ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಡಾ. ಭವೇಶ್ ಭಾಟಿಯಾ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಭವೇಶ್ ಚಂದುಭಾಯ್ ಭಾಟಿಯಾ ಅವರು ದೃಷ್ಟಿ ವಿಕಲಚೇತನ ಉದ್ಯಮಿ ಮತ್ತು ಭಾರತದ ಮಹಾರಾಷ್ಟ್ರದ ಮಹಾಬಲೇಶ್ವರ ಮೂಲದ ಸನ್ರೈಸ್ ಕ್ಯಾಂಡಲ್ಸ್ ಸ್ಥಾಪಕರಾಗಿದ್ದಾರೆ. ಸನ್ರೈಸ್ ಕ್ಯಾಂಡಲ್ಸ್ ಎನ್ನುವುದು ಮೇಣದಬತ್ತಿ ತಯಾರಿಸುವ ಕಂಪನಿಯಾಗಿದ್ದು, ದೃಷ್ಟಿ ವಿಕಲಚೇತನರು ಇದನ್ನು ನಡೆಸುತ್ತಾರೆ.
- ವಿಕಿಪೀಡಿಯಾ
ಆ ದಿನ ಶಾಲೆಯಿಂದ ಮನೆಗೆ ಬಂದದ್ದೇ ಚೀಲವನ್ನು ಒಗೆದು ಬಿಸಾಡಿ ಭಾವೇಶ್ ಜೋರಾಗಿ ಅಳತೊಡಗಿದ. ಆಗಿನ್ನೂ ಭಾವೇಶ್ ಒಂದನೇ ತರಗತಿಯಲ್ಲಿದ್ದ. ತಾಯಿ, ಆತನ ಕಾಲಿನ ಬೂಟುಗಳನ್ನು ತೆಗೆದು ಸಮಾಧಾನದಿಂದ ಕೇಳಿದಳು ‘ಏನಾಯಿತು ಮಗೂ? ಇವತ್ತು ಯಾರ ಜೊತೆಯಲ್ಲಾದರೂ ಜಗಳ ಆಡಿದೆಯಾ?’ ಭಾವೇಶ್ ಅಳುತ್ತಾ ಅಮ್ಮನಿಗೆ ಹೇಳಿದರು ‘ನಾಳೆಯಿಂದ ನಾನು ಶಾಲೆಗೆ ಹೋಗುವುದಿಲ್ಲ. ಎಲ್ಲರೂ ನನ್ನನ್ನು ಕುರುಡ ಕುರುಡ ಎಂದು ಚುಡಾಯಿಸುತ್ತಾರೆ’. ಹೇಳುತ್ತಾ ಹೇಳುತ್ತಾ ದುಃಖ ಉಮ್ಮಳಿಸಿ ಬಂತು. ಇಡೀ ಬ್ರಹ್ಮಾಂಡದಲ್ಲಿ ತನಗಿಂತ ದುಃಖಿಗಳಿಲ್ಲ ಅನಿಸಿ ಅಮ್ಮನ ಮಡಿಲಲ್ಲಿ ತಲೆ ಇಟ್ಟು ಬಿಕ್ಕಿ ಬಿಕ್ಕಿ ಅತ್ತ.
ತಾಯಿ ತಮ್ಮ ಸೀರೆಯ ಸೆರಗಿನಿಂದ ಭಾವೇಶನ ಕಣ್ಣುಗಳಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಕಂಬನಿಯನ್ನು ಒರೆಸುತ್ತಾ ಹೇಳಿದಳು ‘ನೋಡು ಮರಿ, ನಮಗೆಲ್ಲ ಗೊತ್ತಿದೆ ಅಲ್ಲವೆ, ಹುಟ್ಟಿದಾಗಿನಿಂದ ನಿನ್ನ ಎರಡೂ ಕಣ್ಣುಗಳ ದೃಷ್ಟಿ ಬಹಳ ಕ್ಷೀಣವಾಗಿದೆ. ವೈದ್ಯರ ಪ್ರಕಾರ ನೀನು ಜೀವನದುದ್ದಕ್ಕೂ ಪುಸ್ತಕ ಅಥವಾ ಕಪ್ಪು ಹಲಗೆಯ ಮೇಲೆ ಬರೆದದ್ದನ್ನು ಓದಲಾರೆ. ನಿನಗಿರುವ ಕಣ್ಣಿನ ತೊಂದರೆ ಬಹಳ ಅಪರೂಪದ್ದು. ನಿನ್ನ ಎರಡೂ ಕಣ್ಣುಗಳ ಅಕ್ಷಿಪಟ ಕಲೆಗಳಿಂದ ತುಂಬಿ ಹೋಗಿದೆ. ಹಾಗಾಗಿಯೇ ನಿನ್ನ ಕಣ್ಣುಗಳಲ್ಲಿ ಕಾಣುವ ಚಿತ್ರಗಳ ಪ್ರತಿಬಿಂಬ ಮೂಡುವುದಿಲ್ಲ. ಇದರೊಡನೆ ನಿನ್ನ ಕಣ್ಣುಗಳಿಂದ ಮಿದುಳಿಗೆ ಹೋಗುವ ನರಗಳು ಮುದುಡುತ್ತಿವೆ. ಇದಕ್ಕೆ ಇಂದು ಇಡೀ ಪ್ರಪಂಚದಲ್ಲಿ ಯಾವ ಚಿಕಿತ್ಸೆಯೂ ಇಲ್ಲ ಮಗು’. ಇಷ್ಟೆಲ್ಲ ಮಗನ ಕಣ್ಣುಗಳ ಪರಿಸ್ಥಿತಿಯನ್ನು ಪೂರ್ಣರೂಪದಲ್ಲಿ ಆತನಿಗೆ ವಿವರಿಸಿ, ನಂತರ ಅಮ್ಮ ಹೇಳಿದ ಮಾತುಗಳು ಆತನ ಬದುಕಿನುದ್ದಕ್ಕೂ ದಾರಿದೀಪವಾದವು. ‘ಭಾವೇಶ್ ಒಂದು ಮಾತನ್ನು ಜೀವನ ಪೂರ್ತಿ ನೆನಪಿನಲ್ಲಿ ಇಟ್ಟುಕೊ. ನಿಜ, ನೀನು ಈ ಪ್ರಪಂಚವನ್ನು ನೋಡಲಾರೆ. ಅದಕ್ಕಾಗಿ ಮನಸ್ಸು ಖಿನ್ನವಾಗುವುದು ಬೇಡ. ಜೀವನದಲ್ಲಿ ಅಂತಹದೇನಾದರೂ ಮಾಡಲು ಪ್ರಯತ್ನಿಸು, ಇಡೀ ಜಗತ್ತು ಎದ್ದು ಕುಳಿತು ನಿನ್ನನ್ನು ನೋಡಲು ಆರಂಭಿಸುತ್ತದೆ’ ಅಮ್ಮ ಹೇಳಿದ್ದಳು.
ಪುಟಗಳು: 268
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !