ಪ್ರಕಾಶಕರು: ಅಕ್ಷರ ಪ್ರಕಾಶನ
Publisher: Akshara Prakashana
'ಅಭಿಜಾತ ಕನ್ನಡ'ವೆಂಬ ಹೆಸರಿನ ಈ ಕಿರುಬರಹಗಳ ಸಂಕಲನವು ತನ್ನ ಹೆಸರಿನಲ್ಲಿರುವ ಎರಡೂ ಪದಗಳನ್ನೂ ಭೂತಗನ್ನಡಿಯಡಿಗೆ ಇಡುತ್ತದೆ - `ಅಭಿಜಾತ'ವೆಂದರೆ ಏನು? ಅದು ಬಹುಕಾಲದಿಂದ ಬಾಳಿದ್ದಕ್ಕೆ ಭಾಷೆಗೆ ಒದಗಿಬಂದ ವಿಶೇಷಣವೆ? ಅಥವಾ, ಸರ್ಕಾರವೊಂದು ತನ್ನ ನಾಡಿನ ಭಾಷೆಯೊಂದಕ್ಕೆ ದಯಪಾಲಿಸಿದ ಬಿರುದು ಮಾತ್ರವೆ? ಅಥವಾ, ಇನ್ನೂ ಪ್ರಾಥಮಿಕವಾಗಿ `ಕನ್ನಡ'ವೆಂದರೆ ಏನದು? ಅದು ಸಾವಿರಾರು ವರ್ಷಗಳಿಂದ ನಮ್ಮ ನಾಡಿನ ಪರಸ್ಪರರ ಸಂಪರ್ಕಕ್ಕೆ ಸಹಾಯಕವಾಗಿ ಬೆಳೆದುಕೊಂಡ ಮಾಧ್ಯಮ ಮಾತ್ರವೆ? ಅಥವಾ ಅದು ಒಂದು ನಾಡಿನ ಹಲವು ಸ್ಮೃತಿಕೋಶಗಳ ಸಮುಚ್ಚಯವೆ? - ಈ ಬಗೆಯ ತಾತ್ತ್ವಿಕ ಪ್ರಶ್ನೆಗಳಿಗೆ ನಮ್ಮ ನಾಡಿನ ಹಿರಿಯ ವಿದ್ವಾಂಸರಾದ ಶ್ರೀರಾಮ ಭಟ್ಟರು ಈ ಸಂಕಲನದ ಬರಹಗಳ ಮೂಲಕ ತುಂಬ ತಿಳಿಯಾದ ಮಾತುಗಳಲ್ಲಿ ಪರೋಕ್ಷ ಉತ್ತರ ಕೊಡುತ್ತಾರೆ. ಈ ಪುಸ್ತಕದ ಒಂದೊಂದೂ ಬರಹವು ಕನ್ನಡ ವಾಙ್ಮಯದಿಂದ ಒಂದು ಪದವನ್ನೋ, ಪರಿಭಾಷೆಯನ್ನೋ, ಘಟನೆಯನ್ನೋ, ಅಥವಾ ಒಂದು ಉಲ್ಲೇಖವನ್ನೋ ಎತ್ತಿಕೊಂಡು, ಅದನ್ನು ಬಗೆಬಗೆಯ ಭಾಷಾ-ಸಾಹಿತ್ಯ-ಸಂದರ್ಭಗಳಲ್ಲಿ ಕಂಡರಿಸುತ್ತ, ಭಾಷೆ-ಸಾಹಿತ್ಯಗಳು ನಡೆಸುವ ಸಂಕೀರ್ಣ ಕೊಡುಕೊಳೆಯ ವ್ಯವಹಾರಗಳನ್ನು ತೆರೆದಿಡುತ್ತದೆ. ಮಾತ್ರವಲ್ಲ, ಇಂಥ ಸಂಬಂಧದ ತಿಳುವಳಿಕೆಯ ಮೂಲಕವೇ ಕನ್ನಡವು ತನ್ನ ಅಭಿಜಾತತೆಯನ್ನು ಅನ್ವೇಷಿಸಿಕೊಳ್ಳಬೇಕು - ಎಂಬ ಅವ್ಯಕ್ತ ಸೂಚನೆಯೂ ಈ ಬರಹಗಳ ಹಿಂದಿರುವಹಾಗಿದೆ. ಓದುವುದಕ್ಕೆ ಭಾರವಾಗದ, ಆದರೆ ಘನವಾದ ಪಾಂಡಿತ್ಯ ಮತ್ತು ವಿಸ್ತಾರವಾದ ಓದಿನಿಂದ ಕನ್ನಡ ನುಡಿಯನ್ನು ಕುರಿತ ನಮ್ಮ ತಿಳಿವನ್ನು ಗಟ್ಟಿಗೊಳಿಸುವ ಅಪೂರ್ವ ಲೇಖನಗಳು ಇಲ್ಲಿವೆ.
ಅಕ್ಷರ ಕೆ.ವಿ.
ಪುಟಗಳು: 210
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !