು ಮನುಷ್ಯನ ಜೀವನದಲ್ಲಿ ಎಷ್ಟು ಮುಖ್ಯವೋ? ಅಷ್ಟೇ ಮುಖ್ಯ - ಮನುಷ್ಯನ ಮೂಲಭೂತ ಗುಣಗಳ ಮತ್ತು ಸಂಸ್ಕೃತಿಯ ರಕ್ಷಣೆ.