ಬರಹಗಾರ: ಪೂರ್ಣಚಂದ್ರ ತೇಜಸ್ವಿ
ಆಫ್ರಿಕಾ ಖಂಡ ಅವರ್ಣನೀಯ ವೈವಿಧ್ಯತೆ ಮತ್ತು ಕೌತುಕಗಳ ತವರು.
ಆಫ್ರಿಕಾದಲ್ಲೇ ಏಕೆ ಇಷ್ಟೊಂದು ವೈವಿಧ್ಯತೆ! ಮನುಷ್ಯ ಸಹ ಆಫ್ರಿಕಾದಲೇ ಏಕೆ ಉದ್ಭವಿಸಿದ ?
ಈ ಪ್ರಶ್ನೆಗಳಿಗೆಲ್ಲಾ ನಾವು ನಮ್ಮ ಭೂಗೋಲದಲ್ಲಿ ಸಂಭವಿಸಿದ ಅನೇಕ ಆಗುಹೋಗುಗಳಲ್ಲಿ
ಉತ್ತರ ಹುಡುಕಬೇಕಾಗುತ್ತದೆ. ಅಮೆರಿಕಾ, ಯೂರೋಪ್, ಮತ್ತು ಏಷ್ಯಾಗಳಲ್ಲೂ
ಆಫ್ರಿಕಾದಷ್ಟೇ ವೈವಿಧ್ಯಮಯವಾದ ಪ್ರಾಣಿ ಸಂಕುಲಗಳಿದ್ದುದು ಅಲ್ಲೆಲ್ಲಾ ದೊರೆಯುತ್ತಿರುವ
ತುಪ್ಪಟದ ಮಾಮತ್‌ಗಳಿಂದ, ತುಪ್ಪಟದ ಬೃಹದಾಕಾರದ ಆನೆಗಳಿಂದ, ಉದ್ದ ಕೋರೆದಾಡೆಗಳ ಹುಲಿಗಳಿಂದ ಇನ್ನೂ ನಾವು ಕಂಡು ಕೇಳಿಲ್ಲದ ತರತರದ ಪ್ರಾಣಿಗಳ ಪಳೆಯುಳಿಕೆಗಳಿಂದ ತಿಳಿಯುತ್ತದೆ. ಇವೆಲ್ಲಾ ನಿರ್ನಾಮವಾಗಲು ಬಹು ಮುಖ್ಯ ಕಾರಣ ಭೂಮಂಡಲದ ಮೇಲೆ ಆಗಿಂದಾಗ್ಗೆ ಪುನರಾವರ್ತನೆಯಾಗುವ ಹಿಮಯುಗ. ಆಫ್ರಿಕಾದಲ್ಲಿ ಮನುಷ್ಯ ಉದ್ಭವಿಸಲೂ ಬೇರೆ ಎಲ್ಲೆಡೆ ಕವಿದಿದ್ದ ಅಗಾಧ ಮಂಜಿನ ಚಪ್ಪಡಿಗಳೇ ಕಾರಣ. ಹಿಮ ಹಿಂದೆ ಸರಿಯುತ್ತಾ ಹೋದಂತೆ ವಿಕಾಸವಾಗುತ್ತಾ ಬಂದ ಮನುಷ್ಯ ಜಗತ್ತಿನ ಇತರೆಡೆಗಳಿಗೆ ನಿಧಾನವಾಗಿ ವಲಸೆ ಹೋಗಿರುವುದು ಪಳೆಯುಳಿಕೆಗಳ ಅಭ್ಯಾಸದಿಂದ ಗೊತ್ತಾಗುತ್ತದೆ. ಪರಿಸರವನ್ನು ಸೃಷ್ಟಿಸಿದ ಪ್ರಕೃತಿಯೇ ಪರಿಸರವನ್ನು ನಿರ್ನಾಮ ಮಾಡಿದೆ!
ವಿನಾಶದ ಅಂಚಿನಲ್ಲಿರುವ ಅನೇಕ ಜೀವ ಸಂಕುಲಗಳನ್ನುಳಿಸಲು ನಾವೆಲ್ಲಾ
ಯತ್ನಿಸುತ್ತಿದ್ದರೂ, ಎಲ್ಲಾ ಜೀವ ಸಂಕುಲಗಳಿಗೂ ಒಂದು ಆಯುಸ್ಸು, ನಿಶ್ಚಿತ ಕಾಲಾವಧಿ
ಪ್ರಕೃತಿ ನಿಗದಿ ಮಾಡಿದೆಯೇ ? ಹಾಗಿದ್ದರೆ ನಾವು ಇನ್ನೆಷ್ಟು ಕಾಲ ? ನಮ್ಮ ಬುದ್ಧಿಶಕ್ತಿ
ತಿಳುವಳಿಕೆಗಳು ನಮಗೆ ಸಹಾಯ ಮಾಡುವುದಿಲ್ಲವೆ ? ಇದಕ್ಕೆ ನನ್ನ ಬಳಿಯಂತೂ ಸಧ್ಯಕ್ಕೆ
ಉತ್ತರವಿಲ್ಲ!
ಭೀಕರ ಹಿಮಯುಗದಲ್ಲಿ ಪಾರಾದ ಖಂಡಗಳೆಂದರೆ ದಕ್ಷಿಣ ಅಮೆರಿಕಾದ ಕೆಲವು
ಭಾಗ ಮತ್ತು ಆಫ್ರಿಕಾ. ಆದ್ದರಿಂದಲೇ ಅಲ್ಲಿ ಇಷ್ಟೊಂದು ವೈವಿಧ್ಯಮಯ ಜೀವ ಸಂಕುಲಗಳು
ನೆಲೆಗೊಂಡಿವೆ. ಈ ಪುಸ್ತಕ ಆಫ್ರಿಕಾದ ಅಚ್ಚರಿಗಳ ಮೇಲೆ ಹೆಚ್ಚು ಕೇಂದ್ರೀಕರಿಸಿರುವುದನ್ನು
ನೋಡಬಹುದು.
- ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಸರಣಿಯ ಹನ್ನೆರಡನೆಯ ಪುಸ್ತಕ 'ದೇಶವಿದೇಶ - 4 '.
ಪುಟಗಳು: 100
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !