ದಟ್ಟ ಅಡವಿಯ ಘನತೆ ಮತ್ತು ಸೌಂದರ್ಯಕ್ಕೆ ಸಾವಿರದ ಹೊಗಳಿಕೆ, ವಿವರಣೆ ಇರಬಹುದು, ಆದರೆ ಈ ಅಡವಿಯ ಘನತೆಗೆ ಕಾರಣವಾದ ಮಣ್ಣಿನೊಳಗೆ ಕಾಣದೇ ಇರುವ ಮರಗಳ ಬೇರುಗಳ ಗೋಳು ಕೇಳುವವ ರಾರು? ಸಮಾಜ, ಪ್ರಕೃತಿ ಎಷ್ಟೇ ಪ್ರಬಲ ಆಗಿದ್ದರೂ ಉಳಿವಿಗೆ, ಒಳಿತಿಗೆ ಪರಿತಪಿಸುವ ಗಾತ್ರ, ಗೋತ್ರಕ್ಕಿಂತ ರಕ್ಷಣೆಯ ಸೂತ್ರ ಮುಖ್ಯವಾಗಿರುತ್ತದೆ. ನನ್ನ ಆತ್ಮೀಯ ಸ್ನೇಹಿತರಾದ ನರೇಂದ್ರ ರೈ ದೇರ್ಲರವರು ಇಂಥದೇ ಒಂದು ನೆಲೆಗಟ್ಟಿನಲ್ಲಿ ನೆಲ, ಜಲ, ಕೃಷಿ, ಸಮಾಜ, ಪ್ರಕೃತಿಯ ಬಗ್ಗೆ (ಅ)ಗೋಚರವಾಗುವ ವಿಚಾರಗಳನ್ನು ತಮ್ಮ ಲೇಖನಗಳ ಮೂಲಕ ‘ಬೇರು ಬದುಕು’ ಎಂಬ ಈ ಕೃತಿಯಲ್ಲಿ ತೆರೆದಿಟ್ಟಿದ್ದಾರೆ.
ಗದ್ದೆಯ ಬಟಾಣಿಗೆ ಹಸಿರು ಬಣ್ಣ ಬಳಿದು ಮಾರಿದ ಮದ್ಯವರ್ತಿಯೇ ನಗರದವರಿಗೆ ಆಪ್ತನಾಗುತ್ತಾನೆ ಹೊರತು ಬೆವರು ಸುರಿಸಿ ಶ್ರಮಪಟ್ಟ ರೈತ ದೂರ ವಾಗಿಯೇ ಇರುವುದನ್ನು ದೇರ್ಲರು ನಗರವನ್ನು ಹುಲಿಗೆ ಹಳ್ಳಿಯನ್ನು ಹುಲ್ಲೆಗೆ ಹೋಲಿಸುತ್ತಾರೆ. ಗದ್ದೆ, ತೋಟಕ್ಕೆ ಕೀಟನಾಶಕ ಬಂದಾಗಲೇ ರೈತರ ಮನೆಯಲ್ಲಿ ಆತ್ಮಹತ್ಯೆ ಎಂಬ ಅಗೋಚರ ವಸ್ತು ಕೂಡಾ ಅಡಗಿರುತ್ತದೆ ಎಂಬುದನ್ನು ಅರಿತಿರುವ ಜನಪ್ರತಿನಿಧಿಗಳು ರೈತರ ಸಾವಿಗೆ ‘ಪರಿಹಾರ’ ಎಂಬ ಹಣದ ಲೆಕ್ಕಾಚಾರವನ್ನು ಆರಂಭಿಸುತ್ತಾರೆ. ‘ಕೋಳಿ ತಿಂದಷ್ಟೂ ಮಲ ಹೊಲಸು, ಸುಕ್ಕದ ರುಚಿ ಎಂಥಾ ಸೊಗಸು’ - ಅದೇ ರೀತಿ ಬಸಲೆಗೆ ಮೂತ್ರ ಹಾಕಿದರೆ ರುಚಿ ಹೆಚ್ಚು ಎಂಬ ಪ್ರಜ್ಞೆ ಇದ್ದ ರೈತರಿಗೆ ವಿಷಯುಕ್ತ ಕೀಟನಾಶಕಗಳನ್ನು ನೀಡಿದ ಸರಕಾರವೇ ಭೂಮಿತಾಯಿ ಯನ್ನು ಇಸ್ಟಾಲ್‌ಮೇಂಟ್‌ನಲ್ಲಿ ಕೊಲ್ಲಲು ಆರಂಭಿಸಿದಾಗಲೂ ರೈತರು ಮೌನ ವಾಗಿಯೇ ಉಳಿದರು. ನೆರೆ ಬಂದಾಗ ಹೆಲಿಕಾಪ್ಟರ್ ಮೇಲೆ ದುರಂತ ವೀಕ್ಷಿಸುವ ಜನ ಪ್ರತಿನಿಧಿಗಳಿಗೆ ಮುಳುಗಿದ ನಗರ ಕಾಣುತ್ತದೆಯೇ ಹೊರತು ರೈತರ ಕೃಷಿಭೂಮಿ ಕಾಣಿಸುವುದಿಲ್ಲ.
ಪ್ರತೀ ಬೀಜದ ಒಳಗೂ ಭವಿಷ್ಯದ ಮರ ಇದೆ. ಪ್ರತೀ ಮರಗಳಲ್ಲೂ ನಾಳೆಯ ನೆಮ್ಮದಿ ಇದೆ. ಮರ ಉಳಿಸಿ, ಕಾಡು ಬೆಳೆಸಿ ಅನ್ನುವ ಮಂತ್ರಿಗಳೇ ಪ್ರಕೃತಿ ಕೆಡಿಸುವ ಮಾಫಿಯಾಗಳಿಗೆ ಪರವಾನಿಗೆ ನೀಡಿ ಬರಗಾಲದ ಒಡ್ಡೋಲಗಕ್ಕೆ ಆಹ್ವಾನ ನೀಡುತ್ತಾ ಇದ್ದರೂ ಜನರು ಪಕ್ಷ, ಧರ್ಮ, ಜಾತಿ, ರಾಜಕೀಯ ಅಂತ ಹೊಡೆದಾಡಿಕೊಂಡೆ ಇರುವುದು ಎಂತಾ ದುರಂತ! ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಜಾತಿ ಘರ್ಷಣೆ ಹುಟ್ಟಿಸುವ ರಾಜಕೀಯ ಕೃಪಾಪೋಷಿತ ಜನಪ್ರತಿನಿಧಿಗಳ ಮರ್ಮ ತಿಳಿಯದ ಜನತೆ ಮತ್ತೆ ಅದೇ ವ್ಯಕ್ತಿಗಳನ್ನು ಮತ ನೀಡಿ ಆರಿಸುತ್ತಾರೆ. ಸ್ವಚ್ಛ ಭಾರತ ಎಂಬ ಯೋಜನೆಯಲ್ಲಿ ಕೆಲವು ಹಾದಿ, ಬೀದಿ ಸ್ವಚ್ಛ ಆಯಿತೇ ಹೊರತು ದೇಶದ ಜನರ ಮನಸು ಸ್ವಚ್ಛ ಆಗದೇ ಉಳಿದದ್ದು ಕೂಡಾ ಒಂದು ದುರಂತ.
ಮತದಾನ ಸಂದರ್ಭದಲ್ಲಿ ಬಿಸಿಲಲ್ಲಿ ಕ್ಯೂ ನಿಂತು ಮತ ನೀಡಿ ತನ್ನ ಕರ್ತವ್ಯ ಮುಗಿಸಿದೆ ಎಂದು ಬೀಗುವ ರೈತ ತಾನು ವೋಟು ಹಾಕಿದ್ದು ಅಲ್ಲ, ನಾಳೆ ತನ್ನ ಹೊಲ, ಗದ್ದೆ, ತೋಟ ಲೂಟಿ ಮಾಡುವ ಒಬ್ಬ ದರೋಡೆಕೋರನ ಕೈಗೆ ಖಜಾನೆಯ ಕೀ ಕೊಟ್ಟದ್ದು ಎಂದು ತಿಳಿಯುವುದೇ ಇಲ್ಲ. ಈ ದೇಶದಲ್ಲಿ ಎಲ್ಲರ ಪ್ರತಿಮೆ ಎಲ್ಲೆಲ್ಲಿ ಅನಾವರಣಗೊಂಡಿತು. ಆದರೆ ಈ ದೇಶದ ಬೆನ್ನೆಲುಬು ಆಗಿರುವ ರೈತರ ಪ್ರತಿಮೆ ಎಲ್ಲೂ ಇಲ್ಲ. ಬಹುಶಃ ರೈತರಿಗೂ ಕತ್ತು ಎತ್ತಿ ತಾಕತ್ತು ತೋರಿಸುವ ಧೈರ್ಯ ಇದ್ದಿದ್ದರೆ ರೈತರ ಪ್ರತಿಮೆ ಎಲ್ಲಾದರೂ ಇರುತಿತ್ತು. ಕುಡಿಯಲು ಮತ್ತು ಕೃಷಿಗೆ ನೀರು ಕೊಡುತ್ತೇವೆ ಎಂದು ರಾಜಕಾರಣಿಗಳ ಮತ್ತು ಗುತ್ತಿಗೆದಾರರ ಸೂಟುಕೇಸ್ ಸಂಬಂಧ ಒಂದು ಎತ್ತಿನ ಹೊಳೆ ಎಂಬ ಅಸಂಬದ್ಧ ಯೋಜನೆಯ ಹುಟ್ಟು ಹಾಕಿ ನದಿ ನೀರು ಹರಿಯದಿದ್ದರೂ ಹಣದ ‘ನಿಧಿ’ ತಿರುಗಿಸುವ ಯೋಜನೆ ಆಗಿದ್ದರೂ ರಾಜಕೀಯ, ಪಕ್ಷ, ಮತ, ಹಣ, ಅಧಿಕಾರ ಎಂಬ ಮದದಿಂದ ಹೊಳೆಯನ್ನು ಹತ್ಯೆ ಮಾಡುತ್ತಿದ್ದರೂ, ತೆರಿಗೆ ಹಣ ಕೋಟಿ ಕೋಟಿ ಲೂಟಿ ಆಗುತ್ತಿದ್ದರೂ ಜನತೆಯ ಮೌನದ ಬಗ್ಗೆ ಇಲ್ಲಿ ದೇರ್ಲರವರು ಮೌನ ಮುರಿದಿದ್ದಾರೆ.
ಕೃಷಿ, ಸಮಾಜ, ಪ್ರಕೃತಿ ಎಲ್ಲವನ್ನೂ ಬಹಳ ಆಳವಾಗಿ, ಸೂಕ್ಷ್ಮವಾಗಿ ಕಂಡಂತಹ ನರೇಂದ್ರ ರೈ ದೇರ್ಲರವರು ಈ ಕೃತಿಯಲ್ಲಿ ಸಡಿಲಗೊಂಡ ಬೇರುಗಳು ಗಟ್ಟಿಯಾಗ ಬೇಕಾದರೆ ಮಣ್ಣು ಕೂಡಾ ಮೆದು ಆಗದೇ ಗಡಸು ಆಗಬೇಕು ಅಂದರೆ ಸಮಾಜದ ಜನತೆ ಕೂಡಾ ನ್ಯಾಯದ ಸ್ವರ ಕರ ಎತ್ತಬೇಕು ಎಂಬ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ. ಕೃಷಿಯ ಖುಶಿ - ಕೃಷಿಯ ಕಸಿ, ನೆಲ ಜಲದ ವೇದನೆ, ನೋವನ್ನು ಸಮಾಜದ ಸಂತಸದ ಆಚೆಯ ಕಾಣದೇ ಉಳಿದ ಸಂಕಟಗಳನ್ನು, ನಗು - ಬಿಗುವಿನ ಹಿಂದಿನ ಚಡಪಡಿಕೆಗಳನ್ನು ಚೆನ್ನಾಗಿ ವಿವರಿಸಿದ್ದಾರೆ. ಪತ್ರಕರ್ತರಾಗಿ, ಉಪನ್ಯಾಸಕರಾಗಿ, ಕೃಷಿಕರಾಗಿ, ಲೇಖಕರಾಗಿ ದೇರ್ಲರವರು ತನ್ನ ಸಹಜ ನೆಲೆಯ ಚೌಕಟ್ಟಿನ ಹೊರಗೆ ಕಂಡದ್ದನ್ನು, ಅನುಭವಿಸಿದ್ದನ್ನು, ಬರೆದದ್ದನ್ನು ಈ ‘ಬೇರು ಬದುಕು’ ಕೃತಿಯಲ್ಲಿ ತಿಳಿಸಿದ್ದಾರೆ. ಓದಲೇಬೇಕಾದ ಕೃತಿ ಇದು ನಾವು... ನೀವು... ಎಲ್ಲರೂ...
-ದಿನೇಶ್ ಹೊಳ್ಳ
ಪುಟಗಳು: 132
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !