ಅದ್ಭುತ ಯಾನ - ಥಾರ್ ಹೈಡ್ರಾಲ್ ಎಂಬ ಸಂಶೋಧಕ ಇನ್ನೈದು ಸಾಹಸಿಗಳೊಡನೆ ಸಿದ್ಧಾಂತವೊಂದನ್ನು ಸಾಬೀತುಪಡಿಸಲು ಪೆಸಿಫಿಕ್ ಮಹಾಸಾಗರದಲ್ಲಿ ಬಾಲ್ಸಾ ಮರದ ದಿಮ್ಮಿಗಳ ತೆಪ್ಪದಲ್ಲಿ ೪೩೦೦ ಮೈಲಿ ಕ್ರಮಿಸಿದ ಯಶೋಗಾಥೆ.
ಪಾಲಿನೇಷ್ಯಾ ದ್ವೀಪವೊಂದರಲ್ಲಿದ್ದಾಗ ಬರುವ ಅಲೆಗಳನ್ನು ವಿರಾಮದಲ್ಲಿ ನೋಡುತ್ತಾ ಕೂತ ಹೈಡ್ರಾಲ್ ಪೂರ್ವದಿಂದ ಪಶ್ಚಿಮಕ್ಕೆ ಸಾಗುತ್ತಿದ್ದ ಅಲೆಗಳನ್ನು ನೋಡುತ್ತಾ ಹೊಳೆದ ವಿಚಾರ ಆತನನ್ನು ತನ್ನ ವೃತ್ತಿಗೆ ವಿದಾಯ ಹೇಳಿ, ಪಾಲಿನೇಷ್ಯಾ ಜನರ ಮೂಲ ಹುಡುಕುತ್ತ ಹೊರಡುವಂತೆ ಮಾಡುತ್ತದೆ. ಪಾಲಿನೇಷ್ಯಾ ದ್ವೀಪಗಳ ಬುಡಕಟ್ಟು ಜನಾಂಗ ಹನ್ನೊಂದನೇ ಶತಮಾನದಲ್ಲಿ ವಲಸೆ ಬಂದವರೆಂದು ಕುರುಹುಗಳಿದ್ದರೂ, ಎಲ್ಲಿಂದ ಬಂದವರೆಂದು ಯಾರೂ ಸ್ಪಷ್ಟವಾಗಿ ಪ್ರತಿಪಾದಿಸಿಲ್ಲದ ಕಾರಣ ಸಂಶೋಧಿಸುತ್ತಾ ಹೊರಟ ಹೈಡ್ರಾಲ್ ಹಲವು ಕುರುಹು, ಸಾಕ್ಷಿಗಳನ್ನು ಎಡತಾಕುತ್ತಾನೆ. ಎಲ್ಲವೂ ಪಾಲಿನೇಷ್ಯಾ ಜನರು ೪೩೦೦ ಮೈಲಿ ದೂರದ ದಕ್ಷಿಣ ಅಮೆರಿಕೆಯಿಂದಲೇ ಬಂದವರೆಂಬತ್ತ ಬೆರಳು ಮಾಡುತ್ತವೆ. ಅಲ್ಲಿನ ಶಿಲೆಗಳಿಗೂ, ದಕ್ಷಿಣ ಅಮೆರಿಕೆಯ ಶಿಲೆಗಳಿಗೂ ಇರುವ ಹೋಲಿಕೆ, ೧೧ನೇ ಶತಮಾನದವರೆಗೆ ಲೋಹ ಬಳಸದೆ ಕಲ್ಲಿನ ಆಯುಧದ ಉಪಯೋಗ, ಟಿಕಿ ಎನ್ನುವ ರಾಜನ ಹೆಸರಿನ ತಳಕು, ಇವೆಲ್ಲವೂ ಹೈಡ್ರಾಲ್ ನನ್ನು ಇದೇ ಸಿದ್ಧಾಂತದೆಡೆಗೆ ಸೆಳೆಯುತ್ತವೆ. ಆದರೆ ಈ ಸಿದ್ಧಾಂತವನ್ನು ಸಂಶೋಧಕರು ಹಾಗೂ ಜಗತ್ತು ನಂಬಬೇಕಾದರೆ ಆಗಿನ ಕಾಲಕ್ಕೆ ಏಕೈಕ ಮಾರ್ಗವಾಗಿದ್ದ ಬಾಲ್ಸಾ ಮರದ ದಿಮ್ಮಿಯಿಂದ ಮಾಡಬಹುದಾದ ತೆಪ್ಪಗಳ ಮೇಲೆಯೇ ವಲಸೆ ಹೋದದ್ದೆಂದು ಸಾಧಿಸಬೇಕಾಗುತ್ತದೆ. ಈ ಪ್ರಮುಖ ಸಂಗತಿಯನ್ನು ಸಾಬೀತುಪಡಿಸಲು ನಡೆಯುವ ಸಾಹಸಯಾತ್ರೆಯೇ ಕೊನ್ ಟಿಕಿ - ತೆಪ್ಪದ ಪ್ರಯಾಣ.
ನೂರು ದಿನಗಳಿಗಿಂತ ಹೆಚ್ಚಾದ ಪ್ರಯಾಣದಲ್ಲಿ ಹೈಡ್ರಾಲ್ , ಹರ್ಮನ್ (ಎಂಜಿನೀರ್), ಎರಿಕ್ (ನಾವಿಕ), ಬೆಂಟ್ (ಸ್ಪ್ಯಾನಿಷ್ ಅನುವಾದಕ ಹಾಗೂ ವಲಸೆ ಸಿದ್ಧಾಂತದ ಪ್ರತಿಪಾದಕ), ನಟ್ ಹಾಗೂ ಟಾರ್ಸ್ಟೀನ್(ರೇಡಿಯೋ ತಜ್ಞರು)- ಹಲವಾರು ಸವಾಲುಗಳನ್ನು ಎದುರಿಸುತ್ತ, ಸಾಗರ ಜೀವಿಗಳಲ್ಲಿ ತಮ್ಮದೂ ಒಂದು ಜೀವನದ ಹಾಗೆ ಬೆರೆತುಹೋಗುತ್ತಾರೆ. ಕೊನ್ ಟಿಕಿಯ ತಳದಲ್ಲಿಯೇ ಹಾದುಹೋಗುವ ಶಾಂತ ದೈತ್ಯ ನೀಲಿ ತಿಮಿಂಗಲ, ಬೆಳಗಾಗುವಷ್ಟರಲ್ಲಿ ಕೊನ್ ಟಿಕಿಯ ಸದಸ್ಯರ ಊಟಕ್ಕಾಗಿಯೇನೋ ಅನ್ನುವ ಹಾಗೆ ಬಿದ್ದಿರುವ ಹಾರುವ ಮೀನುಗಳು, ಕೆಲವೊಮ್ಮೆ ಬಿದ್ದಿರುವ ಭಯಜನಕ ಪುಟ್ಟ ಪುಟ್ಟ ಆಕ್ಟೋಪಸ್ ಗಳು, ಯಾನ ಸುಖವೆನ್ನಿಸಿದಾಗೆಲ್ಲ ಎಚ್ಚರ ನೆನಪಿಸುವಂತೆ ಬರುವ ಬಿರುಗಾಳಿ, ದೊಡ್ಡ ಅಲೆಗಳ ಮೇಲೆ ನೃತ್ಯಗೈದರೂ ಪವಾಡದಂತೆ ಗಟ್ಟಿತನ ಕಾಯ್ದುಕೊಳ್ಳುವ ಕೊನ್ ಟಿಕಿ, ಶಾರ್ಕ್ ಗಳನ್ನು ಬೇಟೆಯಾಡುವ ಹುಂಬತನ, ಕೊನ್ ಟಿಕಿಗೆ ಕಟ್ಟಿದ ರಬ್ಬರ್ ಡಿಂಜಿಯಮೇಲೆ ತೆಪ್ಪದಿಂದ ದೂರ ಸಾಗಿ ವಾಪಸಾಗುವ ಸಂದರ್ಭಗಳು... ಈ ಅದ್ಭುತ ಯಾನ ಎಂಬ ಪುಟ್ಟ ಪುಸ್ತಕದ ತುಂಬೆಲ್ಲ ಕಟ್ಟಿದ ಸಾಗರ ಯಾನದ ರೋಮಾಂಚಕ ಚಿತ್ರಣ. ಕೊನ್ ಟಿಕಿ ಕಡೆಗೆ ಪಾಲಿನೇಷ್ಯಾ ತಲುಪುವಷ್ಟರಲ್ಲಿ ಛಿದ್ರ ಛಿದ್ರವಾದರೂ ಎಲ್ಲರನ್ನೂ ಸುರಕ್ಷಿತವಾಗಿ ದಡ ಸೇರಿಸಿ ದಕ್ಷಿಣ ಅಮೇರಿಕೆಯಿಂದ ತೆಪ್ಪದ ಮೇಲೆ ಪ್ರಯಾಣ ಸಾಧ್ಯವಿತ್ತೆಂದು ತೋರಿಸಿಕೊಟ್ಟಾಗ ಬುದ್ಧಿ ಈಗಷ್ಟೇ ನೀರಿನ ಮೇಲೆ ಮುಳುಗೇಳುವ ದೋಣಿಯೊಂದರಿಂದ ಕೆಳಗಿಳಿದ ಅನುಭವ.
ಈ ಸಾಹಸಗಾಥೆ ಪ್ರಕೃತಿಯಲ್ಲಿ ಬೆರೆಯುವ ಮನುಷ್ಯ ಸದಾ ಸುರಕ್ಷಿತ ಹೇಗೆಂಬುದನ್ನು ಮನಸ್ಸಿಗೆ ಅರಿವಾಗುವಂತೆ ತೋರಿಸಿಕೊಟ್ಟಿದೆ. ಯಾನ ಎಷ್ಟೇ ಅಪಾಯಕಾರಿಯಾದರೂ ಪ್ರಕೃತಿಯೊಂದಿಗೆ ಸಮ್ಮಿಳಿತ ಮನಸ್ಥಿತಿ ಹಾಗೂ ಸಂದರ್ಭವಿದ್ದಲ್ಲಿ ಜೀವಸಂಕುಲ ಹೇಗೆ ಹಾನಿಗೊಳಗಾಗದು ಎಂದು ಅರಿವು ಮೂಡಿಸುವ ಪಯಣ ಕೊನ್ ಟಿಕಿಯ ಯಾನ. ನೀವು ಪ್ರಕೃತಿ, ಪರಿಸರ ಕುರಿತ ಕಥೆ-ವಿಷಯಗಳನ್ನು ಇಷ್ಟಪಡುವವರಾಗಿದ್ದಲ್ಲಿ ಈ ಅದ್ಭುತ ಯಾನ ಪುಸ್ತಕ ಮರೆಯಲಾರದ ಓದು.
ಕೃಪೆ
Suprabha Suthani Matt - http://suprabhasulthanimatt.blogspot.com/
ಪುಟಗಳು: 149
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !