…. ಆದರೆ, ನಾವಿನ್ನೂ ಸೋತಿಲ್ಲ’’
ಇದು ವಿನಯ್ ಮಾಧವ್ ರವರ ಈ ಪುಸ್ತಕದ ಅತ್ಯಂತ ಸೂಕ್ತ ಉಪಶೀರ್ಷಿಕೆ. ಪರಿಸರ ಸಂರಕ್ಷಣೆ ಖಂಡಿತ ಸಾಧ್ಯ ಎಂಬ ಸಕಾರಾತ್ಮಕ ಭಾವನೆಯನ್ನು ಓದುಗರಲ್ಲಿಯೂ ಸ್ಪುರಿಸಬಲ್ಲ ಕೃತಿ.
ನಾಗರಹೊಳೆಯಲ್ಲಿ ಅರಣ್ಯಾಧಿಕಾರಿಯಾಗಿದ್ದ ಶ್ರೀ ಚಿಣ್ಣಪ್ಪನವರ ಹಸರಿನಲ್ಲಿ ತಮಗೆ ಬಂದ ಪತ್ರದ ಬೆನ್ನು ಹತ್ತಿ, ಒಂದು ರೀತಿಯ ಪತ್ತೇದಾರಿ ಕಥೆಯಂತೆ ಲೇಖಕರ ಬದುಕಿನ ಪರಿಸರ ಪಯಣ, ಗಂಭೀರ ವಿದ್ಯಾರ್ಥಿಯಿಂದ ಶುರುವಾಗಿ, ಪತ್ರಿಕಾ ವರದಿಗಾರನಾಗಿ, ಸಂಘರ್ಷಕನಾಗಿ, ಕೊನೆಗೆ ಕಾನೂನು ರೀತ್ಯಾ ಹೋರಾಟಕ್ಕಿಳಿಯುವವರೆಗೂ ಸಾಗಿದೆ.
ಈ ಹಾದಿಯಲ್ಲಿ ವಿನಯ್ ಹಲವು ಮುಖವಾಡಗಳ ಮುಖಾಮುಖಿಯಾಗುತ್ತಾರೆ; ಸುಳ್ಳು ವರದಿ ಸೃಷ್ಟಿಸುವ ವಿಜ್ಞಾನಿಗಳು, ಕೋಟ್ಯಂತರ ಆಮಿಷ ನೀಡುವ ಉದ್ಯಮಿಗಳು, ಭ್ರಷ್ಟ, ಜಿದ್ದಿನ ಅಧಿಕಾರಿಗಳು, ಮೀನಮೇಷ ಎಣಿಸುವ ಕೋರ್ಟ್ ಕಛೇರಿಗಳು…. ಹೀಗೆ ಸಾಲು ಸಾಲು.
ಆದರೆ ಓದುಗರ ಮನದಲ್ಲಿ ಉಳಿಯುವುದು, ಈ ದುರವಸ್ಥೆಯ ನಡುವೆಯೂ ಎದ್ದು ನಿಲ್ಲುವ ಧೀಮಂತ ವ್ಯಕ್ತಿಗಳು. ಕಾಡಿನ ಜೀವ ಶ್ರೀ ಚಿಣ್ಣಪ್ಪನವರ ಚೇತನವಂತೂ ಪುಸ್ತಕದ ತುಂಬಾ ಅಂತರ್ಜಲದಂತೆ ಹರಿದಾಡಿದೆ; ಹಾಗೇ, ಅಧಿಕಾರಸ್ಥರೆಂದರೆ ಮೈಲು ದೂರ ಓಡುತ್ತಿದ್ದರೂ, ಕುದುರೆಮುಖ ವನ್ಯಜೀವಿ ತಾಣವನ್ನು ಉಳಿಸುವ ಒಂದೇ ಉದ್ದೇಶದಿಂದ ಮಂತ್ರಿಗಳ ಮನೆಗೆ `ಡಿನ್ನರ್’ಗೆ ಹೋಗಲು ಒಪ್ಪಿಕೊಂಡ ಶ್ರೀ ಪೂರ್ಣಚಂದ್ರ ತೇಜಸ್ವಿ: ಪರಿಸರ ಕುರಿತ ನೈಜ ಕಾಳಜಿ ಹಾಗೂ ತಮ್ಮ ಕುಟುಂಬದ ಗಣಿ ವ್ಯವಹಾರಗಳ ನಡುವೆ ತೊಳಲಾಡುವ ದಿವಂಗತ ಶ್ರೀ ಎಂ ವೈ ಘೋರ್ಪಡೆ, ಪರಿಸರವನ್ನೇ ಧ್ಯಾನಿಸುವ ಜಾರ್ಜ್ ಶಾಲ್ಹಾರ್, ಉಲ್ಲಾಸ್ ಕಾರಂತ್, ಪ್ರವೀಣ್ ಭಾರ್ಗವ್, ಡಿ ವಿ ಗಿರೀಶ; ಇವರೆಲ್ಲಾ ಭವಿಷ್ಯದ ಬಗ್ಗೆ ಅಪಾರ ಆಶೆ ಹುಟ್ಟಿಸುತ್ತಾರೆ.
ವರದಿಗಾರನ ಡೈರಿಯಂತಿದ್ದರೂ, ಅಪಾರ ಪ್ರೀತಿ ಹಾಗೂ ನೈತಿಕ ನೆಲೆಗಟ್ಟಿನ ಕೃತಿ: ಕರ್ನಾಟಕದ ಹಲವು ಪರಿಸರ ಸಂಘರ್ಷಗಳ ಬಹು ಮುಖ್ಯ ದಾಖಲೆಯೂ ಹೌದು.
ಪ್ರದೀಪ್ ಕೆಂಜಿಗೆ