
ಇವತ್ತಿನ ಸಂತೋಷದ ಕ್ಷಣಗಳು, ಅನುಭವಿಸುತ್ತಿರಬಹುದಾದ ದುಃಖದ ತೀವ್ರತೆ ನಾಳೆಯೂ ಇರುವುದಿಲ್ಲ ಅಂತ ಗೊತ್ತಾದಾಗ ನಾವು ದೊಡ್ಡವರಾಗಿರುತ್ತೇವೆ. ಆದರೆ ಸಂತೋಷ, ಕಣ್ಣೀರು, ಒಂಟಿತನ, ಭಯ, ಬೆರಗು ಈ ಎಲ್ಲಾ ಭಾವಗಳಿಗೆ ನಿನ್ನೆ ನಾಳೆಗಳ ಹಂಗಿಲ್ಲ, ಆ ಕ್ಷಣವೇ ಶಾಶ್ವತ ಅಂತ ಅನ್ನಿಸುವುದು ಬಾಲ್ಯದಲ್ಲಿ ಮಾತ್ರ. ಅಂತಹ ಕ್ಷಣಗಳಿಗೇ ನಾವು ತೀವ್ರವಾಗಿ ಸ್ಪಂದಿಸುವುದರಿಂದ ಮನಸ್ಸಲ್ಲಿ ಮೂಡಿದ ಆ ಬಾಲ್ಯದ ಚಿತ್ರಗಳ ಬಣ್ಣ ಯಾವತ್ತಿಗೂ ಮಾಸುವುದಿಲ್ಲ. ವಿಕಾಸ್ ನೇಗಿಲೋಣಿಯವರ 'ರಥಬೀದಿ ಎಕ್ಸ್‌ಪ್ರೆಸ್' ಓದಿದಾಗ ಅಂತಹ ನೂರಾರು ಪೇಯಿಂಟಿಂಗಳ ಚಿತ್ರಸಂತೆಯ ನಡುವೆ ಕಳೆದು ಹೋದ ಅನುಭವವಾಗುತ್ತದೆ. ಪ್ರತಿಯೊಂದು ಚಿತ್ರದಲ್ಲೂ ನಮ್ಮ ಬಾಲ್ಯದ ಒಂದೊಂದು ತುಣುಕು ಕಂಡು ಮನಸ್ಸು ಮತ್ತೆ ಬಾಲ್ಯಕ್ಕಾಗಿ ತುಡಿಯುತ್ತದೆ. ಈ ಪುಸ್ತಕ ಬಾಲ್ಯದಲ್ಲೇ ಊರು ಬಿಟ್ಟು ವಲಸೆ ಹೋಗಿ, ಯಾರದೋ ಮುಲಾಜಿನಲ್ಲಿ ಬದುಕುತ್ತಾ, ಮನೆಯ ದಾರಿಯ ಮೇಲೆ ಮತ್ತೆ ನಮ್ಮ ಹೆಜ್ಜೆ ಮೂಡುವ ದಿನಕ್ಕೆ ಕಾಯುತ್ತಾ, ಆಟಪಾಠಗಳಲ್ಲಿ ಸಂಕಟ ಮರೆಯುತ್ತಾ, ಸರಿರಾತ್ರಿ ಸವಿದ ಮಳೆಯ ಸದ್ದಿಗೆ ಎಚ್ಚರಾಗಿ ಮಲಗಿರುವುದು ಮನೆಯ ಜಗಲಿಯ ಮೇಲೋ ಹಾಸ್ಟೇಲಿನ ಕಬ್ಬಿಣದ ಮಂಚದ ಮೇಲೋ ಅಂತ ಗಲಿಬಿಲಿಗೊಳ್ಳುತ್ತಾ, ಮತ್ತೆ ಹನಿಗಣ್ಣಲ್ಲೇ ನಿದ್ದೆಗೆ ಜಾರುತ್ತಾ ಬಾಲ್ಯ ಕಳೆದ ಎಲ್ಲ ಹುಡುಗರ ಆಟೋಬಯಾಗ್ರಫಿ. ಈ ಪುಸ್ತಕದ ಮೂಲಕ ದೊಡ್ಡವರಾಗಿದ್ದೆ ದೊಡ್ಡ ತಪ್ಪು ಅನ್ನಿಸುವಂತೆ ಮಾಡಿ, ಕೈಹಿಡಿದು ಬಾಲ್ಯದಲ್ಲಿ ನಡೆದಾಡಿದ್ದ ದಾರಿಗಳಲ್ಲಿ ಮತ್ತೆ ನಡೆದಾಡಿಸಿದ ವಿಕಾಸ್ ನೇಗಿಲೋಣಿಯವರಿಗೆ ಪ್ರೀತಿ ಮತ್ತು ಅಕ್ಕರೆ.
-ಸಚಿನ್ ತೀರ್ಥಹಳ್ಳಿ