2020 ಒಂದು ಅನಿರೀಕ್ಷಿತ ವರ್ಷವಾಗಿದೆ.ಯಾರೂ ಕನಸಿನಲ್ಲೂ ಊಹಿಸದಂತಹ ಸನ್ನಿವೇಶಗಳು ಮನುಷ್ಯರನ್ನು ಚಿಂತೆಗೀಡು ಮಾಡಿದೆ. ಇದನ್ನು ಮಾನವ ಪರಿವರ್ತನೆಯ ಯುಗ ಅನ್ನಿ ಅಥವಾ ವಿಪತ್ತು! ಎಂದರೂ ತಪ್ಪಾಗಲಾರದು !
2020! ಒಂದು ಸಣ್ಣ ವೈರಾಣುವಿನ ಆರ್ಭಟಕ್ಕೆ ಹೆದರಿ , ಇಡೀ ಮನುಕುಲವು ಸಾಮಾಜಿಕ, ಆರ್ಥಿಕ, ಮಾನಸಿಕ ಅನಿಶ್ಚಿತತೆ, ಆತಂಕ ಮತ್ತು ಭಯವನ್ನು ಅನುಭವಿಸುತ್ತಿದ್ದರೆ, ಇತ್ತ ಯುವ ಲೇಖಕಿಯು ಲಾಕ್‌ಡೌನ್‌ನ ಸಕಾರಾತ್ಮಕ ಅಂಶಗಳ ಮೇಲೆ ಬೆಳಕು ಚೆಲ್ಲುತ್ತಾರೆ. ಮಕ್ಕಳ ಗುಂಪಿನ ನಡುವಿನ ಚರ್ಚೆಯೊಂದಿಗೆ ತೆರೆದುಕೊಳ್ಳುವ ಕಥೆ, ಸಾಗಿದಂತೆ , ತಂದೆ-ಮಗಳು, ಒಡಹುಟ್ಟಿದವರ ಸಂಬಂಧದ ಕ್ಲೀಷೆ, ಮಕ್ಕಳು ಮತ್ತು ಪೋಷಕರಲ್ಲಿ ಉಂಟಾಗುವ ಭಯ, ಮಾನಸಿಕ ಒತ್ತಡ, ಆಘಾತ, ತಾಯಿಯ ಗೌಂದಲ, ಹಳೆಯ ಹವ್ಯಾಸವನ್ನು ಪುನರಾರಂಭಿಸುವುದು, ಸೋಮಾರಿಯಾಗಿದ್ದವ ಯುವ ವಿಜ್ಞಾನಿ ಯಾದ ಬಗೆ ; ಎಷ್ಟೇ ಹಣವಿದ್ದರೂ ಮಗನನ್ನು ಮನೆಗೆ ಕರೆಸಿಕೊಳ್ಳುಲು ಸಾಧ್ಯವಾಗದ ನಿಸ್ಸಾಹಯಕ ತಂದೆ, ವಿನಾಶದಿಂದ ಪುನರ್ ನಿರ್ಮಾಣದತ್ತ ಪ್ರಕೃತಿಯ ಪಯಣ, ಹೀಗೆ ಪುಸ್ತಕವು ವಿವಿಧ ಸಣ್ಣ ನಿದರ್ಶನಗಳು ಮತ್ತು ಘಟನೆಗಳ ಸುತ್ತ ಸುತ್ತುತ್ತದೆ.
ಒಂದಾನೊಂದು ಕಾಲದಲ್ಲಿ ( 2020 ಲಾಕ್ಡೌನ್ ಡೈರೀಸ್) ನಿಜ ಜೀವನದ ಕಥೆಗಳ ಒಂದು ನೋಟವಾಗಿದ್ದು ಓದುಗರ ಮನಸ್ಸಿಗೆ ನಾಟುವಂತಿದೆ.
ಪ್ರತಿಯೊಂದು ಕಥೆಯೂ ವಿಲ್ಲನ್ ಮತ್ತು ಸೂಪರ್ ಹೀರೋ ಇಲ್ಲದೆ ಅಪೂರ್ಣವಾಗಿದೆ. ಪುಟ್ಟ ಲೇಖಕಿ, ಕರೋನಾ ವೈರಸ್ ಅನ್ನು ವಿಲ್ಲನ್ ಮತ್ತು ಅದರ ವಿರುದ್ಧ ಹೋರಾಡುವ ಮಾನವನ ಧೈರ್ಯವನ್ನು ಸೂಪರ್ಹೀರೋಗೆ ಹೋಲಿಸಿದ್ದಾರೆ. ಈ ಯುವ ಲೇಖಕಿ ಸಾಂಕ್ರಾಮಿಕ ಮತ್ತು ಮಾನವಕುಲದ ನಡುವಿನ ವಿವಿಧ ರೀತಿಯ ಹೋರಾಟದ ನಿದರ್ಶನಗಳನ್ನು ಎಳೆ ಎಳೆಯಾಗಿ ಬಿಡಿಸಿಡುವ ಪ್ರಯತ್ನವೇ.. " ಒಂದಾನೊಂದು ಕಾಲದಲ್ಲಿ "( 2020 ಲಾಕ್ಡೌನ್ ಡೈರೀಸ್)
ನಾವೆಲ್ಲರೂ ಸುಖಾಂತ್ಯದೊಂದಿಗೆ ಕಾಲ್ಪನಿಕ ಕಥೆಗಳನ್ನು ಕೇಳಲು ಇಷ್ಟಪಡುತ್ತೇವೆ ... ಇಂದಿನಿಂದ 50-100 ವರ್ಷಗಳು ಸರಿದು ಹಿಂದೆ ನೋಡಿದರೆ, ಮುಂದಿನ ಪೀಳಿಗೆಗಳು ಕೋವಿಡ್19 ಸಾಂಕ್ರಾಮಿಕ ರೋಗದ ಬಗ್ಗೆ ಹೀಗೆ ನಿರೂಪಿಸಿ ಬಹುದೇನೋ.......
ಒಂದಾನೊಂದು ಕಾಲದಲ್ಲಿ , 'ಕೊರೋನಾಸುರಾ' ಎಂಬ ಅದೃಷ್ಯ ರಾಕ್ಷಸ ವಾಸಿಸುತ್ತಿದ್ದ.ಅವನ ಆರ್ಭಟಕ್ಕೆ ಲಕ್ಷಾಂತರ ಜನರು ಸಾವನ್ನಪ್ಪಿದರು. ಸುಳಿವೇ ಇಲ್ಲದೆ, ಕಣ್ಣಿಗೆ ಕಾಣದೆ ಹಿಂಸಿಸುವ ಈ ಮಹಾಮಾರಿಯ ವಿರುದ್ಧ ಹೋರಾಡುವುದು ಅಸಾಧ್ಯವಾಗಿತ್ತು. ಯಾವುದೇ ಔಷಧಿ ಅಥವಾ ಲಸಿಕೆ ಈ ಶತ್ರುವನ್ನು ನಾಶಮಾಡಲು ಸಾಧ್ಯವಿರಲಿಲ್ಲ. ಈ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಜನರು ಹೆದರಿ ಮನೆ ಸೇರಿದರು. ಇಡೀ ಪ್ರಪಂಚಕ್ಕೆ ಬೀಗ ಜಡಿಯಲಾಯಿತು. ಆದರೆ ಜನರ ತಾಳ್ಮೆ, ನಂಬಿಕೆ, ದಯೆ, ಸಹಾನುಭೂತಿ, ಧೈರ್ಯ, ಪ್ರೀತಿ, ಮಾನವಕುಲವನ್ನು ಮತ್ತೆ ಒಂದುಗೂಡಿಸಿತು ಎಂಬುದರ ನಿದರ್ಶನವೇ " ಒಂದಾನೊಂದು ಕಾಲದಲ್ಲಿ 2020 "( ಲಾಕ್ಡೌನ್ ನೆನಪುಗಳು).