ಲೇಖಕರು:
ಹಿಂದಿ ಮೂಲ ಡಾ|| ಓಂ ಪ್ರಕಾಶ್ ಪ್ರಸಾದ್
ಕನ್ನಡಕ್ಕೆ : ಪ್ರೊ|| ಷಾಕಿರಾ ಖಾನಂ (ಸಾಬಿ)
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಯಾವುದೇ ವಿಷಯದ ಪ್ರತಿಪಾದನೆಗೆ ಅಧ್ಯಯನ ಮತ್ತು ನಿರೂಪಣಾ ವಿಧಾನ ಎರಡೂ ಮುಖ್ಯ. ಈ ಕೃತಿಯ ಮೂಲ ಲೇಖಕರಾದ ಡಾ|| ಓಂ ಪ್ರಕಾಶ್ ಪ್ರಸಾದ್ ಅವರ ಅಧ್ಯಯನದ ವಿಸ್ತಾರ ಸಾಕಷ್ಟು ದೊಡ್ಡದಾಗಿದೆ. ಅನೇಕ ವಿದ್ವಾಂಸರ ಕೃತಿಗಳನ್ನು ಅವರು ಅಭ್ಯಾಸ ಮಾಡಿದ್ದಾರೆ. ತಮ್ಮ ವಾದಕ್ಕೆ ಅವರ ವಿಚಾರಗಳನ್ನು ಪೂರಕವಾಗಿ ಬಳಸಿಕೊಳ್ಳುತ್ತಾರೆ. ಔರಂಗಜೇಬನನ್ನು ಕುರಿತು ಕೇವಲ ಕೆಟ್ಟದ್ದನ್ನು ಕಟ್ಟಿಕೊಟ್ಟವರ ಮನೋಸೌಧವನ್ನು ಕೆಡವುತ್ತಾರೆ. ಔರಂಗಜೇಬ ಹಿಂದೂಗಳ ವಿರೋಧಿಯಲ್ಲ ಎಂದು ಸ್ಥಾಪಿಸಲು ಸಾಧಾರ ಸಾಹಸ ಮಾಡುತ್ತಾರೆ. ‘ಅವನು ತೆಗೆದುಕೊಂಡ ಧಾರ್ಮಿಕ ನಿರ್ಣಯಗಳೆಲ್ಲಾ ಸಿಂಹಾಸನವನ್ನು ಬಲ ಪಡಿಸುವುದಕ್ಕಾಗಿಯೇ ಹೊರತು ಬೇರಾವುದಕ್ಕೂ ಅಲ್ಲ’ ಎಂಬ ಕಾರಣ ಕೊಡುತ್ತಾರೆ. ‘ಹೊಸ ದೇವಾಲಯಗಳನ್ನು ನಿರ್ಮಿಸುವುದನ್ನು ನಿಲ್ಲಿಸಿದ್ದೇನೋ ನಿಜ, ಆದರೆ ಹಳೆ ದೇವಾಲಯಗಳನ್ನು ಪುನರುತ್ಥಾನಗೊಳಿಸಲು ಅಪ್ಪಣೆ ನೀಡಿ ದೇಣಿಗೆಯನ್ನು ನೀಡಿದ’ ಎಂದು ಹೇಳುತ್ತ ಆಧಾರಗಳನ್ನು ಒದಗಿಸುತ್ತಾರೆ. ಅಂದರೆ ಔರಂಗಜೇಬ ಮೂಲತಃ ‘ಹಿಂದೂ ದ್ವೇಷಿ’ ಎಂಬುದು ಸುಳ್ಳು ಎಂಬುದು ಈ ವಿವರಗಳ ಸಾರ. ಆದರೆ ಇದೇ ಉಸಿರಿನಲ್ಲಿ ಔರಂಗಜೇಬನು ತನ್ನ ತಂದೆಯ ಕಾಲದಲ್ಲಿ ಮುಚ್ಚಿದ್ದ ದೇವಾಲಯಗಳು ತಾನು ಚಕ್ರವರ್ತಿಯಾದಾಗ ತೆರೆದುಕೊಂಡು ಮತ್ತೆ ಮೂರ್ತಿ ಪ್ರತಿಷ್ಠಾಪನೆ ಮಾಡಿದಾಗ ಕೋಪಗೊಂಡು ಅವುಗಳನ್ನು ಕೆಡವಲು ಆದೇಶಿಸಿದ್ದನ್ನು ಇದೇ ಲೇಖಕರು ವಿವರಿಸುತ್ತಾರೆ. ಇಂಥ ‘ಕೋಪ ಬರುವುದು ಸಹಜ’ ಎಂದು ಲೇಖಕರು ಸಮರ್ಥಿಸುವುದು ಮಾತ್ರ ಅಸಹಜ! ಯಾಕೆಂದರೆ ೧೬೬೫ರಲ್ಲಿ ಮರುಸ್ಥಾಪನೆಗೊಂಡ ದೇವಾಲಯಗಳನ್ನೆಲ್ಲಾ ಕೆಡವಲು ಔರಂಗಜೇಬ ಆದೇಶಿಸಿದ್ದನ್ನೂ ‘ತನ್ನ ಧಾರ್ಮಿಕ ನಾಯಕರನ್ನು ಸಂತೋಷಪಡಿಸಲು ಮತ್ತು ತನ್ನ ಆಡಳಿತ ಭದ್ರತೆಗಾಗಿ ತನ್ನ ಆಡಳಿತದ ಆರಂಭದಲ್ಲೇ ಸೋಮನಾಥ ಮಂದಿರವನ್ನು ಕೆಡವಲು ಆದೇಶಿಸಿದ್ದ’ ಎಂಬುದನ್ನೂ ಈ ಕೃತಿಯ ಮೂಲ ಲೇಖಕರೇ ಒಪ್ಪಿದ್ದಾರೆ, ವಿವರಿಸಿದ್ದಾರೆ. ಔರಂಗಜೇಬನ ಇಂಥ ಕೃತ್ಯಗಳೇ ಆತ ‘ಹಿಂದೂ ದ್ವೇಷಿ’ ಎಂದು ಭಾವಿಸಲು ಕಾರಣವಾಗಿದೆ. ಆದರೆ ಈ ಕೃತಿಯು ಮುಂದುವರೆಯುತ್ತ ಔರಂಗಜೇಬನು ಹಿಂದೂ - ಮುಸ್ಲಿಂ ಭೇದ ಭಾವವಿಲ್ಲದೆ ಮಾಡಿದ ಕೆಲಸಗಳನ್ನು ನಿರೂಪಿಸುತ್ತದೆ. ಈ ನಿರೂಪಣೆಗೆ ಪೂರಕವಾಗಿ ಕಾಶಿ ವಿಶ್ವನಾಥ ದೇವಾಲಯ ಕೆಡವಿದ್ದಕ್ಕೆ ಪುರಾವೆಗಳಿಲ್ಲ ಎಂದು ಹೇಳುತ್ತ ಕಾಶಿಯ ನಾಗರಿಕರು ಶಾಂತಿಯುತವಾಗಿ ಜೀವನ ನಡೆಸಲಿ ಎಂದು ಬಯಸಿ, ಹಿಂದೂ ಪೂಜಾರಿಗೆ ಮುಸಲ್ಮಾನರು ಕೊಡುತ್ತಿದ್ದ ಕಿರುಕುಳ ತಪ್ಪಿಸಿದ್ದನ್ನೂ ‘ಹಿಂದೂ ಧರ್ಮ ಮತ್ತು ಹಿಂದೂಗಳೊಂದಿಗೆ ಸೌಹಾರ್ದಯುತ ವಾತಾವರಣ ನಿರ್ಮಿಸಲು ಮುಸಲ್ಮಾನರು ಸಹಕರಿಸಬೇಕೆಂದು ಆದೇಶ’ ನೀಡಿದ್ದನ್ನೂ ಉಲ್ಲೇಖಿಸುತ್ತಾರೆ. ಜೊತೆಗೆ ಹಿಂದೂ ಪೂಜಾರಿಗಳಾದ ಬನಾರಸ್ ಜಿಲ್ಲೆಯ ಬಸ್ತಿ ಎಂಬ ಊರಿನ ನಿವಾಸಿ ಗಿರಿಧರ, ಮಹೇಶಪುರದ ಯದುನಾಥ ಮಿಶ್ರ, ಪಂಡಿತ ಬಲಭದ್ರ ಮಿಶ್ರರಿಗೆ ಔರಂಗಜೇಬ ಜಾಗೀರು ನೀಡಿದ್ದನ್ನು ಆಧಾರ ಸಹಿತ ಉಲ್ಲೇಖಿಸುತ್ತಾರೆ.
- ಬರಗೂರು ರಾಮಚಂದ್ರಪ್ಪ
ಪುಟಗಳು: 104
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !