
ಎಲ್ಲಾ ವಿದ್ಯೆಗಳಿಗೂ ಎರಡು ಮುಖಗಳುಂಟು- ಒಂದು ಹೊರಮುಖ. ಇನ್ನೊಂದು ಒಳಮುಖ, ಹೊರಮುಖ ಸಾಮಾನ್ಯ ಜ್ಞಾನ. ಸಾಮಾನ್ಯ ಜನರಿಗೂ ಸುಲಭವಾಗಿ ಅರ್ಥವಾಗುವಂತದ್ದು, ಎಲ್ಲರೂ ತಿಳಿದು, ಅನುಭವಿಸಿ ಬಳಸುವಂತಿರುತ್ತದೆ. ಒಳಮುಖ ಸ್ವಲ್ಪ ಸಂಕೀರ್ಣವೂ, ಮೇಲ್ನೋಟಕ್ಕೆ ತಿಳಿಯಲಾಗದಂತಹದ್ದೂ, ಗ್ರಹಿಸಲು ಕಷ್ಟ ಆಗುವಂಥದ್ದು. ಇದರಲ್ಲಿ ತಾಂತ್ರಿಕ, ತಾತ್ವಿಕ, ಸೈದ್ಧಾಂತಿಕ ಅಂಶಗಳಿದ್ದು, ವಿಶೇಷವೂ ವಿದ್ವತ್ತೂರ್ಣವು ಆಗಿರುವುದರಿಂದ, ಇದು ವಿಜ್ಞಾನವೆನಿಸುತ್ತದೆ. ದೇವಾಲಯದ ಸೌಂದರ್ಯವನ್ನು ಆನಂದಿಸಿ, ಅದರ ಮೇಲೆ ಲಕ್ಷಣಗಳನ್ನು ಅರಿಯುವುದು, ಅದನ್ನು ರಚಿಸಿದ ಶಿಲ್ಪಿಯನ್ನು ಪ್ರಶಂಸಿಸುವುದು, ಇತ್ಯಾದಿಗಳು, ದೇವಾಲಯ ವಾಸ್ತು ಜ್ಞಾನದ ಒಂದು ಮುಖವೆನಿಸಿದರೆ, ಅದರ ನಿರ್ಮಾಣದ ಹಿಂದಿನ ಸಂಕೀರ್ಣ ಸ್ವರೂಪ, ಅಂದರೆ ನಿರ್ಮಾಣ ವಿಧಾನದ ತಾಂತ್ರಿಕ ಅಂಶಗಳು, ಅದರ ವಾಸ್ತು ಜ್ಞಾನ ಬೆಳೆದು ಬಂದ ರೀತಿ, ಅನುಭವಗಳೆಲ್ಲವೂ ವಾಸ್ತುವಿದ್ಯಾ ಜ್ಞಾನದ ಒಳಮುಖವೆನಿಸಿಕೊಳ್ಳುತ್ತವೆ. ಭಾರತೀಯ ವಾಸ್ತು ಶಿಲ್ಪಶಾಸ್ತ್ರದ ಅಧ್ಯಯನಕ್ಕೆ ಪ್ರಾಚೀನ ಗ್ರಂಥಗಳೂ ವಾಸ್ತು ಮಾದರಿಗಳು ವಿಪುಲವಾಗಿ ದೊರೆಯುತ್ತವೆ. ಆದರೆ, ಭಾರತೀಯ ವಾಸ್ತು ವಿಜ್ಞಾನಕ್ಕೆ ಸಂಬಂಧಿಸಿದ ಈ ಎಲ್ಲಾ ಗ್ರಂಥಗಳ ಜ್ಞಾನವನ್ನು ಸಂಗ್ರಹಿಸಿ ಪ್ರಸ್ತುತ ಪಡಿಸಿರುವ ಯಾವುದೇ ಭಾಷೆಯ ಗ್ರಂಥ ಅಲಭ್ಯವೆಂದೇ ಹೇಳಬೇಕು. ಈ ಕೊರತೆಯನ್ನು ಗಮನಿಸಿ ಪ್ರಸ್ತುತ ಕೃತಿಯ ಲೇಖಕರಾದ ಡಾ. ಜಿ. ಮನೋಜ್‌ರವರು, ತಮ್ಮಲ್ಲಿರುವ ವಾಸ್ತುಜ್ಞಾನ, ಸಂಶೋಧನಾನುಭವಗಳ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರಳವಾಗಿ, ದ್ರಾವಿಡ ದೇವಾಲಯ ವಾಸ್ತುವಿನ ವಿವಿಧ ಅಂಗಗಳ ಪರಿಚಯವನ್ನು ಮಾಡಲು ಪ್ರಯತ್ನಿಸಿದ್ದಾರೆ.
ಕರ್ನಾಟಕದ ವಾಸ್ತು ಪರಂಪರೆ ಒಂದು ಮಹಾಸಾಗರವಿದ್ದಂತೆ. ವಾಸ್ತು ಸಂಪ್ರದಾಯದ ಸಮಗ್ರ ಚಿತ್ರಣವನ್ನು, ವಾಸ್ತುವಿನ ಎಲ್ಲಾ ಅಂಶಗಳನ್ನು ಕೂಡಿಸಿಕೊಂಡು, ಎಲ್ಲ ವೈವಿಧ್ಯತೆಗಳನ್ನು ಉದಾಹರಿಸಿಕೊಂಡು, ಸಂಕ್ಷಿಪ್ತವಾಗಿ ನೀಡುವುದು ಯಾರಿಗೂ ಅಸಾಧ್ಯವಾದ ಕೆಲಸವೇ ಸರಿ. ಡಾ. ಮನೋಜ್ ರವರು ಪ್ರಸ್ತುತ ಕೃತಿಯಲ್ಲಿ ನೀಡಿರುವ ಕರ್ನಾಟಕ ವಾಸ್ತು ಪರಂಪರೆಯ ಚಿತ್ರಣ ಸ್ಥೂಲವಾದುದು ಮಾತ್ರವಲ್ಲ, ಸಂಕ್ಷಿಪ್ತವಾದುದು ಕೂಡ. ಈ ಕೃತಿ ವಾಸ್ತು ತಜ್ಞರಿಗಾಗಿ ರಚಿತವಾದುದಲ್ಲ. ಪ್ರಾರಂಭಿಕರಿಗೆ, ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ಮತ್ತು ಸಂಶೋಧಕರಿಗೆ ಸಾಕಾಗುವಷ್ಟು ಮಾಹಿತಿ ಈ ಕೃತಿಯಲ್ಲಿದೆ.
ಪ್ರಸ್ತುತ ಕೃತಿಯಲ್ಲಿ ಬಹಳಷ್ಟು ರೇಖಾಚಿತ್ರಗಳೂ 250ಕ್ಕೂ ಹೆಚ್ಚು ಛಾಯಾಚಿತ್ರಗಳೂ ತಲವಿನ್ಯಾಗಳು ಇದ್ದು ಒದುಗರಿಗೆ ವಿಷಯದ ಸಮಗ್ರ ಚಿತ್ರಣ ಮೂಡುವಂತೆ ಮಾಡಿದೆ. ವಿಷಯ ಮಂಡನೆ ಸುಲಲಿತವಾಗಿದ್ದು ಸಂಶಯಕ್ಕೆ ಆಸ್ಪದ ಕಡಿಮೆ. ಲೇಖಕರು ನೀಡಿರುವ ಉದಾಹರಣೆಗಳಿಗೆ ವ್ಯತ್ಯಾಸವಾಗಿ, ವ್ಯತಿರಿಕ್ತವಾಗಿ, ಅಪವಾದವಾಗಿ ಅನೇಕ ವಾಸ್ತು ಮಾದರಿಗಳು, ಅಂಗಗಳು ಒದುಗರ ನೆನಪಿಗೆ ಬರಬಹುದು.