ನಮಸ್ಕಾರ ಕುಂದಾಪ್ರ ಬಂಧುಗಳಿಗೆ..
ಕನ್ನಡ ನಮ್ಮ ನಿಮ್ಮೆಲ್ಲರ ಭಾಷೆ. ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಬರವಣಿಗೆಯ ಇತಿಹಾಸ ಇರುವ ಪ್ರಪಂಚದ ಅತ್ಯಂತ ಹಳೆಯ ನುಡಿಗಳಲ್ಲಿ ಒಂದು ನಮ್ಮ ಕನ್ನಡ. ಇಂತಹ ಹಿರಿಮೆ-ಗರಿಮೆ ಇರುವ ಭಾಷೆಯಲ್ಲಿ ನೂರಾರು ವರ್ಷಗಳಿಂದ ಅತ್ಯದ್ಭುತವಾದ ಕತೆ, ಕಾದಂಬರಿ, ಜನಪದ, ಕಾವ್ಯ ಎಲ್ಲವೂ ರಚನೆಗೊಳ್ಳುತ್ತ ನಮ್ಮ ನುಡಿಯ ಶ್ರೀಮಂತಿಕೆಯನ್ನು ಹೆಚ್ಚಿಸುವುದರ ಜೊತೆ ಕನ್ನಡಿಗರಿಗೊಂದು ಭವ್ಯವಾದ ಇತಿಹಾಸದ ಪರಂಪರೆಯನ್ನು ಕೊಟ್ಟಿದೆ.
ಇದು ಡಿಜಿಟಲ್ ಯುಗ. ಮೊಬೈಲು, ಸಾಮಾಜಿಕ ಜಾಲತಾಣಗಳು, ಇಂಟರ‍್ನೆಟ್ ಎಲ್ಲವೂ ನಾವು ಮಾಹಿತಿ ಮತ್ತು ಮನರಂಜನೆಯನ್ನು ಪಡೆಯುವ ರೀತಿಯನ್ನು ಅಮೂಲಾಗ್ರವಾಗಿ ಬದಲಾಯಿಸಿವೆ. ಕೋಟಿಗಟ್ಟಲೆ ಕನ್ನಡ ಭಾಷಿಕರು ಇಂದು ಈ ಡಿಜಿಟಲ್ ಸಾಧ್ಯತೆಗಳ ಮೂಲಕ ಎಲ್ಲವನ್ನೂ ಪಡೆದುಕೊಳ್ಳುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಕನ್ನಡ ಪುಸ್ತಕಗಳೂ ಡಿಜಿಟಲ್ ಸ್ಪರ್ಷ ಪಡೆದು ಕಾಲಕ್ಕೆ ತಕ್ಕಂತೆ ಅಂಗೈಯಲ್ಲಿರುವ ಮೊಬೈಲ್ ಮೂಲಕವೇ ಇಬುಕ್ ಇಲ್ಲವೇ ಆಡಿಯೋಪುಸ್ತಕದ ರೂಪದಲ್ಲಿ ಜನರನ್ನು ತಲುಪುವಂತೆ ಮಾಡುವ ಪ್ರಯತ್ನವನ್ನು ಮಾಡಿ ಸಾವಿರಾರು ಹೊಸ ಓದುಗರನ್ನು ಕನ್ನಡಕ್ಕೆ ತಂದು ಕೊಟ್ಟಿದೆ ಕನ್ನಡಿಗರೇ ಸೇರಿ ಕಟ್ಟಿರುವ ಮೈಲ್ಯಾಂಗ್ ಮೊಬೈಲ್ ಅಪ್ಲಿಕೇಶನ್. ಕನ್ನಡದ ಎಲ್ಲ ಮೇರು ಬರಹಗಾರರು, ಪ್ರತಿಷ್ಟಿತ ಪ್ರಕಾಶಕರು, ಹೊಸ ತಲೆಮಾರಿನ ಬರಹಗಾರರ ಪುಸ್ತಕಗಳನ್ನು ಡಿಜಿಟಲ್ ರೂಪದಲ್ಲಿ ಪ್ರಪಂಚದ ಎಲ್ಲಿಂದ, ಯಾವಾಗ ಬೇಕಿದ್ದರೂ ಮೊಬೈಲ್ ಮೂಲಕ ಓದುವ, ಕೇಳುವ ಆಯ್ಕೆ ಮೈಲ್ಯಾಂಗ್ ಕಲ್ಪಿಸಿದೆ.
ಇದೀಗ ಅಂತರ್ಜಾಲದಲ್ಲಿ ಕಳೆದು ಹೋಗಿರುವ ಹೊಸ ತಲೆಮಾರಿನ ಕನ್ನಡಿಗರನ್ನು ಮತ್ತೆ ಓದಿನತ್ತ ಕರೆ ತರಲು ಮೈಲ್ಯಾಂಗ್ ಶುರು ಮಾಡಿರುವ ಹೊಸ ಅಭಿಯಾನವೇ "ಮೈಲ್ಯಾಂಗ್ ಆಡಿಯೋಕತೆಗಳು". ಸಮಯವಿಲ್ಲದ ಈ ಪೀಳಿಗೆಗೆ ಕೇವಲ ಹದಿನೈದು ನಿಮಿಷಗಳಲ್ಲಿ ಕೇಳಿ ಮುಗಿಸುವಂತಹ ನೂರಾರು ಆಡಿಯೋಕತೆಗಳನ್ನು ಮೈಲ್ಯಾಂಗ್ ಉಚಿತವಾಗಿ ತಂದಿದೆ. ಕರ್ನಾಟಕದ ಉದ್ದಗಲದ ನೂರಾರು ಕತೆಗಾರರು, ಕತೆಗಾರ್ತಿಯರು ಬರೆದ ಕತೆಗಳನ್ನು ನಾಡಿನ ಮೂಲೆ ಮೂಲೆಯ ದನಿ ಕಲಾವಿದರು ತಮ್ಮ ಧ್ವನಿಯಲ್ಲಿ ರೆಕಾರ್ಡ್ ಮಾಡಿದ ನಂತರ ಅದಕ್ಕೆ ಸೂಕ್ತ ಹಿನ್ನೆಲೆ ಸಂಗೀತ, ಸೌಂಡ್ ಸೇರಿಸಿ ಒಂದು ಅದ್ಭುತವಾದ ಸಿನೆಮಾ ನೋಡುವ ಅನುಭವ ನೀಡುವ ಆಡಿಯೋಕತೆಯಾಗಿಸಿ ಅದನ್ನು ಜನರಿಗೆ ಉಚಿತವಾಗಿ ತಲುಪಿಸುತ್ತಿದೆ ಮೈಲ್ಯಾಂಗ್. ಇದು ಹೊಸತಲೆಮಾರಿನ ಸಾವಿರಾರು ಓದುಗರನ್ನು ಆಡಿಯೋಕತೆಗಳ ಮೂಲಕ ಮತ್ತೆ ಕನ್ನಡ ಪುಸ್ತಕಗಳ ಓದಿನತ್ತ ಸೆಳೆಯುತ್ತಿದೆ. ಕತೆಗಾರರು ಮತ್ತು ದನಿ ಕಲಾವಿದರಿಗೆ ಒಂದು ವೇದಿಕೆ ಕಲ್ಪಿಸುವುದರ ಜೊತೆ ಅವರಿಗೆ ಸಾವಿರಾರು ಹೊಸ ಓದುಗರ ಮನ್ನಣೆ, ಪ್ರೀತಿಯನ್ನೂ ಈ ಅಭಿಯಾನ ಗಳಿಸಿ ಕೊಡುತ್ತಿದೆ. ಶುರುವಾಗಿ ಮೂರೇ ತಿಂಗಳಲ್ಲಿ ಇಲ್ಲಿ ಹತ್ತಿರ ಹತ್ತಿರ ಐನೂರು ಆಡಿಯೋಕತೆಗಳು ಹರಿದು ಬಂದಿರುವುದು ಈ ಅಭಿಯಾನಕ್ಕೆ ಸಿಗುತ್ತಿರುವ ಮನ್ನಣೆಯನ್ನು ತೋರುತ್ತಿದೆ.
-----------X-------------
ಮಲೆನಾಡು, ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಸೀಮೆಯ ನೂರಾರು ಕತೆಗಳು ಇಲ್ಲಿ ಬರುತ್ತಿರುವಾಗ ನಮ್ಮ ಕುಂದಾಪುರ ಸೀಮೆಯ ಬರಹಗಾರರು, ದನಿ ಕಲಾವಿದರೂ ಇಲ್ಲಿ ಹೆಚ್ಚೆಚ್ಚು ಕಾಣುವಂತಾಗಬೇಕು ಅನ್ನುವ ಹಂಬಲ ಮೈಲ್ಯಾಂಗ್ ಸಂಸ್ಥೆಯ ಸ್ಥಾಪಕರಲ್ಲೊಬ್ಬರಾದ ವಸಂತ ಶೆಟ್ಟಿಯವರದ್ದು. ಅಂತೆಯೇ ಈ ಪರಿಚಯ ಬರಹವನ್ನು ಕುಂದಾಪ್ರ.ಕಾಂ ಅಲ್ಲಿ ಪ್ರಕಟಿಸಲಾಗಿದೆ.
ಆಸಕ್ತ ಬರಹಗಾರ/ಗಾರ್ತಿಯರು: www.mylang.in/mystory ಕೊಂಡಿಗೂ
ಕತೆ ಓದುವ ಆಸಕ್ತಿಯುಳ್ಳವರು : www.mylang.in/myvoice ಕೊಂಡಿಗೆ ಭೇಟಿ ಕೊಡಬಹುದು..
ಉಣ್ಕ್, ತಿನ್ಕ್, ದಿನಾ ಒಳ್ಳೊಳ್ಳೆ ಆಡಿಯೋಕತಿ ಕೇಣ್ಕ್ ...ಶುರು ಮಾಡುರೆಲೆ.. :)