Click here to Download MyLang App

ಕನಸೇ ಕಾಡುಮಲ್ಲಿಗೆ

ಕನಸೇ ಕಾಡುಮಲ್ಲಿಗೆ

e-book

ಪಬ್ಲಿಶರ್
Madhu YN
ಮಾಮೂಲು ಬೆಲೆ
Rs. 199.00
ಸೇಲ್ ಬೆಲೆ
Rs. 199.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಕನಸೇ ಕಾಡುಮಲ್ಲಿಗೆ - ಕಾದಂಬರಿ 

ಬರೆದವರು:

ಮಧು ವೈ.ಎನ್

ವಸತಿ ಶಾಲೆಯೊಂದರ ಪರಿಸರದಲ್ಲಿ ಘಟಿಸುವ ಪ್ರೇಮಕಥನ ಕಾದಂಬರಿಯ ಕೇಂದ್ರದಲ್ಲಿದೆ. ಹಾಸ್ಟೆಲ್‌ನಲ್ಲಿನ ಅವ್ಯವಸ್ಥೆ ವಿರುದ್ಧ ಬಂಡೇಳುವುದು, ಆ ಬಂಡಾಯ ವಿಫಲವಾಗಿ ಸಿಕ್ಕಿಬೀಳುವುದು, ವಿದ್ಯಾರ್ಥಿಗಳ ನಡುವಿನ ಜಗಳ, ರಜಾದಿನಗಳಲ್ಲಿನ ಪ್ರೇಮಪತ್ರಗಳ ವ್ಯವಹಾರ – ವಿದ್ಯಾರ್ಥಿಜೀವನದಲ್ಲಿ ಸಹಜವೆನ್ನುವಂಥ ಘಟನೆಗಳೇ ಇಲ್ಲೂ ಇದ್ದರೂ, ಅವುಗಳಿಗೆ ರಕ್ತಮಾಂಸ ತುಂಬುವಲ್ಲಿ ಕಾದಂಬರಿಕಾರರ ಸೃಜನಶೀಲ ಶಕ್ತಿಯ ಮಹತ್ವವಿದೆ.  ಹದಿಹರೆಯದ ಹುಡುಗ ಹುಡುಗಿಯ ನಡುವಣ ಆಕರ್ಷಣೆ–ಪ್ರೇಮಕ್ಕೆ ಸಂಬಂಧಿಸಿದ ಕಥನದ ನಿರೂಪಣೆಗೆ ಕಾದಂಬರಿಕಾರರು ಬಳಸಿಕೊಂಡಿರುವ ತಂತ್ರ ಕುತೂಹಲಕರವಾಗಿದೆ. ವಸ್ತುವಿನ ಆಯ್ಕೆಯಲ್ಲಷ್ಟೇ ಅಲ್ಲ, ಆ ವಸ್ತುವಿಗೆ ತಕ್ಕುದಾದ ಭಾಷೆಯನ್ನು ಕಟ್ಟಿಕೊಳ್ಳುವಲ್ಲಿಯೂ ಮಧು ಯಶಸ್ವಿಯಾಗಿದ್ದಾರೆ. ಹದಿಹರೆಯದವರ ಲೋಕವನ್ನು ಅವರದೇ ವಿಶಿಷ್ಟ ನುಡಿಗಟ್ಟಿನಲ್ಲಿ ಕಾಣಿಸುವ ಪ್ರಯತ್ನ ಕಾದಂಬರಿಗೆ ವಿಶಿಷ್ಟ ಚೆಲುವನ್ನು ತಂದುಕೊಟ್ಟಿದೆ. ಗಾಂಧೀಜಿ, ಅಂಬೇಡ್ಕರ್, ಇಂದಿರಾಗಾಂಧಿ, ನೆಹರೂ ಎಲ್ಲರೂ ಇಲ್ಲಿ ಬಂದುಹೋಗುತ್ತಾರೆ. ಸೈದ್ಧಾಂತಿಕ ಸ್ಪಷ್ಟತೆಯ ಹಂಗಿರದ ಈ ಹೆಸರುಗಳು, ಎಂಥ ಮಹತ್ವದ ಸಂಗತಿಯನ್ನೂ ಲಘುವಾಗಿಸುವ, ನಗೆಯಾಗಿಸುವ ಹರೆಯದ ಕಿಡಿಗೇಡಿತನವನ್ನು ಸೂಚಿಸುವಂತಿವೆ.  ಪ್ರತಿ ಸಾಲೂ ಓದುಗರಿಗೆ ಬೆರಗಿನಂತೆ ಕಾಣಿಸಬೇಕು, ಓದಿನುದ್ದಕ್ಕೂ ಸಹೃದಯರ ಮುಖದಲ್ಲಿ ಮಂದಹಾಸ ಉಳಿದಿರಬೇಕೆನ್ನುವ ಸಂಕಲ್ಪದೊಂದಿಗೇ ಈ ಕಾದಂಬರಿ ರೂಪುಗೊಂಡಂತಿದೆ. ಶಿರಾ ಸೀಮೆಯ ಭಾಷೆಯೊಂದಿಗೆ, ಈ ಕಾಲದ ಶಾಲೆ–ಕಾಲೇಜು ಹುಡುಗ ಹುಡುಗಿಯರ ನಡುವೆ ಬಳಕೆಯಾಗುವ ಮಾತುಗಳನ್ನು ಕಚ್ಚಾಮಾಲಿನ ರೂಪದಲ್ಲಿಯೇ ಬಳಸಿಕೊಂಡಿರುವುದು ಕಥನದ ಹೊಳಪು ಹೆಚ್ಚಿಸಿದೆ. ಪ್ರಥಮ ಪುರುಷ ಪ್ರಯೋಗ ನಿರೂಪಣೆಯಲ್ಲಿನ ಲವಲವಿಕೆಗೆ ಪೂರಕವಾಗಿದೆ.

ಕಾದಂಬರಿಯ ಕಥೆ ನಾಯಕ ಕೇಂದ್ರಿತವಾಗಿದ್ದರೂ, ನಾಯಕಿಯ ಪಾತ್ರ ತನ್ನ ಗಟ್ಟಿತನದಿಂದ ಗಮನಸೆಳೆಯುತ್ತದೆ. ಹುಡುಗ ತನ್ನ ಪ್ರೇಮಿಯೊಂದಿಗೆ ಹರಯಕ್ಕೆ ಸಹಜವಾದ ಭಾವನೆಗಳೊಂದಿಗೆ ಚೆಲ್ಲುಚೆಲ್ಲಾಗಿ ನಡೆದುಕೊಂಡರೆ, ಪ್ರೇಮದ ಆಕರ್ಷಣೆಯ ಹಂತವನ್ನು ದಾಟಿದ ಪ್ರೌಢತೆಯನ್ನು ತನ್ನ ನಡೆ–ನುಡಿಯಲ್ಲಿ ಪ್ರಕಟಪಡಿಸುತ್ತಾಳೆ. ದಾಂಪತ್ಯದಲ್ಲಿ ಗಂಡಿನ ಮೇಲೆ ಹೆಣ್ಣು ತೋರುವ ಕಾಳಜಿಯುತ ಅಧಿಕಾರವನ್ನು ಇಲ್ಲಿನ ಹುಡುಗಿ ತನ್ನ ಪ್ರೇಮಿಯ ಮೇಲೆ ಚಲಾಯಿಸುತ್ತಾಳೆ. ನಾಯಕನನ್ನು ಹುಡುಕಿಕೊಂಡು ಅವನ ಊರಿಗೆ ಬಂದು, ದೋಸೆ ತಿನ್ನಿಸಿ ಹೋಗುವಷ್ಟು ಗಟ್ಟಿಗಿತ್ತಿ ಈ ನಾಯಕಿ. ಲಘುವಾದ ಘಟನೆಗಳ ಹಂದರದಲ್ಲಿ ಅನಾವರಣಗೊಳ್ಳುವ ‘ಕನಸೇ ಕಾಡುಮಲ್ಲಿಗೆ’, ರೈತರ ದುರಂತ ಅಂತ್ಯದ ಘಟನೆಯೊಂದನ್ನು ತಳುಕು ಹಾಕಿಕೊಳ್ಳುವ ಮೂಲಕ ಇದ್ದಕ್ಕಿದ್ದಂತೆ ಗಂಭೀರಗೊಳ್ಳುತ್ತದೆ. ತುಮಕೂರು ಜಿಲ್ಲೆಯ ಶಿರಾದಲ್ಲಿ ರೈತರ ಮೇಲೆ ನಡೆದ ಗೋಲಿಬಾರ್‌ ಕರ್ನಾಟಕದ ಕೃಷಿ ಚರಿತ್ರೆಯ ಕಹಿ ಅಧ್ಯಾಯಗಳಲ್ಲೊಂದು. 1998ರಲ್ಲಿ ನಡೆದ ಈ ಘಟನೆಯಲ್ಲಿ ಆರು ರೈತರು ಹಾಗೂ ಇಬ್ಬರು ಪೊಲೀಸರು ಜೀವ ಕಳೆದುಕೊಂಡಿದ್ದರು. ಕ್ವಿಂಟಲ್‌ಗೆ ಸಾವಿರ ರೂಪಾಯಿ ಆಸುಪಾಸಿನಲ್ಲಿದ್ದ ಕಡಲೆಕಾಯಿಯ ಬೆಲೆ ಒಮ್ಮಿಂದೊಮ್ಮೆಗೆ ಇನ್ನೂರು ರೂಪಾಯಿಗೆ ಕುಸಿದಾಗ ರೈತರು ಪ್ರತಿಭಟನೆಗೆ ತೊಡಗಿದ್ದರು. ಪ್ರಕರಣ ಹತೋಟಿ ಮೀರಿದ್ದರಿಂದಾಗಿ ಗೋಲಿಬಾರ್‌ ನಡೆದಿತ್ತು. ರೈತರ ಪ್ರತಿಭಟನೆಯನ್ನು ಕೆಲವು ದುಷ್ಕರ್ಮಿಗಳು ತಮ್ಮ ಹಿತಾಸಕ್ತಿಗೆ ಬಳಸಿಕೊಂಡಿದ್ದು ಹಿಂಸಾಚಾರಕ್ಕೆ ಕಾರಣವಾಗಿ, ಸಾಯಿಪ್ರಕಾಶ್‌ ಎನ್ನುವ ಜನಪರ ಪೊಲೀಸ್‌ ಅಧಿಕಾರಿಯನ್ನು ದಾರುಣವಾಗಿ ಕೊಲ್ಲಲಾಗಿತ್ತು. ಎರಡೂವರೆ ದಶಕಗಳ ಹಿಂದಿನ ಈ ಘಟನೆ, ‘ಕನಸೇ ಕಾಡುಮಲ್ಲಿಗೆ’ಕಾದಂಬರಿಯ ಕ್ಲೈಮ್ಯಾಕ್ಸ್‌.

ವಿಷಾದದ ಸ್ಪರ್ಶದೊಂದಿಗೆ ಹಾಸ್ಯ ಪ್ರಸಂಗವೊಂದು ಇದ್ದಕ್ಕಿದ್ದಂತೆ ಹೊಸ ಮೌಲ್ಯವೊಂದನ್ನು ಎಟುಕಿಸಿಕೊಂಡಂತೆ, ಓದುಗರನ್ನು ರಂಜಿಸುವುದನ್ನೇ ಪ್ರಧಾನ ಉದ್ದೇಶವಾಗಿಸಿಕೊಂಡಿರುವ ‘ಕನಸೇ ಕಾಡುಮಲ್ಲಿಗೆ’ ಕಾದಂಬರಿ ರೈತಾಪಿ ವರ್ಗಕ್ಕೆ ಸಂಬಂಧಿಸಿದ ದುರಂತ ಘಟನೆಯೊಂದನ್ನು ಒಳಗೊಳ್ಳುವ ಮೂಲಕ ತನ್ನ ಲಘುತನವನ್ನು ಕಳೆದುಕೊಂಡು, ಹೊಸ ಆಯಾಮವೊಂದನ್ನು ದೊರಕಿಸಿಕೊಂಡಿದೆ.

- ಹ.ಚ. ರಘುನಾಥ, ಪ್ರಜಾವಾಣಿ ವಿಮರ್ಶೆ 

ಹೊಸ ತಲೆಮಾರಿನ ಭರವಸೆಯ ಲೇಖಕ ಮಧು ವೈ ಎನ್ ಅವರ ಸೂಪರ್ ಹಿಟ್ ಕಾದಂಬರಿ "ಕನಸೇ ಕಾಡುಮಲ್ಲಿಗೆ" ಈಗ ಓದಿ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೈಲ್ಯಾಂಗ್ ಅಲ್ಲಿ..

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)