ಮೈಲ್ಯಾಂಗ್ ಈಸಿ ಪಬ್ಲಿಶ್ ಒಪ್ಪಂದ
ಮೈಲ್ಯಾಂಗ್ ಈಸಿ ಪಬ್ಲಿಶ್ ಒಪ್ಪಂದ
ಮೈಲ್ಯಾಂಗ್ ಸಂಸ್ಥೆ (ಇನ್ನು ಮುಂದೆ “ಡಿಜಿಟಲ್ ಹಂಚಿಕೆದಾರರು” ಎಂದು ಕರೆಯಲಾಗುವುದು) ನಡೆಸುತ್ತಿರುವ ಮೈಲ್ಯಾಂಗ್ ವೇದಿಕೆಯಲ್ಲಿ ಮೈಲ್ಯಾಂಗ್ ಈಸಿ ಪಬ್ಲಿಶ್ ಯೋಜನೆಯಡಿ ಪುಸ್ತಕವನ್ನು ಇಬುಕ್ ಇಲ್ಲವೇ ಆಡಿಯೋಬುಕ್ ಆವೃತ್ತಿಯಲ್ಲಿ ಪ್ರಕಟಿಸಲು ಮಾಡಿಕೊಳ್ಳಲಾಗುತ್ತಿರುವ ಒಪ್ಪಂದ ಇದಾಗಿದೆ. ಇದರಂತೆ ಮೈಲ್ಯಾಂಗ್ ಈಸಿ ಪಬ್ಲಿಶ್ ವೇದಿಕೆಯಲ್ಲಿ ನಾನು/ನಾವು ಬರಹಗಾರರಾಗಿ/ಪ್ರಕಾಶನ ಸಂಸ್ಥೆಯಾಗಿ ಖಾತೆಯನ್ನು ತೆರೆದಿದ್ದು (ಇನ್ನು ಮುಂದೆ “ನೇರ ಪ್ರಕಾಶಕರು” ಎಂದು ಕರೆಯಲಾಗುವುದು) ನನ್ನ/ನಮ್ಮ ಬಳಿ ಪೂರ್ತಿ ಕೃತಿ ಸ್ವಾಮ್ಯ ಹೊಂದಿರುವ ಕೃತಿ/ಕೃತಿಗಳನ್ನು ಈ ಕೆಳಗಿನ ಶರತ್ತು ಮತ್ತು ನಿಬಂಧನೆಗಳ ಅನ್ವಯ ಪ್ರಕಟಿಸಲು ಒಪ್ಪಿ ಈ ಡಿಜಿಟಲ್ ಒಪ್ಪಂದವನ್ನು ಮಾಡಿಕೊಳ್ಳುತ್ತಿದ್ದೇವೆ.
ಶರತ್ತು ಮತ್ತು ನಿಬಂಧನೆಗಳು
1 ಹಕ್ಕುಗಳು
ಈ ಒಪ್ಪಂದದ ಮೂಲಕ ನೇರ ಪ್ರಕಾಶಕರು ಅನಿರ್ದಿಷ್ಟ ಕಾಲಾವಧಿಗೆ ಇಬುಕ್ ಹಾಗೂ ಆಡಿಯೋಪುಸ್ತಕ ಆವೃತ್ತಿಗಾಗಿ ಹಕ್ಕುಗಳನ್ನು ಡಿಜಿಟಲ್ ಹಂಚಿಕೆದಾರರಿಗೆ ನೀಡುತ್ತಿದ್ದಾರೆ. ಈ ಹಕ್ಕುಗಳು ಮೀಸಲಾಗಿರದ (non-exclusive) ರೀತಿಯಲ್ಲಿ ನೀಡಲಾಗುತ್ತಿದೆ. ಇಲ್ಲಿ ಪ್ರಕಟಿಸಲಾದ ಡಿಜಿಟಲ್ ಪುಸ್ತಕಗಳನ್ನು ಬೇರೆ ವೇದಿಕೆಗಳಲ್ಲಿ ಪ್ರಕಟಿಸಲು ನೇರ ಪ್ರಕಾಶಕರಿಗೆ ಯಾವುದೇ ನಿರ್ಬಂಧವಿರುವುದಿಲ್ಲ. ಡಿಜಿಟಲ್ ಪುಸ್ತಕಗಳನ್ನು ತಾತ್ಕಾಲಿಕವಾಗಿ ಮಾರಾಟದಿಂದ ಹಿಂತೆಗೆಯುವ ಮತ್ತು ಪುನ: ಮಾರಾಟಕ್ಕಿಡುವ ನಿಯಂತ್ರಣ ನೇರ ಪ್ರಕಾಶಕರ ಮತ್ತು ಡಿಜಿಟಲ್ ಹಂಚಿಕೆದಾರರ ಕೈಯಲ್ಲಿ ಈ ಕೆಳಗೆ ವಿವರಿಸಿದಂತೆ ಯಾವತ್ತೂ ಇದ್ದೇ ಇರುತ್ತದೆ.
2 ಒಪ್ಪಂದ ಕೊನೆಗೊಳಿಸುವಿಕೆ
2.1 ಒಪ್ಪಂದದ ಅವಧಿಯಲ್ಲಿ ಡಿಜಿಟಲ್ ಹಂಚಿಕೆದಾರರು ಮತ್ತು ನೇರ ಪ್ರಕಾಶಕರು ತಮ್ಮದೇ ಆದ ಕಾರಣಗಳಿಗಾಗಿ ಯಾವುದೇ ಹೊತ್ತಿನಲ್ಲಿ ಈ ಒಪ್ಪಂದವನ್ನು ಕೊನೆಗಾಣಿಸಬಹುದು ಇಲ್ಲವೇ ಇದರಡಿ ಪ್ರಕಟಿಸಲಾಗಿರುವ ಯಾವುದೇ ಒಂದು ಇಲ್ಲವೇ ಹಲವು ಇಲ್ಲವೇ ಎಲ್ಲ ಪುಸ್ತಕಗಳನ್ನು ಪ್ರಕಟಣೆಯಿಂದ ಹಿಂಪಡೆಯಬಹುದು. ಒಪ್ಪಂದ ಕೊನೆಗಳಿಸಲು ಇಚ್ಛಿಸುವ ನೇರ ಪ್ರಕಾಶಕರು contact@mylang.in ಗೆ ಇಮೇಲ್ ಕಳಿಸಿ ಕೋರಿಕೆಯನ್ನು ಸಲ್ಲಿಸಬಹುದು. ಈ ಕೋರಿಕೆಯನ್ನು ಈಡೇರಿಸಿದ ನಂತರ ನೇರ ಪ್ರಕಾಶಕರು ಅಪ್ ಲೋಡ್ ಮಾಡಿದ ಡಿಜಿಟಲ್ ಪುಸ್ತಕಗಳನ್ನು ಶಾಶ್ವತವಾಗಿ ವೇದಿಕೆಯಿಂದ ಅಳಿಸಿಹಾಕಲಾಗುವುದು. ಇದರ ಪ್ರತಿಗಳನ್ನು ತಮ್ಮ ಬಳಿ ಸುರಕ್ಷಿತವಾಗಿ ಇಟ್ಟುಕೊಳ್ಳುವುದರ ಹೊಣೆಗಾರಿಕೆ ನೇರಪ್ರಕಾಶಕದ್ದೇ ಆಗಿರುತ್ತದೆ.
2.2 ಒಪ್ಪಂದ ಕೊನೆಗೊಂಡ ನಂತರ ಡಿಜಿಟಲ್ ಹಂಚಿಕೆದಾರರು ತಮ್ಮ ವೆಬ್ ಸೈಟ್ ಮತ್ತು ಮೊಬೈಲ್ ಆಪ್ ಅಲ್ಲಿ ನೇರ ಪ್ರಕಾಶಕರ ಬಳಿ ಹಕ್ಕುಗಳಿರುವ ಪುಸ್ತಕಗಳನ್ನು ಇಬುಕ್, ಆಡಿಯೋಪುಸ್ತಕದ ರೂಪದಲ್ಲಿ ಮಾರಾಟ ಮಾಡುವುದಿಲ್ಲ.
2.3 ನೇರಪ್ರಕಾಶಕರು ಯಾವುದೇ ಸಮಯದಲ್ಲಿ ತಾವು ಮೈಲ್ಯಾಂಗ್ ಅಲ್ಲಿ ಮಾರಾಟಕ್ಕಿಟ್ಟಿರುವ ಡಿಜಿಟಲ್ ಪುಸ್ತಕಗಳನ್ನು ತಾತ್ಕಾಲಿಕವಾಗಿ ಮಾರಾಟದಿಂದ ಹೊರಗಿಡಬಹುದು, ಮತ್ತು ಪುನ: ಅದನ್ನು ಬಯಸಿದಾಗ ಮತ್ತೆ ಮಾರಾಟಕ್ಕಿಡಬಹುದು.
2.4 ಇದೇ ರೀತಿ ನೇರಪ್ರಕಾಶಕರು ಮೈಲ್ಯಾಂಗ್ ಅಲ್ಲಿ ಮಾರಾಟಕ್ಕಿಟ್ಟಿರುವ ಯಾವುದೇ ಡಿಜಿಟಲ್ ಪುಸ್ತಕಗಳನ್ನು ಡಿಜಿಟಲ್ ಹಂಚಿಕೆದಾರರು ಮಾರಾಟದಿಂದ ಹೊರಗಿಡುವ ಹಕ್ಕನ್ನು ಹೊಂದಿರುತ್ತಾರೆ. ಈ ವಿಷಯದಲ್ಲಿ ಅಂತಿಮ ತೀರ್ಮಾನ ಡಿಜಿಟಲ್ ಹಂಚಿಕೆದಾರರದ್ದೇ ಆಗಿರುತ್ತದೆ.
3 ಖಾತರಿ ನೀಡುವಿಕೆ
ನೇರ ಪ್ರಕಾಶಕರು ಡಿಜಿಟಲ್ ಹಂಚಿಕೆದಾರರಿಗೆ ನೀಡುತ್ತಿರುವ ಎಲ್ಲ ಪುಸ್ತಕಗಳ ಹಕ್ಕುಗಳು ನೇರ ಪ್ರಕಾಶಕರ ಬಳಿಯೇ ಇದ್ದು, ಅದರ ಡಿಜಿಟಲ್ ಹಂಚಿಕೆಯ ಹಕ್ಕುಗಳನ್ನು ಹೊಂದಿದ್ದಾರೆ ಮತ್ತು ಈ ಒಪ್ಪಂದಕ್ಕೆ ಒಪ್ಪಿಗೆ ನೀಡಲು ಎಲ್ಲ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಈ ಮೂಲಕ ಖಾತರಿಪಡಿಸುತ್ತಾರೆ. ಡಿಜಿಟಲ್ ಹಂಚಿಕೆದಾರರಿಗೆ ನೀಡಲಾಗುತ್ತಿರುವ ಪುಸ್ತಕಗಳಲ್ಲಿ ಯಾವುದೇ ಕಾನೂನು ರೀತ್ಯ ಆಕ್ಷೇಪಾರ್ಹ ವಿಚಾರಗಳಾಗಲಿ, ಕಾಪಿರೈಟ್ ಕಾಯ್ದೆಯ ಉಲ್ಲಂಘಿಸುವ ವಿಚಾರಗಳಾಗಲಿ ಇಲ್ಲವೆಂದು ನೇರ ಪ್ರಕಾಶಕರು ಈ ಮೂಲಕ ಪ್ರಮಾಣಿಕರಿಸುತ್ತಾರೆ. ಒಂದು ವೇಳೆ ಈ ಪ್ರಮಾಣದ ಉಲ್ಲಂಘನೆಯಾದಲ್ಲಿ ಎದುರಾಗುವ ಯಾವುದೇ ಕಾನೂನಿನ ತೊಡಕಿನಿಂದ ಡಿಜಿಟಲ್ ಹಂಚಿಕೆದಾರರು ಮತ್ತು ಅದರ ಸಿಬ್ಬಂದಿ ಕಾನೂನಿನನ್ವಯ ದೊರೆಯುವ ತಡೆಯಾಜ್ಞೆ ಸೇರಿದಂತೆ ಇತರೆ ಪರಿಹಾರಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಹಕ್ಕುಗಳ ಉಲ್ಲಂಘನೆಯಿಂದ ಡಿಜಿಟಲ್ ಹಂಚಿಕೆದಾರರಿಗೆ ಎದುರಾಗುವ ಯಾವುದೇ ಕಾನೂನಿನ ವ್ಯಾಜ್ಯದ ಖರ್ಚು-ವೆಚ್ಚಗಳನ್ನು ನೇರ ಪ್ರಕಾಶಕರು ಭರಿಸಲು ಒಪ್ಪಿರುತ್ತಾರೆ.
4 ರಾಯಧನ
ಡಿಜಿಟಲ್ ಹಂಚಿಕೆದಾರರ ವೆಬ್ ಸೈಟ್ ಮತ್ತು ಮೊಬೈಲ್ ಆಪ್ ಅಲ್ಲಿ ನೇರ ಪ್ರಕಾಶಕರು ತಮ್ಮ ಪುಸ್ತಕಗಳನ್ನು ಪ್ರಕಟಿಸಿ ಅವು ಮಾರಾಟಕ್ಕೆ ಲಭ್ಯವಾದ ಮೇಲೆ, ಈ ಕೆಳಗಿನ ನಿಯಮಗಳಂತೆ ನೇರ ಪ್ರಕಾಶಕರಿಗೆ ಡಿಜಿಟಲ್ ಹಂಚಿಕೆದಾರರು ರಾಯಧನವನ್ನು ಹಂಚಿಕೊಳ್ಳಲಿದ್ದಾರೆ:
4.1 ಮೈಲ್ಯಾಂಗ್ ವೆಬ್ ಸೈಟ್ ಮತ್ತು ಮೊಬೈಲ್ ಆಪ್ ಅಲ್ಲಿ ಪ್ರತಿಯೊಂದು ಇಬುಕ್ಕಿಗೆ ನಿಗದಿಪಡಿಸಿದ ಮಾರಾಟದ ಬೆಲೆಯ 40% (ನಲವತ್ತು ಪ್ರತಿಶತ) ಅನ್ನು ರಾಯಧನವಾಗಿ ಡಿಜಿಟಲ್ ಹಂಚಿಕೆದಾರರು ನೇರ ಪ್ರಕಾಶಕರಿಗೆ ನೀಡಲಿದ್ದಾರೆ.
4.2 ನೇರ ಪ್ರಕಾಶಕರು ಪುಸ್ತಕವನ್ನು ಆಡಿಯೋ ರೂಪದಲ್ಲಿ ನಿರ್ಮಾಣ ಮಾಡಿ, ಮೈಲ್ಯಾಂಗ್ ಈಸಿ ಪಬ್ಲಿಶ್ ವ್ಯವಸ್ಥೆಯಲ್ಲಿ ಪ್ರಕಟಿಸಿದರೆ ಆಗಲೂ ಆಡಿಯೋ ಪುಸ್ತಕಕ್ಕೆ ನಿಗದಿಪಡಿಸಿದ ಮಾರಾಟದ ಬೆಲೆಯ 40% (ನಲವತ್ತು ಪ್ರತಿಶತ) ಅನ್ನು ರಾಯಧನವಾಗಿ ಡಿಜಿಟಲ್ ಹಂಚಿಕೆದಾರರು ನೇರ ಪ್ರಕಾಶಕರಿಗೆ ನೀಡಲಿದ್ದಾರೆ.
4.3 ಇಬುಕ್ ಮತ್ತು ಆಡಿಯೋಪುಸ್ತಕಗಳ ಮಾರಾಟದ ಬೆಲೆಯನ್ನು ನೇರ ಪ್ರಕಾಶಕರು ಪುಸ್ತಕವನ್ನು ಪ್ರಕಟಿಸುವಾಗ ತಾವೇ ನಿರ್ಧರಿಸುತ್ತಾರೆ. ಈ ಬೆಲೆಯು ಕನಿಷ್ಟ ಇಪ್ಪತ್ತೈದು ರೂಪಾಯಿಗಳಿಂದ ಶುರುವಾಗಬೇಕು. ಬೆಲೆಯನ್ನು ಅಂತಿಮವಾಗಿ ಒಪ್ಪುವ ಹಕ್ಕು ಮೈಲ್ಯಾಂಗ್ ಸಂಸ್ಥೆಯದ್ದಾಗಿರುತ್ತದೆ.
4.4 ಇಬುಕ್ ಮತ್ತು ಆಡಿಯೋ ಬುಕ್ ಮಾರಾಟದ ಮೇಲೆ ಸರ್ಕಾರ ವಿಧಿಸುವ ಜಿ.ಎಸ್.ಟಿ ತೆರಿಗೆ, ಟ್ರಾನ್ಸಾಕ್ಷನ್ ವೆಚ್ಚವನ್ನು ಡಿಜಿಟಲ್ ಹಂಚಿಕೆದಾರರೇ ಭರಿಸಲಿದ್ದು, ಇದು ನೇರ ಪ್ರಕಾಶಕರ ರಾಯಧನದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ.
5 ಹೇಳಿಕೆ ಮತ್ತು ಪಾವತಿ
5.1 ಪ್ರತಿಯೊಂದು ಪ್ರತಿ ಪುಸ್ತಕ ಮಾರಾಟವಾದಾಗಲೂ ನೇರ ಪ್ರಕಾಶಕರಿಗೆ ಅದಕ್ಕೆ ಸಂಬಂಧಿಸಿದಂತೆ ಒಂದು ಇಮೇಲ್ ನೋಟಿಫಿಕೇಶನ್ ಕಳಿಸುವ ಏರ್ಪಾಡು ಡಿಜಿಟಲ್ ಹಂಚಿಕೆದಾರರು ಮಾಡುತ್ತಾರೆ. ಇದು ಸಾಮಾನ್ಯವಾಗಿ ದಕ್ಷವಾಗಿ ಕಾರ್ಯ ನಿರ್ವಹಿಸುವ ವ್ಯವಸ್ಠೆಯಾಗಿದ್ದರೂ, ಒಮ್ಮೊಮ್ಮೆ ಡಿಜಿಟಲ್ ಹಂಚಿಕೆದಾರರ ವ್ಯಾಪ್ತಿಗೆ ಮೀರಿದ ತಾಂತ್ರಿಕ ಕಾರಣಗಳಿಂದ ತಪ್ಪಿದರೆ ಅಂಥ ಸಂದರ್ಭದಲ್ಲಿ ಡಿಜಿಟಲ್ ಹಂಚಿಕೆದಾರರು ಇದರ ಹೊಣೆಯನ್ನು ಹೊರಲಾಗುವುದಿಲ್ಲ.
5.2 ಪ್ರತಿ ಮೂರು ತಿಂಗಳಿಗೊಮ್ಮೆ ಆ ಅವಧಿಯಲ್ಲಿ ಆದ ಮಾರಾಟ ಮತ್ತು ಅದರಿಂದ ಪ್ರಕಾಶಕರಿಗೆ ದೊರೆಯುತ್ತಿರುವ ರಾಯಧನದ ವಿವರಗಳ ಹೇಳಿಕೆಯನ್ನು ಡಿಜಿಟಲ್ ಹಂಚಿಕೆದಾರರು ನೇರ ಪ್ರಕಾಶಕರ ಜೊತೆ ಹಂಚಿಕೊಂಡು, ಅನ್ವಯಿಸುವ ತೆರಿಗೆ ಮುರಿದು ರಾಯಧನವನ್ನು ನೇರ ಪ್ರಕಾಶಕರ ಬ್ಯಾಂಕ್ ಖಾತೆಗೆ ತ್ರೈಮಾಸಿಕದ ಕೊನೆಯ ದಿನದಿಂದ ಮೂವತ್ತು ದಿನಗಳ ಒಳಗೆ ಪಾವತಿಸಲಿದ್ದಾರೆ.
5.3 ರಾಯಧನದ ಮೇಲೆ ಹಾಕಬಹುದಾದ ಯಾವುದೇ ಆದಾಯ ತೆರಿಗೆಯನ್ನು ಕಟ್ಟುವ ಹೊಣೆ ನೇರ ಪ್ರಕಾಶಕರದ್ದಾಗಿರಲಿದೆ.
6 ಪ್ರಕಟಣೆಯ ಒಪ್ಪಿಗೆಯ ಹಕ್ಕು
6.1. ನೇರ ಪ್ರಕಾಶಕರು ಮೈಲ್ಯಾಂಗ್ ನೇರಪ್ರಕಾಶನ ವ್ಯವಸ್ಥೆಯನ್ನು ಬಳಸಿ ಇಬುಕ್ ಇಲ್ಲವೇ ಆಡಿಯೋಪುಸ್ತಕವನ್ನು ಪ್ರಕಟಣೆಗೆ ಸಲ್ಲಿಸಿದಾಗ ಅದು ಮೈಲ್ಯಾಂಗ್ ಸಂಪಾದಕೀಯ ತಂಡದ ಒಪ್ಪಿಗೆಗೆ ಬರುತ್ತದೆ. ಅದನ್ನು ಪರಿಶೀಲಿಸಿ ಪ್ರಕಟಣೆಗೆ ತಿದ್ದುಪಡಿ ಸೂಚಿಸುವ, ಒಪ್ಪುವ, ಒಪ್ಪದಿರುವ ಹಕ್ಕು ಡಿಜಿಟಲ್ ಹಂಚಿಕೆದಾರರದ್ದಾಗಿರಲಿದೆ.
7 ಡಿಜಿಟಲ್ ಪ್ರತಿ ಮತ್ತು ಮುಖಪುಟ
7.1. ಇಬುಕ್ ಪ್ರಕಟಿಸುವಾಗ ಯುನಿಕೋಡ್ ಅಕ್ಷರ ವಿನ್ಯಾಸದಲ್ಲಿ ಡಿಜಿಟಲ್ ಪಠ್ಯ ಮತ್ತು ಮುಖಪುಟವನ್ನು ನೇರ ಪ್ರಕಾಶಕರು ಅಪ್ಲೋಡ್ ಮಾಡುತ್ತಾರೆ.
7.2 ಆಡಿಯೋ ಪುಸ್ತಕ ಪ್ರಕಟಿಸುವಾಗ ಪ್ರತಿಯೊಂದು ಅಧ್ಯಾಯಕ್ಕೂ 64 KBPS ಬಿಟ್ ರೇಟಿನಲ್ಲಿ ರೆಕಾರ್ಡ್ ಮಾಡಲಾದ ಒಂದು MP3 ಫೈಲಿನಂತೆ ಎಲ್ಲ ಅಧ್ಯಾಯಗಳಿಗೂ ಪ್ರತ್ಯೇಕ MP3 ಫೈಲ್ ಅನ್ನು ನೇರ ಪ್ರಕಾಶಕರು ಅಪ್ಲೋಡ್ ಮಾಡುತ್ತಾರೆ. ಸೂಕ್ತವಾದ ಮುಖಪುಟವನ್ನು ನೇರಪ್ರಕಾಶಕರು ಅಪ್ಲೋಡ್ ಮಾಡುತ್ತಾರೆ.
8 ಪರಸ್ಪರರ ಹಿತರಕ್ಷಣೆ
8.1. ಈ ಒಪ್ಪಂದದ ಪಾವಿತ್ರ್ಯವನ್ನು ಕಾಪಾಡಿಕೊಂಡು ನೇರ ಪ್ರಕಾಶಕರ, ಡಿಜಿಟಲ್ ಹಂಚಿಕೆದಾರರ ಸಂಸ್ಥೆ ಮತ್ತು ಸಿಬ್ಬಂದಿಯನ್ನು ಒಪ್ಪಂದದ ಅಂಶಗಳ ಉಲ್ಲಂಘನೆಯ ಯಾವುದೇ ಆರೋಪ, ಕಾನೂನು ಕ್ರಮಗಳಿಂದ ಕಾಪಾಡಿಕೊಳ್ಳುವ ಬದ್ಧತೆಯನ್ನು ನೇರ ಪ್ರಕಾಶಕರು ಮತ್ತು ಡಿಜಿಟಲ್ ಹಂಚಿಕೆದಾರರು ಈ ಮೂಲಕ ವ್ಯಕ್ತಪಡಿಸುತ್ತಾರೆ. ಇದಕ್ಕೆ ವ್ಯತಿರಿಕ್ತವಾದ ಯಾವುದೇ ಸಂದರ್ಭ ಎದುರಾದಲ್ಲಿ ಪರಸ್ಪರರ ಗಮನಕ್ಕೆ ತಂದು ಬಗೆಹರಿಸಿಕೊಳ್ಳುವ ಪ್ರಯತ್ನಕ್ಕೆ ಇಬ್ಬರೂ ಬದ್ಧರಾಗಿರುತ್ತಾರೆ.
9 ಕಾಪಿರೈಟ್ ಉಲ್ಲಂಘನೆ
9.1. ಈ ಒಪ್ಪಂದದ ಅವಧಿಯಲ್ಲಿ ಪುಸ್ತಕಗಳ ಕಾಪಿರೈಟ್ ಉಲ್ಲಂಘನೆಯಾದದ್ದು ಕಂಡುಬಂದಲ್ಲಿ ನೇರ ಪ್ರಕಾಶಕರ ಪರವಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಅದನ್ನು ತಡೆಗಟ್ಟುವ ಮತ್ತು ಸೂಕ್ತ ನಷ್ಟ ತುಂಬಿಕೊಡುವಂತೆ ಕೇಳುವ ಆಯ್ಕೆಯನ್ನು ಡಿಜಿಟಲ್ ಹಂಚಿಕೆದಾರರು ಹೊಂದಿದ್ದಾರೆ. ಒಂದು ವೇಳೆ ಡಿಜಿಟಲ್ ಹಂಚಿಕೆದಾರರು ಇದನ್ನು ಮಾಡಲಾಗದ ಸಂದರ್ಭದಲ್ಲಿ ನೇರ ಪ್ರಕಾಶಕರು ಇದನ್ನು ಮಾಡಬಹುದಾಗಿದೆ.
10 ಕಾನೂನು ವ್ಯಾಪ್ತಿ
10.1. ಡಿಜಿಟಲ್ ಹಂಚಿಕೆದಾರರ ವ್ಯಾಪಾರ ಸಂಸ್ಥೆಯನ್ನು ಬೆಂಗಳೂರಿನಲ್ಲಿ ನೊಂದಾಯಿಸಲಾಗಿದ್ದು, ಈ ಒಪ್ಪಂದದಲ್ಲಿನ ಅಂಶಗಳನ್ನು ಭಾರತದ ಕಾನೂನಿನ ಅನ್ವಯ ಬೆಂಗಳೂರು ನಗರ ವ್ಯಾಪ್ತಿಯ ನ್ಯಾಯಾಲಯದ ಪರಿಧಿಯಲ್ಲಿ ನಡೆಸಲಾಗುವುದು. ಈ ನ್ಯಾಯಾಲಯದ ವ್ಯಾಪ್ತಿಯನ್ನು ಎರಡೂ ಪಕ್ಷಗಳು ಒಪ್ಪಿ ಈ ಒಪ್ಪಂದಕ್ಕೆ ಸಹಿ ಹಾಕಿವೆ. ಯಾವುದೇ ಕಾನೂನಿನ ತೊಡಕು ಎದುರಾದಾಗ ಎರಡೂ ಪಕ್ಷಗಳಿಗೂ ಒಪ್ಪಿಗೆಯಾಗುವಂತಹ ವ್ಯಕ್ತಿಯ ಮಧ್ಯಸ್ಥಿಕೆಯಲ್ಲಿ ಬಗೆಹರಿಸಿಕೊಳ್ಳುವ ಪ್ರಯತ್ನಕ್ಕೆ ಇಬ್ಬರೂ ಬದ್ಧರಾಗಿದ್ದಾರೆ. ಮಧ್ಯಸ್ಥಿಕೆಯ ವ್ಯಕ್ತಿ ಯಾವುದೇ ಶಿಕ್ಷಾ ರೂಪದ ಪರಿಹಾರ ಘೋಷಿಸುವ ಹಕ್ಕುಗಳನ್ನು ಹೊಂದಿರುವುದಿಲ್ಲ.
11 ಪರಸ್ಪರರ ಒಪ್ಪಿತ ತಿಳುವಳಿಕೆ
11.1. ಈ ಒಪ್ಪಂದಕ್ಕೆ ಎರಡೂ ಪಕ್ಷಗಳು ಒಪ್ಪಿಗೆ ಸೂಚಿಸಿದ್ದು, ಇಲ್ಲಿನ ನಿಯಮಗಳು ಒಪ್ಪಂದದ ಅವಧಿಯ ಉದ್ದಕ್ಕೂ ಎರಡೂ ಪಕ್ಷಗಳಿಗೂ, ಅದರ ಸಿಬ್ಬಂದಿ ವರ್ಗಕ್ಕೂ, ಮುಂದೆ ಸಂಸ್ಥೆಯ ಚುಕ್ಕಾಣಿ ಹಿಡಿಯುವ ಜನರಿಗೂ ಅನ್ವಯಿಸುತ್ತವೆ.
12 ಜಾರಿಗೊಳಿಸುವಿಕೆ
12.1. ನೇರ ಪ್ರಕಾಶಕರು ಇಲ್ಲಿನ ಶರತ್ತು ಮತ್ತು ನಿಬಂಧನೆಗಳನ್ನು ಒಪ್ಪಿ, ಮೈಲ್ಯಾಂಗ್ ಈಸಿ ಪಬ್ಲಿಶ್ ವೆಬ್ ಸೈಟಿನಲ್ಲಿ ಒಪ್ಪಿಗೆ ಸೂಚಿಸುವ ಮೂಲಕ ಡಿಜಿಟಲ್ ಹಂಚಿಕೆದಾರರ ವೇದಿಕೆಯಲ್ಲಿ ಪುಸ್ತಕ ಪ್ರಕಟಿಸುವ ತೀರ್ಮಾನ ಕೈಗೊಂಡಿದ್ದಾರೆ. ಇದು ಡಿಜಿಟಲ್ ಮೂಲಕ ಒಪ್ಪಿರುವ ಒಪ್ಪಂದವಾದ ಕಾರಣ ಇದಕ್ಕೆ ಕೈಬರಹದಲ್ಲಿ ಮಾಡಲಾದ ಸಹಿಯ ಅಗತ್ಯವಿರುವುದಿಲ್ಲ.