ಬರಹಗಾರ: ಡಾ|| ಕೆ. ಶಿವರಾಮ ಕಾರಂತ
ಮೊನ್ನೆ ಮೊನ್ನೆಯ ತನಕವೂ ವರ್ಷಕ್ಕೊಮ್ಮೆಯೋ, ಎರಡು ವರ್ಷ ಗಳಿಗೊಮ್ಮೆಯೋ ಕಾದಂಬರಿಯ ಕನಸುಗಳನ್ನು ಹೆಣೆಯುತ್ತಿದ್ದೆ. ಅದು ನನ್ನ ಪಾಲಿಗೆ ಕಣ್ಣೆದುರಿಗೇ ಬಿಡುವಿಲ್ಲದೆ ನಡೆಯುವ ಹದಿನೈದು ದಿನಗಳ ಸ್ವಪ್ನ ವಾದಾಗ ಮನಸ್ಸು ತನ್ನ ಪೂರ್ವಾನುಭವದ ಒಂದಲ್ಲ ಒಂದು ಸೆರಗನ್ನು ಸೆಳೆದುಕೊಂಡು ಕಾದಂಬರಿಯ ರೂಪದಲ್ಲಿ ಬಿಂಬಿಸುವುದು ಸಾಧ್ಯವಾಗುತ್ತಿತ್ತು. ಆಗ, ಮನಸ್ಸಿನ ಭಾರ ಕಳಚಿ ಹಗುರವಾಗುತ್ತಿತ್ತು. ಅಂಥ ಕನಸಿಗೆ ಸಾರವನ್ನು ಒದಗಿಸುವ ಕೆಲಸ ಪೂರ್ವಾನುಭವಗಳದ್ದು; ಅವನ್ನು ಹೀರಿ ಬೆಳೆಯುವ ಬಿತ್ತು, ಬರೆಯಲು ಕುಳಿತ ಗಳಿಗೆಗೆ ಹೊಮ್ಮಬಹುದಾದ ಒಂದು ಸುಳಿವು.
ಆದರೆ ಹದಿನೈದು, ಇಪ್ಪತ್ತು ದಿನಗಳ ಕಾಲ ಬಿಡುವು ಮಾಡಿಕೊಂಡು ಅಂಥ ಸ್ವಪ್ನ ಕಾಣಲು ಹಂಬಲಿಸಿದ ಮಾತ್ರದಿಂದಲೇ ಕುಳಿತ ಹೊತ್ತಿನಲ್ಲಿ ಸ್ವಪ್ನ ತೊಡಗೀತೆಂಬ ಭರವಸೆಯಿಲ್ಲ. ಮನಸ್ಸು ದಾರಿಕಾಣದ ಮಂಕಿಂದ ಸ್ತಂಭಿತ ವಾಗುವುದುಂಟು. ಈ ಬಾರಿ ತೊಡಗಬೇಕೆಂಬ ಕಾದಂಬರಿಯ ಸ್ವರೂಪವೇ ಸೂಚಿಸದೆ ಹೋಗಬಹುದು. ಅದನ್ನು ತೊಡಗಿದ ಮೇಲೆಯೂ,ಅದು ಹರಿಯುವ ದಾರಿ ಮೊಂಡಾಗಿ ಕೊನೆಗೊಳ್ಳಬಹುದು.
ಹೀಗಾಗಿ, ಈಚಿನ ಮೂರು ವರ್ಷಗಳಲ್ಲಿ, ಎಂದರೆ, 'ನಷ್ಟ ದಿಗ್ಗಜ' ವೆಂಬ ವ್ಯಂಗ್ಯಬರಹ ಬರೆದ ಮೇಲೆ, ಬೇರೆ ಕಾದಂಬರಿಯನ್ನು ಬರೆಯುವ ಉತ್ಸಾಹಬರಲಿಲ್ಲ. ಅದಕ್ಕಾಗಿ ಕಾದಿರಿಸಿದ ದಿನಗಳಲ್ಲಿ, ಈಚಿನ ಮೂರು ವರ್ಷ ಯಾವಾವುದೋ ಅನುವಾದಗಳ ಕೆಲಸ ಕೈಕೊಂಡೆ. ಅವನ್ನಾದರೆ ನಡುವೆ ನಿಂತರೂ, ನಾಳೆ ದಿನ ಬಿಡುವು ದೊರೆತಾಗ ಮುಂದುವರಿಸಲು ಬರುತ್ತದೆ.
ಈ ವರ್ಷ ಬಿಡುವು ಮಾಡಿಕೊಂಡು ಒಂದು ರಾಜಕೀಯ ವಿಡಂಬನೆ ಬರೆಯಲು ಕುಳಿತೆನಾದರೂ, ಅದರ ಕನಸುಗಾರಿಕೆ ಮುಂದುವರಿಯದಾಯಿತು.
ಇದೇ ಸಮಯದಲ್ಲಿ, ಈ ಎರಡು ಮೂರು ವರ್ಷಗಳಿಂದ ನನ್ನ ತಾಳ್ಮೆಯನ್ನು, ಮನಃಶಾಂತಿಯನ್ನು ಕೆಣಕಿದ ಅನುಭವಗಳ ಪೀಡೆ ವಿಶೇಷ ವಾಗಿತ್ತು. ಜಗತ್ತಿನ ಮೇಲಣ ವಿಶ್ವಾಸವನ್ನು ನುಚ್ಚುನುರಿ ಮಾಡಿತ್ತು. ಅವು ಗಳಿಂದ ಮನಸ್ಸನ್ನು ಬಿಡಿಸಿಕೊಂಡು ಬೇರೆ ಏನನ್ನಾದರೂ ಮಾಡುತ್ತೇನೆ ಎನ್ನುವಾಗಲೂ, ನನ್ನ ಪಾಲಿಗೆ ನಿರೀಕ್ಷಿಸಿರದ ಕಟು ಅನುಭವಗಳು ಇನ್ನೊಂದೇ ಮೂಲೆಯಿಂದ ಇದಿರಾದುವು. ತಿರುಗಿ ಮನಸ್ಸಿನ ಜಂಜಡಕ್ಕೆ ಗುರಿಯಾದೆ.
ಅದನ್ನು ತೊಡೆಯುವುದಕ್ಕಾಗಿಯೇ ಲೇಖನಿ ಹಿಡಿಯುವ ಅನಿವಾರ್ಯ ಬಂತು. ಬಿಡುವೇನೋ ಇದ್ದಿತ್ತು. ಯಾವುದೋ ಪೂರ್ವಾನುಭವಗಳ ತೀಕ್ಷ್ಣ ನೋವು, ಕಹಿ, ಮನುಷ್ಯನನ್ನೆ ಕುರಿತ ಹತಾಶೆ ನನ್ನನ್ನು ಕೆಣಕಿ, ಇನ್ನೊಮ್ಮೆ ಕಾದಂಬರಿಯನ್ನು ನನ್ನಿಂದ ಬರೆಯಿಸುವ ಒತ್ತಾಯ ತಂದಿತು; ಬರಿಯ ಹದಿಮೂರು ದಿನಗಳಲ್ಲಿ
ಇಂಥ ಅನುಭವ ಎಲ್ಲರ ಪಾಲಿಗೂ ಆಗಿರಬೇಕು. ನಾವು ಯಾರನ್ನು ನಂಬಿದೆವೋ, ಯಾರನ್ನು ಆತ್ಮೀಯರೆಂದು ತಿಳಿದೆವೋ ಅವರ ನಿಜರೂಪ ಕಾಣಿಸಿದಾಗ 'ಇಂಥವರೂ ಸಮಾಜದಲ್ಲಿ ಮೆರೆಯುತ್ತಾರಲ್ಲ!' ಎಂಬ ವಿಸ್ಮಯ ಮೂಡಿತ್ತು. ಪ್ರಾಯಶಃ ಮುಂದಿನ ದಿನಗಳಲ್ಲಿ ವಂಚಕರಿಗೆ ಅಪ್ರಾಮಾಣಿಕರಿಗೆ ಜನಮನ್ನಣೆಯ ಹೊಸಯುಗ ಬರುತ್ತದೆಯೋ ಅನಿಸುತ್ತಿದೆ. ರಾಜಕೀಯ ರಂಗದಲ್ಲಿ, ಸ್ವಾತಂತ್ರ್ಯೋತ್ತರ ದಶಕಗಳಲ್ಲಿ ನನಗಾದ ಕಹಿ ಅನುಭವ ಅದೇನೆ; ರಾಜಕೀಯದ ಹೊರಗಣ ಕ್ಷೇತ್ರಗಳಲ್ಲಿಯೂ ಕಾಣಿಸುವ ವಿದ್ಯಮಾನ ಅದೇನೆ.
ಅಂಥ ಕಹಿ ಈ ವರ್ಷ ಬರೆದ ಕಾದಂಬರಿಗೆ ಪ್ರೇರಣೆಯಾಯಿತು. ನನ್ನ ಸಮಾಜದ ಬಗ್ಗೆ, ದೇಶದ ಬಗ್ಗೆ, ಮಿತ್ರರ ಬಗ್ಗೆ ತಲೆತಗ್ಗಿಸಿ ಬಾಳ ಬೇಕಾಯಿತಲ್ಲ ಎಂಬ ನೋವನ್ನು ಇಲ್ಲಿ ತೋಡಿಕೊಂಡಿದ್ದೇನೆ. ಆದುದರಿಂದ, ಓದುಗರಿಗೂ ಅದು ಸಂತಸವನ್ನು ಕೊಡಲಾರದು; ಅದರ ಬದಲು, ನನ್ನ ಯಾತನೆಯಲ್ಲಿ ಒಂದು ಪಾಲನ್ನು ಸಲ್ಲಿಸೀತು.
- ಶಿವರಾಮ ಕಾರಂತ
ಪುಟಗಳು: 228
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !