ಕತೆಗಾರ ಕುಮಾರ ಬೇಂದ್ರೆ ಅವರ ನಾಲ್ಕು ಬೇರೆ ಬೇರೆ ಕಥಾಗುಚ್ಛಗಳಿಂದ ಆಯ್ದ ೨೫ ಅತ್ಯುತ್ತಮ ಕತೆಗಳ ಸಂಕಲನವಿದು. `ಇಲ್ಲಿನ ಕತೆಗಳು ವಿಭಿನ್ನ ಚೌಕಟ್ಟಿನಲ್ಲೇ ಮುಕ್ತವಾಗಿವೆ. ಓದಿಸಿಕೊಳ್ಳುತ್ತವೆ, ಸಂವೇದನೆಯನ್ನು ಕೆದಕುತ್ತವೆ. ಅಲ್ಲಲ್ಲಿ ಚಿಂತನೆಗೂ ಹಚ್ಚುತ್ತವೆ. ಒಂದು ಜನಜೀವನದ ಸಂಕಷ್ಟಗಳನ್ನು ಮನಸ್ಸಿಗೆ ತಾಕುವಂತೆ ವಿವರಿಸುತ್ತವೆ. ವಿಶಿಷ್ಟ ವ್ಯಕ್ತಿಗಳ ಮನಸ್ಥಿತಿಯನ್ನು ಸಂದರ್ಭಕ್ಕೆ ಅನುಸಾರ ಅನಾವರಣಗೊಳಿಸುತ್ತವೆ. ಆತ್ಮಸಾಕ್ಷಿ ಕೆಣಕುತ್ತವೆ. ಕತೆಗಾರ ಇಲ್ಲಿ ತನ್ನ ವ್ಯಕ್ತಿತ್ವವೇ ಅನಾವರಣಗೊಳ್ಳುವ ಬಗೆಯಲ್ಲಿ ಇಲ್ಲಿಯ ಹಲವು ಕತೆಗಳನ್ನು ಬರೆದಿದ್ದಾನೆ. ಆ ಮೂಲಕ ಅಖಂಡ ಬದುಕಿನ ವಿಮರ್ಶಕನಾಗಿ ನಾನಾ ಕೋನಗಳಲ್ಲಿ ನಿಂತು ಜೀವನವನ್ನು ಅರ್ಥೈಸಿಕೊಳ್ಳುತ್ತ ಬರೆದ ಕತೆಗಳಿವು’ ಎಂದು ಈ ಕೃತಿಗೆ ಮುನ್ನುಡಿ ಬರೆದಿರುವ ಕತೆಗಾರ್ತಿ ಸುನಂದಾ ಕಡಮೆ ಅವರು ಇಲ್ಲಿನ ಕತೆಗಳ ಕುರಿತು ವಿವರಿಸಿದ್ದಾರೆ. ಈ ಕೃತಿಗೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ನಿಂದ `ಜಿ.ಎನ್. ಹೇಮರಾಜ ದತ್ತಿ ಪ್ರಶಸ್ತಿ’ ಲಭಿಸಿದೆ. ಈ ಆಡಿಯೋ ಬುಕ್ನಲ್ಲಿರುವ ಕತೆಗಳನ್ನು ಕತೆಗಾರ ಕುಮಾರ ಬೇಂದ್ರೆ ಅವರೇ ಓದಿದ್ದಾರೆ. ಓದಿನೊಂದಿಗೆ ಸಂಗೀತವನ್ನೂ ಅಳವಡಿಸಲಾಗಿದ್ದು, ಇದರ ಒಟ್ಟು ಅವಧಿ ೦೭ ಗಂಟೆ ೧೭ ನಿಮಿಷ ಇದೆ. ಇಲ್ಲಿನ ಎಲ್ಲ ಕತೆಗಳ ಶಿರ್ಷಿಕೆಗಳು ಹೀಗಿವೆ: ನಿಗೂಢ ಕಾಡಿನೊಳಗೆ, ಸಂಜೆಗತ್ತಲಲ್ಲಿ ಹೊತ್ತಿದ ದೀಪ, ದೇವರ ನೆಲೆ, ಶಿವಪುರದ ಸಿದ್ದಪ್ಪನ ಜಾತ್ರೆ, ಕೆಂಪು ದೀಪದ ಮನೆಯಲ್ಲಿ, ದೂರ ಸರಿದವಳು, ನಿರ್ವಾಣ, ಮುಡಿದ ಹೂ ಮತ್ತೆ ಅರಳಿತು, ಮತ್ತೆ ಮಾಡುವ ಕತೆ, ನಿಗೂಢ ಸರ್ಪದ ಮುಖಾಮುಖಿ, ಅದೃಶ್ಯ ಲೋಕದ ಮಾಯೆ, ಪಾರಿವಾಳ, ರೊಟ್ಟಿ ಮತ್ತು ಕಲೆ, ಸಾವೆಂಬ ಕಾಯದ ನೆರಳು, ಮಾಯೆಯೋ ಮರುಳೊ, ಮಾದಪ್ಪನ ಸಾವು, ರಕ್ತ, ಗಾಂಧಿ ವೃತ್ತದ ದಂಗೆ, ಚಹರೆ, ಅಕಾಲ, ಕಾಮನ ಬಿಲ್ಲು, ಅವನು, ಅವಳು ಮತ್ತು..., ರೂಪಾಂತರ, ಟ್ರಾಫಿಕ್ ಜಾಮ್, ಪ್ರತಿಭಟನೆ.