Click here to Download MyLang App

ಅವಸ್ಥೆ (ಇಬುಕ್)

ಅವಸ್ಥೆ (ಇಬುಕ್)

e-book

ಪಬ್ಲಿಶರ್
ಯು.ಆರ್‌. ಅನಂತಮೂರ್ತಿ
ಮಾಮೂಲು ಬೆಲೆ
Rs. 120.00
ಸೇಲ್ ಬೆಲೆ
Rs. 120.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಅವಸ್ಥೆ ಕಾದಂಬರಿ ಸ್ವಾತಂತ್ರ್ಯೋತ್ತರ ಭಾರತದ ಸ್ಥೂಲ ರಾಜಕಾರಣದ ಒಂದು ಸೂಕ್ಷ್ಮ ಮಾದರಿಯನ್ನು ಕಟ್ಟಲು ಪ್ರಯತ್ನಿಸುತ್ತದೆ. ಜನಪರ ಹೋರಾಟಗಳ ಸೈದ್ಧಾಂತಿಕ ರಾಜಕಾರಣ, ನಕ್ಸಲ್‌ಬಾರಿ ಚಳುವಳಿಯ ಉಗ್ರಗಾಮಿ ರಾಜಕಾರಣ, ನಮ್ಮ ಸಂವಿಧಾನ ಒಪ್ಪಿಕೊಂಡಿರುವ ಸಂಸದೀಯ ರಾಜಕಾರಣ, ನವಶ್ರೀಮಂತ ವರ್ಗದ ಅವಕಾಶವಾದೀ ರಾಜಕಾರಣ ಇವೆಲ್ಲ ಒಂದರೊಳಗೊಂದು ಸೇರಿಹೋದ ಸಂಕೀರ್ಣ ರಾಜಕೀಯ ವಿನ್ಯಾಸವನ್ನು ಹೆಣೆಯುವ ಈ ಕಾದಂಬರಿ ಮಾರ್ಕ್ಸ್ವಾದ, ಗಾಂಧೀವಾದ ಮತ್ತು ಲೋಹಿಯಾವಾದಗಳ ನೇರ ಮುಖಾಮುಖಿಯನ್ನು, ಕಾದಂಬರಿಯ ಬಂಧವನ್ನು ಸಡಿಲಗೊಳಿಸದೆ ಮಂಡಿಸುತ್ತದೆ. ಹೀಗೆ ಈ ಕ್ಷಣದ ಕ್ಷಿಪ್ರ ವಿದ್ಯಮಾನಗಳನ್ನು ಕಟ್ಟಿಕೊಡುತ್ತಲೇ ಅವನ್ನು ರಾಜಕಾರಣದ ಕೆಲವು ಮೂಲಭೂತ ಪ್ರಶ್ನೆಗಳಿಗೆ ಎದುರುಬದರಾಗಿಸುವ ಲೇಖಕ ತನ್ನ ಬರವಣಿಗೆ ಒಂದು ರಾಜಕೀಯ ವರದಿಯಾಗಿಬಿಡಬಹುದಾದ ಅಪಾಯಗಳನ್ನು ಮೀರಿಬಿಡುತ್ತಾನೆ. ಆದ್ದರಿಂದಲೇ ಕಾದಂಬರಿ ಕೇವಲ ಒಂದು ಕಾಲಾವಧಿಯ ರಾಜಕೀಯ ಚರಿತ್ರೆಯೂ ಆಗುವುದಿಲ್ಲ, ರಾಜಕೀಯ ನಾಯಕನೊಬ್ಬನ ಜೀವನ ಚರಿತ್ರೆಯೂ ಆಗುವುದಿಲ್ಲ. ಈ ಅಂಶಗಳನ್ನು ಕಥನ ತನ್ನ ಅಗತ್ಯಕ್ಕೆ ತಕ್ಕಷ್ಟು ದುಡಿಸಿಕೊಂಡರೂ ಅವುಗಳನ್ನು ಇತರ ಹಲವು ಹತ್ತು ಅಂಶಗಳೊಡನೆ ಕಲಾತ್ಮಕವಾಗಿ ಕರಗಿಸಿ ಕೇಂದ್ರರೂಪಕ ನಿರ್ಮಾಣದತ್ತ ಚಲಿಸುತ್ತದೆ.

-ಟಿ.ಪಿ. ಅಶೋಕ

(‘ಯು.ಆರ್.ಅನಂತಮೂರ್ತಿ: ಒಂದು ಅಧ್ಯಯನ’)

 

ಪುಟಗಳು: 180

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ಶ್ರೀನಾಥ್ ಶಿರಗಳಲೆ
ಸಾಮಾಜಿಕ ವ್ಯವಸ್ಥೆಯಲ್ಲಿ ರಾಜಕೀಯದ ಪ್ರಭಾವದ ಚಿತ್ರಣವಿರುವ 'ಅವಸ್ಥೆ' ಕಾದಂಬರಿ ಇಂದಿಗೂ ಪ್ರಸ್ತುತ.

ಮೂವತ್ತೈದು ವರ್ಷಗಳ ಹಿಂದೆ ಪ್ರಕಟವಾದ ಯು. ಆರ್. ಅನಂತಮೂರ್ತಿಯವರ 'ಅವಸ್ಥೆ' ಕಾದಂಬರಿ ಇಂದಿಗೂ ಪ್ರಸ್ತುತವಾಗಿಯೇ ಉಳಿದಿರುವುದು ಲೇಖಕರ ಪ್ರತಿಭೆಗೆ ಸಾಕ್ಷಿಯಾಗಿರುವಂತೆಯೇ ಮನುಷ್ಯನ ಮೂಲಭೂತ ಕಾಳಜಿ ಕಾತರಗಳ ಸ್ವರೂಪ ಕಾಲದಿಂದ ಕಾಲಕ್ಕೂ ಬದಲಾಗದೆ ಉಳಿಯುವ ವಾಸ್ತವಕ್ಕೂ ಸಾಕ್ಷಿಯಾಗುತ್ತದೆ. ಒಂದು ದೃಷ್ಟಿಯಿಂದ ಈ ಕಾದಂಬರಿ ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣದ ಚಿತ್ರವಾಗಿರುವಂತೆಯೇ ಇನ್ನೊಂದು ದೃಷ್ಟಿಯಿಂದ ನೋಡಿದರೆ ಕಾದಂಬರಿಯ ನಾಯಕ ಕೃಷ್ಣಪ್ಪ ಗೌಡ ತನಗೆ ಹುಟ್ಟಿನಿಂದ ಬಂದ ತನ್ನ ಜಾತಿ, ಆರ್ಥಿಕ ಸ್ಥಿತಿಗಳ ಮಿತಿಗಳನ್ನು ಮೀರುತ್ತ, ಆದರ್ಶಗಳ ಬೆನ್ನತ್ತಿ ಜೀವನದ ಸಂಕೀರ್ಣತೆಗಳಿಗೆ ಮುಖಾಮುಖಿಯಾಗುವ ಚಿತ್ರ ಕಾಣುತ್ತದೆ ಕಲಾತ್ಮಕತೆ ಮತ್ತು ವಿಚಾರವಂತಿಕೆಗಳ ತಾದಾತ್ಮ್ಯ ಸಾಧ್ಯವಾಗಿರುವ ಕಾರಣದಿಂದಲೇ 'ಅವಸ್ಥೆ' ಅಷ್ಟೇನೂ ಜನಪ್ರಿಯವಾಗದಿದ್ದರೂ ಒಂದು ಮುಖ್ಯ ಕಾದಂಬರಿಯಾಗಿದೆ.

ಕೆಲ ತಿಂಗಳ ಹಿಂದೆ ಯು. ಆರ್. ಅನಂತಮೂರ್ತಿಯವರು ಪ್ರತಿಷ್ಟಿತ 'ಅಂತರರಾಷ್ಟ್ರೀಯ ಬೂಕರ್' ಪ್ರಶಸ್ತಿಗೆ ನಾಮಕರಣಗೊಂಡ ಸಂದರ್ಭದಲ್ಲಿ 'ಅವಸ್ಥೆ' ಕಾದಂಬರಿಯ ಬಗ್ಗೆ 'ಬೂಕರ್' ಪ್ರಶಸ್ತಿ ವಿಜೇತ ಪ್ರತಿಭಾವಂತ ಕಾದಂಬರಿಕಾರ ಅರವಿಂದ ಅಡಿಗ ಅವರು ಬರೆದ ಲೇಖನ Reading India's soul 'ಅವಸ್ಥೆ' ಕಾದಂಬರಿಯ ಕಥಾ ಹಂದರದ ಸೂಕ್ಷ್ಮ ಪರಿಚಯ ಮಾಡಿಕೊಡುತ್ತದೆ. ಕಥೆಯ ವಿವರಣೆಗೆ ಹೋಗದೆ, ಕಾದಂಬರಿಯಲ್ಲಿ ಉದ್ದಕ್ಕೂ ಪ್ರಮುಖವಾಗಿ ಪ್ರಕಟಗೊಳ್ಳುವ ರಾಜಕೀಯದ ಆಯಾಮವನ್ನು ಉಲ್ಲೇಖಿಸುವುದು ನನ್ನ ಈ ಬರಹದ ಉದ್ದೇಶ.

ಕ್ರಾಂತಿಯಲ್ಲಲ್ಲದೆ ಜೀವನ ಸಫಲವಾಗುವ ಬೇರೆ ಮಾರ್ಗಗಳಿಲ್ಲ ಎಂದು ನಂಬುವ, ಮಾರ್ಕ್ಸಿಸ್ಟ್ ಆಗಿದ್ದೂ ಕಮ್ಯುನಿಸ್ಟ್ ಪಕ್ಷದ ರಷ್ಯಾ ಪರ ನೀತಿಗೆ ವಿರೋಧಿಯಾಗಿ ಬೇರೆ ಮಾರ್ಗ ಕಾಣದೆ ಸೋಷಲಿಸ್ಟ್ ಬಣ ಸೇರಿದ್ದ ನಾಗರಾಜನ ವರ್ಣನೆಯನ್ನು ಗಮನಿಸಿ- "ಸುಖ, ಸವಲತ್ತು, ದಾಕ್ಷಿಣ್ಯಗಳಿಂದ ಸಂಪೂರ್ಣ ವಿಮುಖನಾಗಿ ಈವರೆಗೆ ನಾಗರಾಜ್ ಬದುಕಿದ್ದ, ಒಂಟಿ ಪಿಶಾಚಿಯಂತೆ. ತನ್ನ ತತ್ತ್ವಗಳಿಗೆ ಆತುಕೊಂಡು, ತನ್ನ ವ್ಯಕ್ತಿತ್ವವನ್ನು ತೀವ್ರವಾಗಿ ಒಂದೇ ಗುರಿಗೆ ಮಿತಗೊಳಿಸಿ, ಕೆಂಪಗೆ ಕಾದ ಕಬ್ಬಿಣದ ಸಲಾಕೆಯಂತೆ."

ಪಾರ್ಲಿಮೆಂಟರಿ ವ್ಯವಸ್ಥೆಯ ಬಗ್ಗೆ ನಂಬಿಕೆಯಿರದ ನಾಗರಾಜ ಮತ್ತು ಅಂತಹ ವ್ಯವಸ್ಥೆಯಲ್ಲಿ ನಂಬಿಕೆಯಿರುವ ಜನಾನುರಾಗಿ ನಾಯಕ ಕೃಷ್ಣಪ್ಪನ ನಡುವಿನ ಸಂಭಾಷಣೆಯ ಆಯ್ದ ಭಾಗಗಳನ್ನುನೋಡಿ-

ನಾಗರಾಜ - "ಪಾರ್ಲಿಮೆಂಟರಿ ರಾಜಕೀಯದ ಗತಿಯೇ ಇದು. ಯಾವ ಗುಂಪಿಗೆ ಸೇರಿ ನಾವು ಸರ್ಕಾರ ರಚಿಸಿದರೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಈ ಸ್ಟೇಟ್ ಆಳುವ ವರ್ಗಗಳ ಸಾಧನ. ಬೇರೆ ಥರ ಅದನ್ನ ಬಳಸೋದು ಪಾರ್ಲಿಮೆಂಟ್ ರಾಜಕೀಯದಲ್ಲಿ ಸಾಧ್ಯವಿಲ್ಲ".

ಕೃಷ್ಣಪ್ಪ - "...ನಾವು ಮಿನಿಮಮ್ ಟೈಮ್ ಬೌಂಡ್ ಕಾರ್ಯಕ್ರಮ ಹಾಕ್ಕೊಂಡು ಸರ್ಕಾರ ರಚಿಸಿದರೆ ಅಲ್ಪ ಸ್ವಲ್ಪವಾದರೂ ಸಾಧಿಸಬಹುದು ಅನ್ನೋದರಲ್ಲಿ ತಿರುಳೇ ಇಲ್ಲವೇನು ಹಾಗಾದ್ರೆ..."

ನಾಗರಾಜ - "ಇಲ್ಲ. ದೇಶದ ಸ್ಥಿತಿ ಇನ್ನಷ್ಟು ಹದಗೆಟ್ಟಾಗಲೇ ಪಾರ್ಲಿಮೆಂಟರಿ ಸಿಸ್ಟಂ ಬಗ್ಗೆ ಇರೋ ಭ್ರಾಂತಿ ಜನರಲ್ಲಿ ನಾಶವಾಗತ್ತೆ..."

ಕೃಷ್ಣಪ್ಪ -"ನಿಮ್ಮ ವಿಚಾರ ನಾನು ಒಪ್ಪಲ್ಲ. ಇರೋ ಮನೆಗೆ ಬೆಂಕಿ ಇಕ್ಕಿ ಮೈಕಾಯಿಸಿಕೊಳ್ಳೋ ಅಪಕ್ವ ಧೋರಣೆ ನಿಮ್ಮದು..."

ಊರಿನಲ್ಲಿ ತನ್ನ ಸನ್ಮಾನದ ಕಾರ್ಯಕ್ರಮ ವ್ಯವಸ್ಥೆಗೊಳ್ಳುತ್ತಿರುವ ಸಂದರ್ಭದಲ್ಲಿ ರೈತ ನಾಯಕ ಕೃಷ್ಣಪ್ಪನ ಮನದಲ್ಲಿ ಮೂಡುವ ವಿಚಾರಗಳು ಸೂಚಿಸುವಂತೆ, ಒಂದೆಡೆ ಬದಲಾವಣೆಯ ಆದರ್ಶ ಹಾಗೂ ಇನ್ನೊಂದೆಡೆ ತನ್ನ ವರ್ಗದ ಹಿತ, ಈ ತಾಕಲಾಟದಲ್ಲಿ ರಾಜಕೀಯ ನಾಯಕ ತನ್ನ ರಾಜಕೀಯದ ಮೂಲಕ ಮೂಲಭೂತ ಬದಲಾವಣೆಗಳನ್ನು ತರುವಲ್ಲಿ ಸೋಲುವ ಅಂಶ ಸ್ಪಷ್ಟವಾಗುತ್ತದೆ. ಕೃಷ್ಣಪ್ಪನ ಭಾವನಾ ಲಹರಿ ಹೀಗೆ ಸಾಗುತ್ತದೆ -

"... ಇದು ವೈಯಕ್ತಿಕ ನೈತಿಕ ಪ್ರಶ್ನೆ ಮಾತ್ರವಲ್ಲ . ಆದರೆ ತನ್ನ ಮನಸ್ಸು ಅಳ್ಳಕವಾಗಿ ಭೂತದಲ್ಲಿ ಚಲಿಸುತ್ತ ಸುಖಪಡಲು ಹವಣಿಸುತ್ತಿದೆ. ತನ್ನನ್ನು ಸುತ್ತಿಕೊಳ್ಳುತ್ತಿರುವ ಬಲೆಗಳಿಂದ ಹೊರಬರಲಾರೆ ಎನ್ನಿಸುತ್ತದೆ. ಸನ್ಮಾನದ ಸಿಧ್ಧತೆ ನಡೆಯುತ್ತಿದೆ- ಈ ಮಸಲತ್ತನ್ನೂ ಐತಿಹಾಸಿಕ ಅಗತ್ಯವೆಂದು ಕಾಣಬಹುದಲ್ಲ? ಸಮುದಾಯದ ಹಿತವೇ ನನ್ನ ಹಿತವೆನ್ನುತ್ತಲೇ ನನ್ನ ಹಿತ ಸಾಧಿಸಿಕೊಂಡಾಗ ನಾಗರಾಜ್ ಏನನ್ನುತ್ತಾನೆ? ಅಥವಾ ನೀವು ಪ್ರತಿನಿಧಿಸುವ ವರ್ಗದ ಹಿತ ಇಷ್ಟು ಮಾತ್ರ ಸಮಾಜವನ್ನು ಮುಂದಕ್ಕೆ ಒಯ್ಯುತ್ತದೆ - ಹೆಚ್ಚಲ್ಲ ಎನ್ನುತ್ತಾನೆ. ನಿನ್ನ ಹಿತ ಸಾಧನೆಗೆ ನೀನಿದನ್ನು ಮಾಡುವುದು ಕೂಡ ಆಶ್ಚರ್ಯವಲ್ಲವೆನ್ನುತ್ತಾನೆ. ಶುದ್ಧ-ಅಶುದ್ಧದ ಮಾತು ಅಸಂಬದ್ಧವೆನ್ನುತ್ತಾನೆ..."

ಕಾದಂಬರಿಯು ಮೂಲಭೂತವಾಗಿ ಅಂದಿನ ರಾಜಕೀಯಕ್ಕೆ ಸಂಬಂಧಿಸಿದ್ದಾದರೂ ಇಲ್ಲಿ ರಾಜಕೀಯ ಕೇವಲ ಭಾಷಣವಾಗದೇ ಕಥೆಯ ಹಂದರದಲ್ಲಿ ಮಿಳಿತಗೊಂಡಿದೆ. ಕೃಷ್ಣಪ್ಪನ ಕಾಲೇಜು ಗೆಳತಿ ಗೌರಿ, ಕೃಷ್ಣಪ್ಪನ ತಾಯಿ ಶಾರದಮ್ಮ ಇವರ ಪಾತ್ರಗಳು ಜೀವಂತಿಕೆಯಿಂದ ಸೆಳೆಯುತ್ತವೆ. ಕೃಷ್ಣಪ್ಪ ವಾರಂಗಲ್ ನಲ್ಲಿ ಪೊಲೀಸರ ದೌರ್ಜನ್ಯಕ್ಕೆ ಒಳಗಾಗುವ ಸನ್ನಿವೇಶದ ಚಿತ್ರಣ ಬಹಳ ಪರಿಣಾಮಕಾರಿಯಾಗಿ ರಚಿತವಾಗಿದೆ.

ಸಾಮಾಜಿಕ ವ್ಯವಸ್ಥೆಯಲ್ಲಿ ರಾಜಕೀಯದ ಪ್ರಭಾವಕ್ಕೆ ಒಂದಲ್ಲ ಒಂದುರೀತಿ ಎಲ್ಲರೂ ಒಳಗಾಗುವುದು ಅನಿವಾರ್ಯವಾಗಿರುವುದರಿಂದ ಸುತ್ತಲೂ ಅದೃಶ್ಯವಾಗಿ ಪ್ರವಹಿಸುವ ರಾಜಕೀಯ ಒಳಸುಳಿಗಳ ಅರಿವು ಎಲ್ಲರಿಗೂ ಅಗತ್ಯವಾದದ್ದೇ. ಈ ಕಾರಣದಿಂದ 'ಅವಸ್ಥೆ' ಇಂದಿಗೂ ಪ್ರಸ್ತುತ.