ಶುಭಶ್ರೀ ಭಟ್ಟ ಅವರ ಲೇಖನಗಳಲ್ಲಿ ವಿಶೇಷವಾಗಿ ಸೆಳೆಯುವುದು ಭಾಷೆ, ಬರವಣೆಗೆಯ ಶೈಲಿ. ಪ್ರತಿಯೊಂದು ಲೇಖನವೂ ನಿರಾಯಾಸವಾಗಿ ಓದಿಸಿಕೊಂಡು ಹೋಗುತ್ತದೆ. ಹದವಾದ ನಿರೂಪಣೆ, ತೀವ್ರ ಭಾವಾಭಿವ್ಯಕ್ತಿ ಎಲ್ಲವನ್ನೂ ಸಮತೂಕದಲ್ಲಿ ಬೆರೆಸಿ ಬರೆಯುವ ಈಕೆಯ ವ್ಯವಧಾನ ಓದುಗರಿಗೆ ಒಂದು ಚೆಂದದ ಓದನ್ನು ಕೊಡುತ್ತದೆ. ಇದು ನಮ್ಮ ಬದುಕಲ್ಲೇ ಘಟಿಸಿದ್ದ ಸಂಗತಿಯೇನೋ ಅನ್ನುವಷ್ಟು ಆಪ್ತವೆನ್ನಿಸುತ್ತದೆ. ತಾನು ಕಂಡದ್ದು, ಕೇಳಿದ್ದು, ಅನುಭವಿಸಿದ್ದು ಎಲ್ಲವೂ ಉದಾಹರಣೆಯಾಗಿ, ನಂತರ ಅದರಲ್ಲೇ ಒಂದು ನೀತಿಯೂ ಅಡಕವಾಗಿ, ಕೊನೆಗೆ ಬದುಕಿಗೊಂದು ಸ್ಫೂರ್ತಿಯಾಗಿ ಬದಲಾಗುತ್ತದೆ. ಮೊದಲ ಲೇಖನ ರೇಡಿಯೋ ಎಂಬ ಪುಟ್ಟ ಪೆಟ್ಟಿಗೆಯ ಜಗತ್ತಿನಲ್ಲಿ, ರೇಡಿಯೋವನ್ನು ರೂಪಕವಾಗಿ ಇಟ್ಟುಕೊಂಡೇ ಅಮ್ಮನ ಒಳಗುದಿಯನ್ನು ನಾಜೂಕಾಗಿ ಹರವಿಟ್ಟ ಬಗೆಯಂತೂ ಹೃದಯಸ್ಪರ್ಶಿ. ಕವಿ ಮನಸ್ಸುಳ್ಳವರಿಗೆ ಮಲ್ಲಿಗೆಯೆಂದರೆ ಅದು ಬರಿ ಹೂವಲ್ಲ, ಅದೊಂದು ಕನಸು, ಏಕಾಗ್ರತೆ ಎನ್ನುವ ಸತ್ಯ ಇಲ್ಲಿ ಗೋಚರಿಸುತ್ತದೆ. ಎಳೇ ಕಾಗದದೆಲೆಯ ಗೀಟು, ಅವರವರ ಬೆಟ್ಟದಲಿ ಕಲ್ಲುಂಟು ಮುಳ್ಳುಂಟು, ಗಂಡಸಿಗೂ ಗೊತ್ತಾಗಲಿ ಗೌರಿ ದುಃಖ ಲೇಖನಗಳು, ಇವರ ಸೂಕ್ಷ್ಮತೆಗೆ ಹಿಡಿದ ಕೈಗನ್ನಡಿ. ವಸ್ತು-ವಿಷಯವನ್ನು ಅನುಭವದ ಪಾಕದಲ್ಲಿ ಕರಗಿಸಿ, ಸಮಾಜದ ವೈರುಧ್ಯತೆಗೆ ಬೆಟ್ಟು ಮಾಡಿ ತೋರಿಸುವ ಗಟ್ಟಿತನವನ್ನು ಇದರಲ್ಲಿ ಕಾಣಬಹುದು. ಇಲ್ಲಿ ಸ್ತ್ರೀವಾದಿ ದೃಷ್ಟಿಕೋನದ ಬದಲು ಸ್ತ್ರೀಯ ದೃಷ್ಟಿ ಕಾಣಸಿಗುತ್ತದೆ. ಎಲ್ಲೂ ಏಕತಾನತೆ ಮೂಡದಂತೆ, ಯಾವುದೇ ಸಿದ್ದಾಂತಕ್ಕೆ ಅಂಟಿಕೊಳ್ಳದಂತೆ, ಮನುಷ್ಯ ಸಹಜ ಭಾವನೆಗಳಿಗೆ ತಕ್ಕನಾಗಿ, ವಿಚಾರವನ್ನು ಪ್ರಸ್ತುತಪಡಿಸಿರುವುದು ಈ ಕೃತಿಯ ವಿಶೇಷತೆ.