
ಇತ್ತೀಚಿಗೆ ನನ್ನ ಕೆಲವು ವಿಮರ್ಶಕರು ನನ್ನ ಬರವಣಿಗೆಗಳಿಂದ, ತಮ್ಮದೇ ರಾಜಕೀಯ ಅರ್ಥ ಮಾಡಿಕೊಂಡಿದ್ದಾರೆ. ಉದಾಹರಣೆಗೆ-ಉಳುವವನೇ ಹೊಲದೊಡೆಯನಾಗಬೇಕೆಂಬ ಧೋರಣೆಯ ವಿಚಾರದಲ್ಲಿ. ಸಮಾಜದಲ್ಲಿ ಭೂಸಂಪತ್ತನ್ನು ಇರಿಸಿಕೊಳ್ಳುವುದಾಗಲೀ, ಇತರ ಸಂಪತ್ತನ್ನು ಗಳಿಸುವುದಾಗಲಿ ಅಪರಾಧವೆಂದು ನನ್ನಂಥವರು ತಿಳಿದಿಲ್ಲ. ನಮ್ಮ ಸಂಪತ್ತು ಸಂಬಳದ ರೂಪದಲ್ಲಿರಲಿ, ಬ್ಯಾಂಕ್ ಠೇವಣಿಯ ರೂಪದಲ್ಲಿರಲಿ, ಜಮೀನಿನ ರೂಪದಲ್ಲಿರಲಿ-ಅದರ ಮೌಲ್ಯ ಒಂದೇ. ಕೇವಲ ಭೂಮಿಯ ಒಡೆಯರನ್ನು ಬೆಟ್ಟು ಮಾಡಿ ತೋರಿಸಿ, ಅವರ ಸೊತ್ತನ್ನು ಇತರರಿಗೆ ಹಂಚಬೇಕಾದರೆ, ಆ ಸೊತ್ತಿನ ಮೌಲ್ಯವನ್ನು ಯಾವತ್ತು ಸಮಾಜ ಸಲ್ಲಿಸಬೇಕು. 'ಪಾವುಲನಿಗೆ ದಾನ ಮಾಡಲಿಕ್ಕೆ ಪೀಟರನಿಂದ ಕಿತ್ತುಕೊಳ್ಳುವುದು' ದರೋಡೆ. ಅದು ಸಮಾಜವಾದವಲ್ಲ. ಇದು ನನ್ನ ಭಾವನೆ. ಸಾಮಾಜಿಕ ನ್ಯಾಯ ಎಂಬುದಿದೆ: ಆ ನ್ಯಾಯವನ್ನು ಸಲ್ಲಿಸುವುದಕ್ಕೆ ಬೇಕಾದ ಹೊಣೆಯನ್ನು ಯಾವತ್ತು ಸಮಾಜ ನಿರ್ವಹಿಸಬೇಕು. ನಮಗೆ ಇಷ್ಟ ಬಂದವರಿಂದ ಹಣ ಕಿತ್ತು, ಇಷ್ಟಬಂದವರಿಗೆ ಕೊಡಬಲ್ಲ ರೀತಿ, ನೀತಿಯಲ್ಲ. ಜಮೋನನ್ನು ಹಂಚಬೇಕಾದರೆ, ನೀವು ಯಾರಿಂದ ಅದನ್ನು ಕಿತ್ತುಕೊಂಡಿರೋ ಅದರ ನ್ಯಾಯವಾದ ಬೆಲೆಯನ್ನು ಅವರಿಗೆ ತೆರಬೇಕು. ಆ ಪರಿಹಾರವನ್ನು ಸಾರ್ವಜನಿಕ ಬೊಕ್ಕಸದಿಂದ ತುಂಬಿಸಬೇಕು. ಹೆಚ್ಚು ಸಂಬಳವಿದ್ದವರಿಂದ, ಅವರ ಸಂಬಳ ಖೋತಾಮಾಡಿ, ಕಡಿಮೆ ಸಂಬಳವಿದ್ದವರಿಗೆ ನೀವು ಯಾಕೆ ಹಂಚುವುದಿಲ್ಲ? ಜಮೀನನ್ನು ಪಡೆದವರು ಮಾತ್ರವೇ ಅಂಥ ದಂಡ ತೆರಬೇಕೇ? ಅವರ ಸಂಪತ್ತು ಮಾತ್ರ ಅನ್ಯಾಯದ್ದೇ ಎಂಬ ಪ್ರಶ್ನೆಯನ್ನು ನಾವು ಯೋಜಿಸಬೇಕು.
ಈ ವಿಷಯದ ವ್ಯಾಖ್ಯೆಯನ್ನು ನಾನು ಇಲ್ಲಿ ಬೆಳೆಯಿಸಬೇಕಾಗಿಲ್ಲ. ಈ ದೇಶದಲ್ಲಿ ಜನಗಳ ಬಡತನ ಹೋಗಬೇಕಾದದ್ದು ತೀರ ಅವಶ್ಯ. ಆದರೆ ಅದು ಭಿಕ್ಷೆ ನೀಡುವಿಕೆಯಿಂದ ಹೋಗಲಾರದು. ಜನಗಳಲ್ಲಿ ಸಂಪತ್ತು ಉತ್ಪಾದನೆಯ ಶಕ್ತಿಯನ್ನು ಬೆಳೆಯಿಸಿಯೇ ಹೋಗಬೇಕು ಎಂಬ. ನಂಬಿಕೆ ನನ್ನದು. ಜನಗಳ ಮತಗಳ ಮೇಲೆ ಕಣ್ಣಿರಿಸಿ, ಅವುಗಳ ವಶೀಕರಣಕ್ಕಾಗಿ ತಳೆಯುವ ಆರ್ಥಿಕ, ಸಾಮಾಜಿಕ ಧೋರಣೆಗಳು ಎಂದೂ ಸಾಮೂಹಿಕ ಹಿತವನ್ನು ಸಾಧಿಸಲಾರವು.
ಶಿವರಾಮ ಕಾರಂತ
ಪುಟಗಳು: 275
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !