ರೋಲೆಂಡ್ ಕೋಟ್ಸ್ ಎಂದಿನಂತೆ ಮಲಗುವ ಮುನ್ನ ತಮ್ಮ ಮನೆಯ ಕಾರಿಡಾರಿನಲ್ಲಿ ಸ್ವೆಟರ್ ಧರಿಸಿ, ಬೀಡಿ ಹಚ್ಚಿ ಬಿದಿರಿನ ಒರಗು ಕುರ್ಚಿಯಲ್ಲಿ ಒರಗಿ ಕೂತು ಗಿಟಾರ್ ನುಡಿಸತೊಡಗಿದರು. ಕುರುಡಾಗಿದ್ದ ಅವರಿಗೆ ನೋಟದ ವಿನಃ ಈ ಜಗತ್ತನ್ನು ಸವಿಯಲು ಕೊಂಚ ಹೆಚ್ಚಿಗೆ ಜಾಗೃತವೂ, ಸೂಕ್ಷ್ಮವೂ ಆದ ಮಿಕ್ಕ ಇಂದ್ರಿಯಗಳು ಸಹಕರಿಸುತ್ತಿದ್ದರಿಂದ ಅವರು ಗಿಟಾರನ್ನು ತಮ್ಮ ಹೊಟ್ಟೆಗೆ ಆತು ಹಿಡಿದು, ಒಂದೊಂದಾಗಿ ಅದರ ತಂತಿಗಳನ್ನು ಮೀಟತೊಡಗಿ, ಬೀಡಿ ತುದಿಯ ಕಿಡಿಯು ಉಜ್ವಲಿಸುವಂತೆ ಒಮ್ಮೆ ನೀಳವಾಗಿ ಉಸಿರೊಳಗೆಳೆದು, ತಂತಿಯ ನಾದ ತರಂಗಗಳು ಗಿಟಾರಿನ ಒಳಗೆಲ್ಲ ಸಂಚರಿಸಿ ಉಂಟಾಗುತ್ತಿದ್ದ ಸಣ್ಣ ಕಂಪನಗಳನ್ನು ಹೊಟ್ಟೆತುಂಬ ಆನಂದಿಸಿ, ಬೀಡಿಯನ್ನು ಕಚ್ಚಿಟ್ಟ ಹಲ್ಲುಗಳ ನಡುವಿನಿಂದ ಉಪ್ಪೆಂದು ಹೊಗೆಯ ಮೋಡವೊಂದನ್ನು ಹೊರಚೆಲ್ಲಿ, ತುಟಿಯಲ್ಲಿ ಮೂಡಿದ ಮುಗುಳುನಗೆಯೊಂದಿಗೆ ಮತ್ತೊಂದು ತರಂಗಗಳ ಲಹರಿಗೆ ಸಜ್ಜಾಗಿ ಮಂದ್ರ ಸ್ವರಗಳ ಮೇಲ್ತಿಂತಿಯನ್ನು ಮೀಟುತ್ತಿರುವಾಗಲೇ ಕರ್ಣೇಂದ್ರಿಯದ ಸುಖಕ್ಕೆ ಏನೋ ಭಂಗ ಬಂದಂತಾಗಿ ತಂತಿ ಮೀಟುವುದ ನಿಲ್ಲಿಸಿ ಆಲಿಸಿದರು. ಸಹಜವಾದ ಕಾಡು ಹುಳಗಳ ನಿಶಾಚಾರಿ ಪ್ರಪಂಚದ ಸದ್ದಿನೊಂದಿಗೆ ಅಸಹಜವಾದ ಮಾನವ ಸಮೂಹ ಮತ್ತು ನಾಯಿಗಳ ಗಲಭೆಯೊಂದು ಕೇಳಿಸತೊಡಗಿ, ಗಿಟಾರನ್ನು ಪಕ್ಕದಲ್ಲಿ ಒರಗಿಸಿ ಕುರ್ಚಿಯಿಂದೆದ್ದು, ಕೊಂಚವೇ ಉಳಿದಿದ್ದ ಬೀಡಿಯನ್ನು ಕೊನೆಯದಾಗೊಮ್ಮೆ ಎಳೆದು, ಕೆಳಹಾಕಿ ಹೊಸಕಿದರು.