ಕಾರೇ ಹಣ್ಣು ಕಥಾ ಸಂಕಲನ
ಬರೆದವರು:
ಮಧು ವೈ ಎನ್
ಕಥನ ಕ್ರಮದಲ್ಲಿ ಉದ್ರೇಕಿಸಿ ಹೇಳೋದು, ಉದಾರವಾಗಿ ಹೇಳೋದು, ವಿಧುರನಾಗಿ ನಿರೂಪಿಸೋದು ಹೀಗೆ ಹಲವಾರು ತಂತ್ರಗಳಿವೆ. ಇಲ್ಲಿನ ಕಥನಗಳು ವಿಧುರ ನಿರೂಪಣೆಯಲ್ಲಿವೆ ಆದರೂ, ಕಥೆಗಾರ ಇದನ್ನ ತಂತ್ರದಂತೆ ಬಳಸಿಲ್ಲ ಎಂಬುದು ಗಮನಾರ್ಹ. ಇದೊಂದು ತಂತ್ರ ಅನ್ನುವ ಅರಿವೂ ಕಥೆಗಾರನಿಗೆ ಇರಲಾರದು ಅನ್ನುವುದು ನನ್ನ ಅನಿಸಿಕೆ. ಮಧು, ಅವರ ಕಥೆಗಳಲ್ಲಿ ಘಟನೆಯಿಂದ ಹೊರಗುಳಿದು ಅದನ್ನ ಹೀಗ್ಹೀಗಾಯ್ತು ಅಂತ ಹೇಳಲು ಮಾತ್ರ ಬಯಸುತ್ತಾರೆ. ನಿರ್ದೇಶಕ ಓಜು, ಕೆನ್ ಲೊರೊಚ್ ರಂತಹ ನಿರೂಪಣೆ ಶೈಲಿಯಂತೆ ಭಾವನೆಯನ್ನ ವೈಭವೀಕರಿಸದೆ, ಹಾಗೆ ಮಾಡುವುದರಿಂದ clinical ಆಗಿ ನೋಡುವ ಶಕ್ತಿಯನ್ನು ಕಳೆದುಕೊಳ್ಳಬಹುದು ಅನ್ನುವ ಎಚ್ಚರದಿಂದ ಇಲ್ಲಿ ಬರವಣಿಗೆ ಮಂದ್ರದಲ್ಲೆ ಗುನುಗುತ್ತಿದೆ. ಸಣ್ಣ ಕಥೆಗಳಲ್ಲಿ ಏನೊ ಹೇಳಿ ನಮ್ಮ ಯೋಚನಾ ಮತ್ತು ಕಲ್ಪನಾ ಲಹರಿಯನ್ನ ಬೇರೆ ಕಡೆಗೆ distract ಮಾಡಿ ಕೊನೆಗೆ, ಎಷ್ಟೋ ಸಲ ಕೊನೇ ಲೈನಲ್ಲಿ, ಒಂದು twist ಕೊಟ್ಟು ನಮಗೆ ಮಳ್ಳ ಮಾಡುವ ಕಲೆಗಾರಿಕೆ ನಾವು ಮೊದಲಿನಿಂದಲೂ ನೋಡಿದ್ದೇವೆ. ಮಧು ಇಲ್ಲೆಲ್ಲೂ ಅಂತಹ ನಾನೆಷ್ಟು ಬುದ್ಧಿವಂತ ಗೊತ್ತಾ ಅನ್ನುವ ಅಹಂ ಪ್ರವರ್ಧನೆಗೆ ಹೋಗದೆ, ಹೀಗೊಂದು ಕೆಟ್ಟ ಘಟನೆಗೆ ಸಾಕ್ಷಿಯಾಗಿದ್ದೀನಿ. ಅದನ್ನ ನಿಮಗೆ ಹೇಳ್ತಿನಿ. ಹಾಗೆ ಹೇಳೊದರಿಂದ ನಾನು ಹಗುರ ಆಗಬಹುದು ಅನ್ನುವ ಆರ್ದ್ರತೆಯಿಂದ ಕಥೆ ನಿರೂಪಿಸಿದ್ದಾರೆ. ಎಲ್ಲ ಕಥೆಗಳ ಆಳದಲ್ಲಿ ಹೆಚ್ಚಿನ conscious middle class ಜೀವಗಳಲ್ಲಿ, ಅದರಲ್ಲೂ ಗಂಡಸರಲ್ಲಿ ಇರುವ ಒಂಟಿತನ ನಿಚ್ಛಳವಾಗಿ ಕಾಣುತ್ತದೆ. ಇವು ನಿಮಗೆ ರಂಜನೆ ಆಗಲಿ ಅನ್ನುವುದಕ್ಕಿಂತ ಈ ರಂಜನೆಗಳಿಗೆಲ್ಲ ಏನಾದರೂ ಅರ್ಥ ಇದೆಯೆ ಅಂತೆಲ್ಲ ಜಿಜ್ಞಾಸೆ ನಡೆಸುವ ಪಾತ್ರಗಳು ಎಲ್ಲ ಕಥೆಗಳಲ್ಲೂ ಇಣುಕುತ್ತವೆ. ಇಲ್ಲಿನ ಹತ್ತೂ ಕಥೆಗಳಲ್ಲಿ ಕಥೆಗಾರ ನನಗೆ ನಿಮಗಿಂತ ಹೆಚ್ಚು ಗೊತ್ತು, ಕೇಳಿ ಅನ್ನೊ ದಾರ್ಷಟ್ಯ ಎಲ್ಲೂ ಇಲ್ಲ. ಬದಲಿಗೆ ಹೀಗೆಲ್ಲ ಆಯ್ತು ನಂಗೇನೂ ಅರ್ಥ ಆಗಿಲ್ಲ ಅನ್ನುವ ಗೊಂದಲದಲ್ಲೇ ತನ್ನ ವಿವಶತೆ ವಿನಯ ಎರಡೂ ತೋರಿಸಿದ್ದಾರೆ.
- ಗಿರಿರಾಜ್, ಚಿತ್ರ ನಿರ್ದೇಶಕರು