ಬರಹಗಾರ: ಪೂರ್ಣಚಂದ್ರ ತೇಜಸ್ವಿ
ನಾನು ಮಿಲನಿಯಮ್ ಸರಣಿ ಪ್ರಾರಂಭಿಸಿ ಕತೆ ಹೇಳಲು ಶುರುಮಾಡಿದಾಗ ಹದಿನಾರು ತಿಂಗಳ ಕಾಲಾವಕಾಶ ಇತ್ತು. ತಿಂಗಳಿಗೆ ನೂರು ಪುಟಗಳೆಂದರೆ ಸಾವಿರದ ಆರುನೂರು ಪುಟಗಳ ವಿಸ್ತಾರದಲ್ಲಿ ಬೇಕಾದಷ್ಟು ಚಿತ್ರಿಸುವ ಹುಮ್ಮಸ್ಸಿನಲ್ಲಿ ಬರೆಯಲು ಶುರು ಮಾಡಿದೆ. ಗೊತ್ತಿರುವುದನ್ನೆಲ್ಲಾ ಹೇಳಿ ಖಾಲಿ ಮಾಡುವಷ್ಟು ಸ್ಥಳಾವಕಾಶ ಮತ್ತು ಕಾಲಾವಕಾಶ ಇದೆಯೆಂದು ತಿಳಿದಿದ್ದೆ. ಸೇರಬೇಕಾಗಿದ್ದ ಎದುರು ದಂಡೆ ದಿಗಂತದಲ್ಲಿ ಬಹು ದೂರದಲ್ಲಿ ಕಾಣುತ್ತಿತ್ತು.
ಮಿಲನಿಯಮ್ ಅಥವಾ ಒಂದು ಸಹಸ್ರಮಾನದ ಅಗಾದ ವಿಸ್ತಾರದ ಅರಿವಿಲ್ಲದೆ ನಾನು ಹಾಗೆಲ್ಲಾ ಯೋಚನೆ ಮಾಡಿದ್ದೆನೆಂದು ಈಗ ಅನ್ನಿಸುತ್ತಿದೆ. ಈ ತಿಂಗಳಲ್ಲಿ ನಾವು ಸಹಸ್ರಮಾನವನ್ನು ದಾಟಿ ಮುಂದಿನ ಶತಮಾನಕ್ಕೆ ಪದಾರ್ಪಣ ಮಾಡಲಿದ್ದೇವೆ!! ನನ್ನ ಕತೆ ಪ್ರಾರಂಭಿಸುವುದಕ್ಕೆ ಮೊದಲೇ ಮುಕ್ತಾಯಕ್ಕೆ ಬರುತ್ತಿದೆ ಎನ್ನಿಸುತ್ತದೆ! ನನ್ನ ಮನಸ್ಸಿನ ಆಕಾಶದಲ್ಲಿ ಇನ್ನೂ ಕೊಟ್ಯಂತರ ನೆನಪಿನ ನಕ್ಷತ್ರಗಳು ಜಾಜ್ವಲ್ಯಮಾನವಾಗಿ ಹೊಳೆಯುತ್ತಿವೆ. ಸಾವಿರದ ಆರುನೂರು ಪುಟಗಳ ಹಾದಿ ಸಹೃದಯರ ಸಂಭ್ರಮ, ಪ್ರೋತ್ಸಾಹ, ಪ್ರೀತಿ, ವಿಶ್ವಾಸಗಳ ನಡುವೆ ಮುಗಿದದ್ದೇ ಗೊತ್ತಾಗಲಿಲ್ಲ. ಇದು ಕನ್ನಡಿಗರ ಹೃದಯ ವೈಶಾಲ್ಯಕ್ಕೆ ಜ್ವಲಂತ ಸಾಕ್ಷಿ. ಸಹಸ್ರಮಾನದ ವಿಸ್ತಾರವನ್ನೂ ಮೀರಿದ್ದು ಕನ್ನಡಿಗರ ಹೃದಯ ವೈಶಾಲ್ಯ. ಈ ಋಣದ ಕಿಂಚಿತ್ತನ್ನು ತೀರಿಸಲು ಸಹ ನಮ್ಮ ಇಡೀ ಜೀವಮಾನ ಸಾಲದು.
ಈವರೆಗೆ ದಕ್ಷಿಣ ಅಮೆರಿಕಾ ಬಗ್ಗೆ ಮಿಲನಿಯಂ ಸರಣಿಯಲ್ಲಿ ನೀವು ಓದಿದ್ದೆಲ್ಲಾ ಚಾರಿತ್ರಿಕ ವಿವರಣೆ. ಅಡ್ವೆಂಚರ್ ಪುಸ್ತಕದಲ್ಲಿ ಅದು ರಕ್ತಮಾಂಸಗಳಿಂದೊಡಗೂಡಿದ ಜೀವಂತ ವ್ಯಕ್ತಿತ್ವವಾಗಿ ಮೈತಳೆಯುವುದನ್ನು ನೋಡುತ್ತೀರಿ. ಇದು ಡ್ಯುರಲ್ ದಕ್ಷಿಣ ಅಮೆರಿಕಾದ ಗಯಾನ ದೇಶಕ್ಕೆ ಅಪೂರ್ವ ಪ್ರಾಣಿಗಳನ್ನು ಸಂಗ್ರಹಿಸಲು ಹೋದ ಸಾಹಸ ಕತೆ, ‘ತ್ರೀ ಸಿಂಗಲ್ಸ್ ಟು ಅಡ್ವೆಂಚರ್’ ಪುಸ್ತಕದ ಸಂಕ್ಷಿಪ್ತ ಪರಿಚಯ. ಡ್ಯುರಲ್ ಸಕಲ ಚರಾಚರ ವಸ್ತುಗಳೂ ಮನುಷ್ಯನಿಗೆ ಎಷ್ಟು ಆಪ್ತ ಮತ್ತು ಆತ್ಮೀಯ ಎಂದು ತೋರಿಸಿಕೊಟ್ಟು, ನನ್ನ ಯೋಚನೆಯ ಗತಿಯನ್ನೇ ಬದಲಿಸಿದ ಶ್ರೇಷ್ಠ ಬರಹಗಾರ. ಆತನ ಅಂತಃಸ್ಸತ್ವದ ಕಿಂಚಿತ್ತನ್ನಾದರೂ ಈ ಪುಸ್ತಕದ ಮುಖಾಂತರ ನಿಮಗೆ ತಲುಪಿಸಲು ಸಾಧ್ಯವಾದರೆ ನನ್ನ ಪ್ರಯತ್ನ ಸಾರ್ಥಕವಾದಂತೆ.
- ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಸರಣಿಯ ಹದಿನಾರನೆಯ ಪುಸ್ತಕ ’ಅಡ್ವೆಂಚರ್’.
ಪುಟಗಳು: 100
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !