Click here to Download MyLang App

ಕೆ. ಶಿವರಾಮ ಕಾರಂತ,  ಇಳೆಯೆಂಬ,  shivram karantha,  shivram karanth shivram karanth,  shivram karant,  shivarm karanth,  shivarama karanta,  shivaram karanth,  Ileyemba,  Dr. K. Shivarama Karanth,

ಇಳೆಯೆಂಬ (ಇಬುಕ್)

e-book

ಪಬ್ಲಿಶರ್
ಡಾ|| ಕೆ. ಶಿವರಾಮ ಕಾರಂತ
ಮಾಮೂಲು ಬೆಲೆ
Rs. 145.00
ಸೇಲ್ ಬೆಲೆ
Rs. 145.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಬರಹಗಾರ: ಡಾ|| ಕೆ. ಶಿವರಾಮ ಕಾರಂತ  

ನಾನು ವರ್ಷಕ್ಕೊಮ್ಮೆ ಒಂದೊಂದು ಕಾದಂಬರಿಯನ್ನು ಬರೆಯುತ್ತ ಬಂದಿದ್ದೇನೆ. ಆದರೆ, ಬರೆದ ಕಾದಂಬರಿಗೆ ಮುನ್ನುಡಿ ಸೇರಿಸುವುದಕ್ಕೆ ಮಾತ್ರ ಔದಾಸೀನ್ಯ ಬಿಡದು; ಮೊದಲೇ ಮುನ್ನುಡಿ ಬರೆದು ಅನಂತರ ಕಾದಂಬರಿಯನ್ನು ಬರೆಯುವುದು ಒಳ್ಳೆಯದಲ್ಲವೇ-ಎನಿಸುತ್ತದೆ; ಆದರೆ ನಾನು ಹಾಗೆ ಮಾಡಿದಲ್ಲಿ, ಬರೆದ ಮುನ್ನುಡಿಗೂ ಮುಂದಣ ಕಾದಂಬರಿಗೂ ಸಂಬಂಧವೇ ಇಲ್ಲದಂತಾದರೆ ಹೇಗೆ? ಬರೆಯುವ ಕಾದಂಬರಿಯ ಪೂರ್ಣ ರೂಪ ಮನಸ್ಸಿಗೆ ಗೋಚರವಾದಾಗ ಅದು ಸಾಧ್ಯ. ಬಹಳ ಕಾಲದಿಂದಲೂ ನನ್ನ ಕಾದಂಬರಿಯ ಬರವಣಿಗೆ ನನ್ನ ಪೂರ್ವಕಲ್ಪನೆಗೆ ಗೋಚರಿಸದ ಬೆಳವಣಿಗೆಯನ್ನು ಪಡೆಯುವುದನ್ನೂ ಕಾಣುತ್ತ ಬಂದಿದ್ದೇನೆ. ಅದಕ್ಕೆ 'ಇಳೆಯೆಂಬ' ಈ ಕಾದಂಬರಿಯೂ ಆಕ್ಷೇಪವಾಗಿಲ್ಲ. ನಾಟಕ ವನ್ನೋ, ನಟರನ್ನೋ ಕುರಿತು ಬರೆಯಬೇಕೆಂಬ ಹವಣಿಕೆಯಿಂದ ಹುಟ್ಟಿಕೊಂಡ ಈ ಕಾದಂಬರಿಗೆ ಬೀಜ ರೂಪದಲ್ಲಿ ಕಾಣಿಸಿದ್ದು ಶ್ಯಾಮರಾಯನ ಜೀವನ ನಾಟಕ. ನಾಟಕ, ನಟನೆ, ನಾಟಕದ ಹೇತು, ಅದರ ಪಾತ್ರಗಳು, ಅವುಗಳ ನಿರ್ವಹಣೆಗೆ ಬೀಜರೂಪವಾಗಿ ಕಾಣಿಸಿದ್ದು--ಆನಂದರಾಯನ ತರುಣ ವ್ಯಕ್ತಿತ್ವ. ಹಾಗೆ ಕಾಣಿಸಿಕೊಂಡ ಅವರು, ಹತ್ತು ವರ್ಷಗಳ ಅವಧಿಯಲ್ಲಿ, ನನ್ನ ಸಹಾಯ, ಪೋಷಣೆ ಇಲ್ಲದೆಯೆ ತಾವಾಗಿಯೇ ಬೆಳೆದು ರೂಪುಗೊಂಡ ಬಗೆಯಿಂದಾಗಿ ನಾನೆಣಿಸಿ ಕೊಂಡಿದ್ದ ವಿಚಾರಗಳನ್ನು ಮರೆಯಿಸಿ, ಎಣಿಸಿಕೊಂಡಿರದ ಕೆಲವು ಸಮಸ್ಯೆಗಳು ಹೊರಕ್ಕೆ ಬಂದುವು. ಹೀಗಾಗಿ, ಈ ಕಾದಂಬರಿ ಬೆಳೆದ ಬಗೆಗೆ ಆ ಎರಡು ಮುಖ್ಯ ಪಾತ್ರಗಳು ಕಾರಣವೇ ಹೊರತು ಅವನ್ನು ಇಳೆಯೆಂಬ ರಂಗಸ್ಥಳದಲ್ಲಿ ಕೆಡೆದ ನನ್ನ ಹೊಣೆಯಲ್ಲ-ಎನಿಸುತ್ತದೆ. ಅಂತು, ಕಾದಂಬರಿಯನ್ನು ಬರೆದು ಮುಗಿಸಿದ ಮೇಲೆ, ಅದಕ್ಕೆ ನಾಮಕರಣವನ್ನು ಮಾಡುವ ಪ್ರಸಂಗ ಬಂದಾಗ 'ಇಳೆಯೆಂಬ...' ಹೆಸರನ್ನು ಕೊಟ್ಟೆ. ಆ ಪದಕ್ಕೆ ಸಮನಾದ ಮುಂದಿನ ಮಾತು 'ನಾಟ್ಯರಂಗದೊಳ್‌' ಎಂಬುದಷ್ಟೆ. ಆ ನಾಟ್ಯ ರಂಗದ ಬದುಕು ಹೇಗೆ ಸಾಗುತ್ತದೆ? ಅದರ ಅಟ್ಟಹಾಸ, ವಿಕಟಹಾಸ, ದುರಂತಗಳೇನು--ಎಂಬುದು ನಾಟಕಕಾರನಿಗೂ ಸಂಪೂರ್ಣವಾಗಿ ಎಟುಕದೊಂದು ವಸ್ತು. ನಾಟಕಕಾರ ತನ್ನ ಸುತ್ತಣ ಪರಿಸರದ ವ್ಯಕ್ತಿಗಳಿಂದ ಮತ್ತು ಸಮಸ್ಯೆಗಳಿಂದ ಪ್ರಭಾವಿತನಾಗಿ ಅವನ್ನು ಚಿತ್ರಿಸಲು ಪುನರ್‌ಸೃಷ್ಟಿ ಮಾಡುತ್ತಾನೆ. ಈ ಕಾರ್ಯಕ್ಕೆ ರೂಪುಗೊಡಬಲ್ಲ ಅವನ ಪಾತ್ರಗಳು ವಾಸ್ತವ ಜೀವನದಿಂದ ಹುಟ್ಟಿಕೊಂಡವು ಇರಬೇಕು. ಹಾಗೆ ನಮ್ಮ ಸುತ್ತಣ ಜಗತ್ತಿನಲ್ಲಿ ಕಾಣಸಿಗುವ ಎಷ್ಟು ಮಂದಿಯ ಆಳವಾದ ಪರಿಚಯ ನಮಗಿರುತ್ತದೆ? ನಾಟಕಕಾರನಿಗೆ ಇರುತ್ತದೆ? ಆತ ಇಡಿ ಇಡಿಯಾಗಿ ತನಗೆ ಪರಿಚಿತರಾದ ವ್ಯಕ್ತಿಗಳನ್ನು ಚಿತ್ರಿಸುವಂತೆ ಇದೆಯೇ? ಅವನ ಎಟುಕು ತನ್ನತನದಿಂದ ಎಷ್ಟೊಂದು ರೂಪುಗೊಳ್ಳುತ್ತದೆ? ಪರರನ್ನು ನೋಡಿ, ತಿಳಿದು ಅದೆಷ್ಟು ರೂಪುಗೊಳ್ಳುತ್ತದೆ?

ಅಂಥ ಇತಿ, ಮಿತಿಗಳಲ್ಲಿ ಆತ ಪುರಾಣಕ್ಕೆ ಶರಣುಹೋದರೆ ಹೇಗೆ? ಚರಿತ್ರೆಗೆ ಶರಣುಹೋದರೆ ಹೇಗೆ? ತನ್ನ ಕಣ್ಣಿಗೆ ಸಿಗುವ ಪ್ರತ್ಯಕ್ಷ ಜನಜೀವನವನ್ನು ಎಟುಕಿದರೆ ಹೇಗೆ?

ನಾಟಕಕಾರ ತನ್ನ ಅನುಭವದ ಮಿತಿಯಲ್ಲಿ ಮಾಡಿದ ಸೃಷ್ಟಿಯನ್ನು ನಟ ನಿರ್ವಹಿಸಬೇಕಾದರೆ, ಅವನ ಎಟುಕು, ಪರಿಸರ, ಅನುಭವ ಮತ್ತು ಅವುಗಳ ವಿಶ್ಲೇಷಣೆಯಿಂದ ನಡೆಯಿಸಬೇಕಾಗುತ್ತದೆ. ಆತನ ದೇಹ ಮತ್ತು ಬುದ್ಧಿಗಳೆರಡೂ ಈ ಕೆಲಸಕ್ಕೆ ತಕ್ಕಂತೆ ಬಲಿಯದೆ ಹೋದರೆ, ಅವನು ಜೀವನದ ಪಾತ್ರಗಳನ್ನು ತಿಳಿಯಲಾರ; ಅವನ್ನು ರಂಗಸ್ಥಳದಲ್ಲಿ ನಿರೂಪಿಸಲಾರ. ನಟನಾಗಲಿ, ನಾಟಕಕಾರ ನಾಗಲಿ ಸಮಾಜವನ್ನು ಒಳಗಣ್ಣಿಂದ ನೋಡುವಾಗ ಅವನ ಬುದ್ಧಿಯೆಷ್ಟು ಚುರುಕಾಗಿರುತ್ತದೆ, ಅರಿವು ಎಷ್ಟು ಆಳವೂ, ವಿಶಾಲವೂ ಆಗಿದ್ದೀತು, ಅವನಿಗೆ ಅವು ದೊರಕಿಸಿಕೊಟ್ಟ ಅನುಭವಗಳನ್ನು ಬಳಸಿಕೊಂಡು ಪಾತ್ರ ಸೃಷ್ಟಿ ಮಾಡಬಲ್ಲ ಪ್ರತಿಭೆ ಎಂಥದು--ಎಂಬ ಪ್ರಶ್ನೆಯೂ ಹುಟ್ಟುತ್ತದೆ.

ತನ್ನ ಪರಿಸರವನ್ನು ಚಿತ್ರಿಸಲು ಹೊರಟ ನಾಟಕಕಾರನಾಗಲಿ, ಅಲ್ಲಿನ ಪಾತ್ರಗಳ ಸೋಗು ಧರಿಸಿ ನಟಿಸಲು ಹೊರಟ ನಟನಾಗಲಿ, ಸುತ್ತಣ ಜಗತ್ತಿನ ತನ್ನಂತಿರುವ ವ್ಯಕ್ತಿಗಳ ಇಳೆಯೆಂಬ ರಂಗಸ್ಥಳದಲ್ಲಿ ಉದ್ದೇಶಪಟ್ಟು ನಟಿಸುವ ನಟರನ್ನು ಇಣಿಕಿ ನೋಡಬಲ್ಲ ಸಾಮರ್ಥ್ಯ ಉಳ್ಳವರೇ? ಹೀಗೆ, ನಾಟಕ ಚಿತ್ರಣಕ್ಕೆ ಅಸಂಖ್ಯ ಮಿತಿಗಳು ಬಂದು ಅಡ್ಡನಿಲ್ಲುತ್ತವೆ. ಅತಿ ಸೂಕ್ಷ್ಮವಾದ ದೃಷ್ಟಿ, ಸಾಕಷ್ಟು ವಿಸ್ತೃತವಾದ ಅನುಭವ, ತನ್ನ ಇತಿಮಿತಿಗಳು ಇನ್ನೊಬ್ಬರ ಇತಿಮಿತಿಯಾಗಬಹು ದೆಂಬ ಔದಾರ್ಯ, ತನ್ನ ಕಹಿಸಿಹಿಗಳಿಂದ ಅನ್ಯರನ್ನು ಅಳೆಯಲು ಹೋಗದಿರುವ ತಟಸ್ಥ ದೃಷ್ಟಿ ಇದ್ದಾಗ--ಯಾವುದಾದರೂ ಒಂದು ಸುಂದರ ಸೃಷ್ಟಿಯಾಗಲಿಕ್ಕೆ ಸಾಧ್ಯ. ಅಂಥ ಅರಿವಿನಿಂದ, ಬದುಕಿನಲ್ಲಿ ಕಾಣಿಸುವ ಸೊಗಸು, ಹೊಲಸುಗಳ ತಾರತಮ್ಯವೆಷ್ಟೆಂದು ಕಾಣಿಸಿಯೂ 'ತಾನು ಇಂಥ ಜಗತ್ತಿನಲ್ಲೇ ಬದುಕಬೇಕಾಗಿದೆ' ಎಂಬ ಪ್ರಜ್ಞೆ, ವ್ಯಕ್ತಿಯನ್ನು ನಡೆಯಿಸಿದರೆ ಆಗಬಹುದು.

ಈ ಕಾದಂಬರಿಯ ಕ್ಷೇತ್ರವನ್ನು ವಾಸ್ತವಿಕವೆಂದು ತೋರಿಸಲು ಉಡುಪಿ, ಬೆಳಗಾವಿ ನಗರಗಳೊಳಗೆ ಹಂಚಿದ್ದೇನೆ. ಇಲ್ಲಿ ಉಡುಪಿಯ ನಗರ ಬರುತ್ತದೆ; ಕಾಲೇಜು ಬರುತ್ತದೆ; ಪ್ರಿನ್ಸಿಪಾಲರು ಬರುತ್ತಾರೆ; ಇಲ್ಲಿನ ಸಂಸ್ಥೆಗಳನ್ನು ಕಟ್ಟಿ ದವರೂ ಬರುತ್ತಾರೆ. ಕಟ್ಟಿದವರನ್ನು ಕಂಡು ಅಸೂಯೆಪಟ್ಟು ಗಗನಕ್ಕೆ ಹಾರಿದವರೂ ಬರುತ್ತಾರೆ. ಇದನ್ನೋದಿದ, ಉಡುಪಿಯನ್ನು ಬಲ್ಲೆವೆಂದು ತಿಳಿದ ವಾಚಕರು 'ಕಾರಂತರು ಇಂಥಿಂಥವರನ್ನು ಬೆರಳಿಟ್ಟು ತೋರಿಸಿದ್ದಾರೆ' ಎಂದು ಎಣಿಸಿದರೆ ಮಾತ್ರ ತೀರ ತಪ್ಪಾದೀತು. ಉಡುಪಿಯ ಜೀವಂತ ವ್ಯಕ್ತಿಗಳ ಆಂಶಿಕ ಜೀವನ ಚರಿತ್ರೆಯು ಕೂಡ ಇದಲ್ಲ; ಅವರ ಟೀಕೆಯೂ ಇದಲ್ಲ. ನನ್ನ ಟೀಕೆ, ಟಿಪ್ಪಣಿಗಳಿಂದ ಜೀವಂತ ವ್ಯಕ್ತಿಗಳನ್ನು ತೋರಿಸಿ ಕೆಣಕುವುದಂತು ನನ್ನ ಗುರಿಯಲ್ಲೇ ಇಲ್ಲ. ಭಿನ್ನ, ಭಿನ್ನ ವ್ಯಕ್ತಿಗಳಲ್ಲಿ ಕಾಣಸಿಗುವ ಗುಣದೋಷಗಳಿಗೆ ಏನು ಕಾರಣ--ಎಂದು ತಿಳಿಯುವ ಹಂಬಲ ನನ್ನದು. ಆ ಮಟ್ಟಿಗೆ ನನ್ನ ಪಾಲಿಗೆ ಅವರು ಹೆಸರಿಲ್ಲದ x, y, z ಆಸಾಮಿಗಳು. ಇಂದಿನ ವ್ಯಕ್ತಿಗಳೆಲ್ಲರೂ ಅಳಿದ ಮೇಲೆಯೂ, ನಾನು ಇಲ್ಲಿಂದ ಅಸ್ತಂಗತನಾದ ಮೇಲೆಯೂ, ಸಮಾಜದಲ್ಲಿ ಅವೇ ಸಮಸ್ಯೆಗಳು, ಅವೇ ಶೀಲಗಳು, ಅವೇ ನ್ಯೂನತೆಗಳು, ಸುಗುಣಗಳು ಬರುತ್ತವೆ. ಆದುದರಿಂದ, ನನಗೆ ಅವು ಮುಖ್ಯವೇ ಹೊರತು, ಅಂಥ ಗುಣದೋಷಗಳನ್ನು ಹೊತ್ತು ನಲಿಯುವ ಇಂದಿನ ನಿರ್ದಿಷ್ಟ ವ್ಯಕ್ತಿಗಳ ಹೊಗಳಿಕೆ, ತೆಗಳಿಕೆಗಳೆರಡೂ ಅಮುಖ್ಯ ಸಂಗತಿಗಳು.

ಈ ಕಾರಣದಿಂದ, ಉಡುಪಿಯ ಯಾರನ್ನೂ, ಬೆಳಗಾವಿಯ ಯಾರನ್ನೂ ತನ್ನ ವಿಚಾರಧಾರೆಯ ಕಣೆಗೆ ಗುರಿಯಾಗಿ ಇರಿಸಿಕೊಂಡಿಲ್ಲ--ಎಂದು ಹೇಳಿ, ಈ ಬರಹದಿಂದ ನನ್ನಲ್ಲಿ ಪ್ರಚೋದನೆಗೊಂಡ ಕೆಲವೊಂದು ವಿಚಾರ ಸರಣಿಗಳು ಓದುಗರಲ್ಲಿಯೂ ಮೊಳೆತರೆ, ಈ ಬರಹದ ಗುರಿ ಸಾಕಷ್ಟು ಮುಟ್ಟಿದಂತೆ--ಎಂದು ತಿಳಿದು ವಿರಮಿಸುತ್ತೇನೆ.



ಶಿವರಾಮ ಕಾರಂತ

16-12-1974

 

ಪುಟಗಳು: 355

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)