
ಬರಹಗಾರ: ಡಾ|| ಕೆ. ಶಿವರಾಮ ಕಾರಂತ
ಈ ಕಾದಂಬರಿಯ ಪ್ರಧಾನ ರಂಗಸ್ಥಳ ಉಡುಪಿ ಎಂದು ತೋರಿಸಿರುವೆನಾದರೂ ಇಲ್ಲಿ ಸ್ಥಳದ ಮಹತ್ವವೇನಿಲ್ಲ; ಅಂಥ ಯಾವ ಊರಾದರೂ ಇಲ್ಲಿನ ವ್ಯಕ್ತಿಗಳ ಚಿತ್ರ ಬೇರೆಯಾಗಬೇಕಾದ ಪ್ರಮೇಯವಿಲ್ಲ. ಇಲ್ಲಿ ಬರುವ ಯಾವತ್ತು ವ್ಯಕ್ತಿಗಳು ಆ ಸ್ಥಳದ ಯಾವನೇ ವ್ಯಕ್ತಿಯನ್ನು ಉದ್ದೇಶಿಸಿ ಬರೆದುದೂ ಅಲ್ಲ. ನನ್ನ ಪಾಲಿಗೆ ಇಲ್ಲಿನ ವ್ಯಕ್ತಿಗಳ ಸ್ವಭಾವ ಮುಖ್ಯವೇ ಹೊರತು, ಅವರಿವರನ್ನು ಬೊಟ್ಟುಮಾಡಿ ತೋರಿಸುವ ಚಪಲ ಇಲ್ಲ.
ಕಥೆಯಲ್ಲಿ ಬರುವ ವ್ಯಕ್ತಿಗಳೆಲ್ಲರೂ ಸಾಮಾನ್ಯರು; ಸಾಮಾನ್ಯರ ಜೀವನದ ಇತಿಮಿತಿಗಳೆಲ್ಲವೂ ಅವರಲ್ಲಿವೆ. ಅವರಲ್ಲಿ ಒಬ್ಬಾತ ಮಾತ್ರ ಸಾಮಾನ್ಯತನ ಮೀರುವ ಪ್ರಯತ್ನ ಮಾಡಿದವ. ತನ್ನ ಪೂರ್ವದ ಮಾನಸಿಕ ನಿರ್ಬಂಧಗಳನ್ನು ಕಳಚಿ ವಿಚಾರ ಶಕ್ತಿಯಿಂದ ಬದುಕಿಗೆ ಇನ್ನಷ್ಟು ಆಳವನ್ನು ದೊರಕಿಸಬೇಕೆಂದು ಪ್ರಯತ್ನಿಸಿದವ. ಆ ಕೆಲಸ ತೊಡಗಿದ ಕಾಲಕ್ಕೆ ತುಸು ಅಹಂಕಾರ ಮೂಡಿರಬಹುದಾದರೂ ಮುಂದೆ ಅದೂ ಇಲ್ಲದಾಗಿ, ತನ್ನ ಪರಿ ಮಿತಿಯನ್ನು ಅವನೂ ಕಂಡುಕೊಳ್ಳುತ್ತಾನೆ.
ಇಲ್ಲಿ ಬರುವ ವ್ಯಕ್ತಿಗಳು ತಮ್ಮ ಮನಸ್ಸಿನ ಮತ್ತು ದೇಹದ ನಿರ್ಬಂಧಗಳಲ್ಲಿ ಸಿಲುಕಿ-ನಂಬಿ ಬಂದ, ನಡೆದು ಬರುವ ತಾತ್ವಿಕ ಸಮಸ್ಯೆಗಳ ಅರ್ಥವನ್ನು ತಿಳಿಯಲು ಸಾಕಷ್ಟು ಪ್ರಾಮಾಣಿಕವಾಗಿಯೇ ಶ್ರಮಿಸುತ್ತಾರೆ. ಸಂಸಾರ-ಪಾರಮಾರ್ಥಗಳ ಜಿಡುಕನ್ನು ತಾವು ತಾವೇ ಬಿಡಿಸಲು ಬಯಸುತ್ತಾರೆ. ನಮ್ಮ ಸಂಪ್ರದಾಯಬದ್ಧ ಆವರಣ ಒಡ್ಡುವ ಪ್ರಶ್ನೆಗಳೆಲ್ಲ ಅವರನ್ನೂ ಕಾಡುತ್ತವೆ. ನಮ್ಮಲ್ಲಿರುವ ಕುಂದುಕೊರತೆಗಳೂ ಅವರಲ್ಲಿವೆ. ನಮ್ಮಲ್ಲಿನ ಕೊರತೆಗಳನ್ನು ಮುಚ್ಚಲು ಕೆಲವರ ಪಾಲಿಗೆ ಪಾರಮಾರ್ಥದ ಅರೆಜೀರ್ಣ ಕಲ್ಪನೆ ಕೆಲವರ ವಾದ ಸರಣಿ, ಕೆಲವರು ಅಂಥ ಮುಸುಕನ್ನು ಆಶ್ರಯಿಸದೆಯೇ ತಮ್ಮ ಮಿತಿಯೊಳಗೆ ಸಮಸ್ಯೆಯನ್ನು ಇದಿರಿಸುತ್ತಾರೆ. ಬದುಕು-ಅನ್ಯರ ಮುಂದೆ ನಟಿಸುವ ನಾಟಕವಲ್ಲ, ತಮಗಾಗಿ ಬಾಳುವ ರೀತಿ ಎಂಬ ನೆಲೆಯಲ್ಲಿ ಇದಿರಿಸಿ ಬರುವ ಸಮಸ್ಯೆಗಳನ್ನು ಕುರಿತು ವಿಚಾರ ಮಾಡುತ್ತಾರೆ.
ನನ್ನ ಹಿಂದಣ ಕಾದಂಬರಿ 'ಮೈಮನಗಳ ಸುಳಿಯಲ್ಲಿ' ಲೈಂಗಿಕ ಜೀವನದ ನಾಲ್ಕು ಮುಖಗಳನ್ನು ತೋರಿಸುವ ಸಲುವಾಗಿ ಬರೆದುದು. ಅದನ್ನೇ ಹಲವರು ಅದು ಮಂಜುಳೆಯೆಂಬ ಸೂಳೆಯ ಬದುಕು, ಎಂಬ ಅನುಕಂಪವನ್ನು ತೋರಿ, ಮುಖ್ಯ ಸಮಸ್ಯೆಯನ್ನೇ ಮರೆತವರಂತೆ ನನಗೆ ಮೆಚ್ಚಿಕೆಯ ಪತ್ರ ಬರೆದರು. ಸೂಳೆಯ ಸಲುವಾಗಿ ಅವರು ಕೊಟ್ಟ ರಿಯಾಯಿತಿ, ಅವಳ ಬಳಿಗೆ ಬಂದವರ ಪಾಲಿಗೆ ಅವರು ಕೊಟ್ಟರೋ ತಿಳಿಯೆ.
ಈ ಕಾದಂಬರಿಯಲ್ಲಿ ಅಂಥದೇ ಸಮಸ್ಯೆಗೆ ಗುರಿಯಾದವರು, ಆ ಬಗೆಯ ರಿಯಾಯಿತಿಯನ್ನು ಪಡೆಯಬೇಕಾದವರೂ ಅಲ್ಲ. ನಮ್ಮ ಸಾಂಪ್ರದಾಯಿಕ ಕಣ್ಣು ಅವರನ್ನು ಎಷ್ಟು ಸಹಾನುಭೂತಿಯಿಂದ ನೋಡೀತೆಂದು ನಾನು ಹೇಳಲಾರೆ. ನಮ್ಮನ್ನು ತೀರ ಹೊರತಾಗಿಕೊಂಡು ಜಗತ್ತನ್ನು ಅಳೆಯುವ ನೋಟದಿಂದ ಅನ್ಯರ ವಿಚಾರದಲ್ಲಿ ಸಹಾನುಭೂತಿಯಿಂದ ಅರ್ಥಮಾಡಿಕೊಳ್ಳುವುದು ತುಂಬ ಕಷ್ಟದ ಸಂಗತಿ. ಅದನ್ನು ತಿಳಿಯಲೆಂದು ಇಲ್ಲಿ ಬದುಕಿನ ಕೆಲವು ಮುಖಗಳ ಕಡೆಗೆ ಕನ್ನಡಿಯನ್ನು ಹಿಡಿದ. ಆ ಕನ್ನಡಿಯಲ್ಲಿ ನಮ್ಮ ನಮ್ಮ ಬಿಂಬಗಳನ್ನೂ ಸ್ವಲ್ಪವಲ್ಲ ಸ್ವಲ್ಪ ಗುರುತಿಸಬಲ್ಲೆವಾದರೆ ಆಗ ನಮ್ಮ ನೋಟದ ಬಗೆ ಸೂಕ್ಷ್ಮವಾದೀತು; ವಿಸ್ತರಿಸೀತು.
- ಶಿವರಾಮ ಕಾರಂತ
ಪುಟಗಳು: 332
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !