’ದೇವಕಾರು’ ಕನ್ನಡದಲ್ಲಿ ಬಂದಂತಹ ಒಂದು ಅಪರೂಪದ ಅಭಿವೃದ್ಧಿ ಪತ್ರಿಕೋದ್ಯಮದ ಕೃತಿ ಎನ್ನಬಹುದು. ಇದನ್ನು ಒಂದು ಮಾದರಿ ಕೃತಿ ಎಂದು ಕೂಡ ಪರಿಗಣಿಸಬಹುದು. ಇಲ್ಲಿನ ಲೇಖನಗಳು ಎಂತಹ ಓದುಗರನ್ನಾದರೂ ಯೋಚನೆಗೆ ಹಚ್ಚುತ್ತವೆ ಮತ್ತು ನಮ್ಮ ವ್ಯವಸ್ಥೆಯ ಅಧೋಗತಿಯ ಕುರಿತು ಚಿಂತಿಸುವಂತೆ ಮಾಡುತ್ತವೆ. ಇಲ್ಲಿ ಹಳ್ಳಿಗಳೇ ಕಳೆದುಹೋಗುವ ಕಥೆಯಿದೆ. ಅಂತಹ ಕಳೆದುಹೋದ ಹಳ್ಳಿಗಳಲ್ಲಿ ಇನ್ನೂ ಮನುಷ್ಯರು ಜೀವಂತವಾಗಿಯೇ ಇದ್ದು ಇಲ್ಲದಂತಿದ್ದಾರೆ.
- ಸತೀಶ್ ಚಪ್ಪರಿಕೆ
ಕಳೆದ ಐದು ವರ್ಷಗಳ ಅವಧಿಯಲ್ಲಿ ನಾನು ನನ್ನ ಕೈಲಾದ ಮಟ್ಟಿಗೆ ನಡೆಸಿದ ಜನಪರ ಪತ್ರಿಕೋದ್ಯಮದ ವಿವಿಧ ಮುಖಗಳು ಇಲ್ಲಿವೆ. ಈಗಾಗಲೇ ಪ್ರಕಟಗೊಂಡಿರುವ ಇಲ್ಲಿನ ಎಲ್ಲ ಲೇಖನಗಳನ್ನು ಈ ಕೃತಿಯ ಆಶಯಕ್ಕೆ ಅನುಗುಣವಾಗಿ ಪೂರಕ ಮಾಹಿತಿಗಳೊಂದಿಗೆ ಹಿಗ್ಗಿಸಲಾಗಿದೆ. ಇವುಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಆದ್ದರಿಂದ ಮೂಲ ಲೇಖನಗಳಿಗೂ, ಇಲ್ಲಿರುವ ಒಂಬತ್ತು ಲೇಖನಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಇಲ್ಲಿನ ಲೇಖನಗಳು ಮುಂದಿನ ಪೀಳಿಗೆಯ ಪತ್ರಕರ್ತರಿಗೆ ಸ್ಫೂರ್ತಿ ತುಂಬಲಿ, ಈಗಿನ ಪೀಳಿಗೆಯನ್ನು ಸ್ವಲ್ಪ ಮಟ್ಟಿಗೆ ಎಚ್ಚರಿಸಲಿ ಎಂಬ ಪ್ರಾಮಾಣಿಕ ಆಶಯ ನನ್ನದು. ಇಲ್ಲಿ ಇನ್ನೊಂದು ಮಾತನ್ನು ಸ್ಪಷ್ಟಪಡಿಸಲು ಇಚ್ಚಿಸುತ್ತೇನೆ. ಭಾರತೀಯ ಮಾಧ್ಯಮ ಲೋಕದಲ್ಲಿ ಮಾನವೀಯ ಅಥವಾ ಜನಪರ ವರದಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ನಾನು ಹೇಳುತ್ತಿಲ್ಲ. ಆದರೆ, ಅವಕ್ಕೆ ನಿಜವಾಗಿಯೂ ದೊರಕಬೇಕಾದ ಪ್ರಾಶಸ್ಯ ದೊರಕುತ್ತಿಲ್ಲ ಎನ್ನುವುದು ನನ್ನ ಕಾಳಜಿ. ಆಗಾಗ ಇಂತಹ ವರದಿ ಅಥವಾ ಲೇಖನಗಳು ಅಲ್ಲೊಂದು-ಇಲ್ಲೊಂದು ಪ್ರಕಟವಾಗುತ್ತವೆ. ಆದರೆ, ಇಂತಹ ಬರಹಗಳನ್ನು ಯಾರೂ ನಿರಂತರವಾಗಿ, ಪ್ರಾಶಸ್ತ್ಯ ನೀಡಿ ಪ್ರಕಟಿಸುವುದಿಲ್ಲ. ಒಬ್ಬ ಪತ್ರಕರ್ತ ಬೆನ್ನು ಹಿಡಿದ ಬೇತಾಳದಂತೆ ಇಂತಹ ವಿಷಯಗಳ ಮೇಲೆ ತನ್ನ ಗಮನ ಕೇಂದ್ರೀಕರಿಸುವುದಿಲ್ಲ. ಅದು ಇಂದಿನ ತುರ್ತು, ಈ ಹಿನ್ನೆಲೆಯಲ್ಲಿಯೇ ಜನಪರ ಪತ್ರಿಕೋದ್ಯಮದ ಹೊಸ ಯುಗ ಭಾರತದಲ್ಲಿ ಆರಂಭವಾಗಲಿ, ಅದಕ್ಕೆ ಕನ್ನಡ ಪತ್ರಿಕೋದ್ಯಮ ಮುನ್ನುಡಿ ಬರೆಯಲಿ ಎಂಬ ಪ್ರಾಮಾಣಿಕ ಕಳಕಳಿಯೊಂದಿಗೆ ನಿಮ್ಮನ್ನು 'ದೇವಕಾರಿ’ಗೆ ಕರೆದುಕೊಂಡು ಹೋಗುತ್ತಿದ್ದೇನೆ.
ಸತೀಶ್ ಚಪ್ಪರಿಕೆ
ಪುಟಗಳು: 100
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !