‘ಕನಸಿನ ದನಿ' ಸಂಕಲನದಲ್ಲಿ ಒಟ್ಟು ನಲವತ್ತಾರು ಕವಿತೆಗಳಿವೆ. ಕೆಲವು ಮೊದಲ ಓದಿಗೆ ತೆರೆದುಕೊಂಡರೆ, ಮತ್ತೆ ಕೆಲವು ಓದುಗರನ್ನು ದಂಗುಬಡಿಸುತ್ತವೆ. ಹಲವು ಅರ್ಥದ ನೆಲೆಗಳು ಗೋಚರಿಸುತ್ತವೆ. ಸಾಮಾನ್ಯ ಓದುಗರಿಗೆ ಸವಾಲಾಗುತ್ತವೆ. ಸಂಕಲನದ ಮೊದಲ ಕವಿತೆ ‘ತಿಮಿರ' –ಅಜ್ಜಿಯೊಬ್ಬಳ ಕಥೆಯಿಂದ ಮೂಡುವ ಭಯ ಸ್ಥಾಯಿಭಾವವಾಗುತ್ತದೆ ಹಾಗೂ ಕವಿತೆಗೆ ರಾಜಕೀಯ ಆಯಾಮ ಒದಗಿಬಂದು ವಿಭಿನ್ನ ಅರ್ಥಗಳ ನೆಲೆಗಳು ಹುಟ್ಟಿಕೊಳ್ಳುತ್ತವೆ. ‘ಹಗ್ಗ ಹಾವಾಗಿ ಹತನಾಗುವ ಉಪಮೆ, ಅರಿವ ಹಣತೆ ಆರದಿರೆ ನಿತ್ಯ ಹುಣ್ಣಿಮೆ’ಎನ್ನುವಲ್ಲಿ ಕವಿಯ ವೈಚಾರಿಕ ನಿಲುವು ತೆರೆದುಕೊಳ್ಳುತ್ತದೆ.
ಕನಸಿನ ಕನವರಿಕೆಯೊ.... ನೋಟದ ಭ್ರಮೆಯೊ ಅನ್ನಿಸುವ ಚಿತ್ರಗಳು ’ಕನಸಿನ ದನಿ'ಯಲ್ಲಿವೆ. ಹಲವು ಸಲ ಬದುಕಲ್ಲಿ ಅರ್ಥ ಹುಡುಕುವುದೇ ವ್ಯರ್ಥ ಎನ್ನುವ ಅನುಭಾವಿಗಳ ಮಾತಿನ ರೂಪಕದಂತಿವೆ ಇಲ್ಲಿನ ಕೆಲವು ರಚನೆಗಳು. ಸಹಜ ಬದುಕು ಮತ್ತು ಯಾಂತ್ರಿಕ ಬದುಕಿನೊಳಗೆ ಹುಲಿಯ ಪ್ರವೇಶವಾಗುತ್ತದೆ. ಬದುಕಿನ ಸಹಜತೆ ತೊಲಗಿ ಕ್ರೌರ್ಯ ಪ್ರವೇಶ ಪಡೆಯುತ್ತದೆ. ಕನಸಿನೊಳಗಿನ ಬದುಕಲ್ಲ, ಬದುಕೇ ಒಂದು ಕನಸಾಗಿ ಬಿಡುವ ವೈಚಿತ್ರ್ಯವನ್ನು ’ಕನಸಿನ ದನಿ' ಕವಿತೆ ಧ್ವನಿಸುತ್ತದೆ.
ಅಜಿತ್ ಹರೀಶಿ ಅವರ ಇಲ್ಲಿನ ಕವಿತೆಗಳು ಆದರ್ಶಗಳಿಂದ, ಹುಟ್ಟುವ ಆಕ್ರೋಶಗಳಿಗೆ ಬಲಿಯಾಗದೆ. ಆದರ್ಶಗಳನ್ನು ಬದುಕಿನ ಯಥಾರ್ಥಕತೆ ಯಲ್ಲಿ ಶೋಧಿಸುವ. ಕವಿದೃಷ್ಠಿಯ ಬೆಳಕಿನಲ್ಲಿಸಾಗುತ್ತವೆ. ಈ ಶೋಧದ ಪ್ರಕ್ರಿಯೆಯು ಕಾವ್ಯ ಪರಂಪರೆಯ ಮುಖ್ಯವಾಗಿ ಆಧುನಿಕ ಕಾವ್ಯ ಪರಂಪರೆಯ ಅರಿವನ್ನುಹೊಂದಿದ್ದೂ ಸ್ಥಾಪಿತ ಸಿದ್ಧಾಂತಗಳಿಗೆ ಶರಣಾಗದೆ ಕಿರಿದಾದ, ಆದರೆ ಸಶಕ್ತವಾದ ಹೊಸ ಜಾಡನ್ನು ಅನ್ವೇಷಿಸುತ್ತವೆ. ಆದ್ದರಿಂದಲೇ ಪರ-ವಿರೋಧಗಳು ವ್ಯಕ್ತಿ ಮತ್ತು. ಗುಂಪಿನಲ್ಲಿ ಕಾಣಿಸದೆ, ವಸ್ತುವಿನಲ್ಲಿ ಕಾಣಿಸುತ್ತದೆ. 'ಒಂದು ಸನ್ನಿವೇಶದಲ್ಲಿ ಶೋಷಕನಾಗುವವನೇ, ಮತ್ತೊಂದು ಸನ್ನಿವೇಶದಲ್ಲಿ ಶೋಷಿತನೂ ಆಗುವ ಯಥಾರ್ಥತೆಯನ್ನು ಗುರುತಿಸುವ ತಾತ್ವಿಕತೆ ಇಲ್ಲಿನ.
ಕವಿತೆಗಳಲ್ಲಿ ಕಂಡು ಬರುವ ಕಾವ್ಯ ಶಕ್ತಿಯೂ, ಕಾವ್ಯ ಸೌಂದರ್ಯವೂ ಆಗಿದೆ.
ಅಜಿತ್ ಅವರ ಭಾಷಾ ಪ್ರಯೋಗ ಸ್ವಂತದ್ದೇ ಆಗಿದ್ದು, ಕಾವ್ಯ ವಸ್ತುವನ್ನು ಸ್ವತಂತ್ರ ಕಾವ್ಯ ಸ್ವರೂಪದಲ್ಲಿ ಕಡೆದು ನಿಲ್ಲಿಸುತ್ತದೆ.ಭಾಷಾ ಪ್ರಯೋಗದ ಈ ಆನನ್ಯತೆಯು ವಸ್ತುವನ್ನು ದೃಶ್ಯೀಕರಣಕ್ಕೆ. ಒಳಪಡಿಸಿಯೂ, ದೃಶ್ಯೀಕರಣದ ಮಿತಿಯ ಸಮಸ್ಯೆಗಳ ಜಾಡಿನಿಂದ ಆಚೆಗೆ ಒಯ್ಯಲು ಸಮರ್ಥವಾಗಿವೆ. ಆದ್ದರಿಂದಲೇ ಇದು ಹೊಸ ಹೆಜ್ಜೆಯ ಜಾಡು. ಅಜಿತ್ ಅವರ ಈ ಹಾದಿ ಬಲಯುತವಾಗಿ ಕನ್ನಡ ಕಾವ್ಯ ಭೂಮಿಕೆ ಮತ್ತೊಂದು ಸಾಧ್ಯತೆಯನ ಕ೦ಡುಕೊಳ್ಳುವಂತಾಗಲಿ ಎಂದು ಆಶಿಸುತ್ತೇನೆ.
- ಅರವಿಂದ ಚೊಕ್ಕಾಡಿ
ಕನಸಿನ ದನಿ, ಡಾ|| ಅಜಿತ್ ಹರೀಶಿ,Kanasina Dani, Ajit Harishi