ಪ್ರಕಾಶಕರು: ನಾಗು ಸ್ಮಾರಕ ಪ್ರಕಾಶನ
Publisher: Naagu Smaraka Prakashana
ಬರೆದವರು ಮತ್ತು ಓದಿದವರು: ಸಿ.ಪಿ. ನಾಗರಾಜ
ಆಡಿಯೋ ಪುಸ್ತಕದ ಅವಧಿ : 7 ಗಂಟೆ 1 ನಿಮಿಷ
ಕನ್ನಡದ ಒಳ್ಳೆಯ ಬರಹಗಾರರಲ್ಲಿ ಒಬ್ಬರಾಗಿದ್ದ ಪ್ರೊಫೆಸರ್ ಎಚ್.ಎಲ್.ಕೇಶವಮೂರ್ತಿ ಅವರ ಸಂಪಾದಕತ್ವದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಪ್ರಕಟವಾಗುತ್ತಿದ್ದ ‘ ಉದಯಕಾಲ’ ಪತ್ರಿಕೆಯಲ್ಲಿ 1998 ನೆಯ ಇಸವಿಯಲ್ಲಿ ನಾನು ಬರೆದ ಐವತ್ತೇಳು ಅಂಕಣ ಬರಹಗಳು ‘ ಮುದ್ದೆ ಗಂಟು ‘ ಎಂಬ ಹೆಸರಿನ ಪುಸ್ತಕ ರೂಪದಲ್ಲಿ ಮೂಡಿಬಂದಿವೆ. ಈ ಬರಹಗಳನ್ನು ಈಗ ನಾನು ಇಲ್ಲಿ ಓದಿದ್ದೇನೆ. ನನ್ನ ಅಂಕಣ ಬರಹಗಳ ಬಗ್ಗೆ ಪ್ರೊಫೆಸರ್ ಎಚ್.ಎಲ್.ಕೇಶವಮೂರ್ತಿಯವರು ಮತ್ತು ಗೆಳೆಯ ಸುಭಾಷ್ ರಾಜಮಾನೆ ಅವರು ಈ ರೀತಿ ಹೇಳಿದ್ದಾರೆ.
- ನಮ್ಮ ಸುತ್ತಮುತ್ತ ಹಲವು ಘಟನೆಗಳು ನಡೆಯುತ್ತಿರುತ್ತವೆ. ಅವನ್ನು ನಾವು ನೋಡುತ್ತೇವೆ, ಮರೆಯುತ್ತೇವೆ, ಯಾವುದೂ ನಮ್ಮನ್ನು ಕಾಡುವುದಿಲ್ಲ. ನೋಡಿದ್ದನ್ನು ಮನನ ಮಾಡತೊಡಗಿದಾಗ ಮನಸ್ಸಿನ ಅಂತರಾಳಕ್ಕೆ ಇಳಿದು ಕಾಡುತ್ತವೆ. ದೊಡ್ಡವರ ಸಣ್ಣತನ ಬೆಚ್ಚಿಬೀಳಿಸುತ್ತದೆ. ಸಣ್ಣವರ ದೊಡ್ಡತನ ಚಕಿತಗೊಳಿಸುತ್ತದೆ. ಹೀಗೆ ಕಾಡುವ, ದಿಗ್ಭ್ರಮೆ ಮೂಡಿಸುವ, ಚಕಿತಗೊಳಿಸುವ ಹಲವು ಬರಹಗಳು ಈ ಸಂಕಲನದಲ್ಲಿವೆ. ಇಲ್ಲಿನ ಬಹುತೇಕ ಬರಹಗಳು ವಾಸ್ತವಿಕ ನೆಲೆಗಟ್ಟನ್ನು ಹೊಂದಿರುವಂತಹವು. ತಾವು ಕಂಡ, ಕೇಳಿದ ಸಂಗತಿಗಳಿಗೆ ಸ್ಪಂದಿಸಿದ ರೀತಿಯನ್ನು ಲೇಖಕರು ಬಿಡಿಸಿದ್ದಾರೆ. ಅವರನ್ನು ಬಹುವಾಗಿ ಕಾಡಿದ ಸಮಸ್ಯೆ ಯಾವುದು? ಜಾತಿ, ಮತ, ಧರ್ಮ, ದೇವರು ಮತ್ತು ಅವುಗಳ ಉಪ ಉತ್ಪನ್ನವಾದ ಸಾಮಾಜಿಕ ಸಮಸ್ಯೆಗಳು ಅನ್ನಿಸುತ್ತದೆ--ಎಚ್.ಎಲ್.ಕೇಶವಮೂರ್ತಿ
- ಈ ಕೃತಿಯ ಲೇಖನಗಳು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಸ್ಥಳೀಯ ಪತ್ರಿಕೆಯೊಂದಕ್ಕೆ ಬರೆದ ಅಂಕಣ ಬರಹಗಳೆಂದು ಲೇಖಕರು ಹೇಳಿಕೊಂಡಿದ್ದಾರೆ. ಇಲ್ಲಿ ನಿರೂಪಿತವಾಗಿರುವ ಘಟನೆ, ನೆನಪು, ಪ್ರಸಂಗ, ಸನ್ನಿವೇಶಗಳು ಆ ಕ್ಷಣಕ್ಕೆ ಕಾಲದ ದೃಷ್ಟಿಯಿಂದ ಹಳೆಯದಾದುದು ಎನ್ನಿಸುತ್ತವೆ. ಆದರೆ ಅವುಗಳ ಒಡಲಿನಲ್ಲಿ ಹುದುಗಿರುವ ಸೂಕ್ಷ್ಮವಾಗಿರುವ ನೋಟ ಮತ್ತು ಚಿಂತನೆಗಳು, ಇಂದಿನ ವರ್ತಮಾನಕ್ಕೂ ಸಲ್ಲುತ್ತವೆ. ಆದ್ದರಿಂದ ಅವು ನವನವೀನತೆಯಿಂದ ಹೊಳೆಯುತ್ತವೆ. ಯಾಕೆಂದರೆ ಈ ನೆನಪುಗಳಿಗೆ ಯಾವುದೋ ಕಾಲದಲ್ಲಿ ಗತಿಸಿಹೋದದ್ದು ಎಂಬ ಹಳಹಳಿಕೆ, ವಿಷಾದ ಅಥವಾ ಸಿನಿಕತೆಯ ನೆರಳು ಆವರಿಸಿಕೊಂಡಿಲ್ಲ. ಇಲ್ಲಿಯ ಬರಹಗಳ ನರನಾಡಿಗಳಲ್ಲಿ ಪ್ರಗತಿಶೀಲ ಮನಸ್ಸೊಂದರ ಸಮಾನತೆ ತುಡಿತಗಳು ಹಾಸುಹೊಕ್ಕಾಗಿವೆ—ಸುಭಾಷ್ ರಾಜಮಾನೆ
ಈಗ ಸಿ.ಪಿ.ನಾಗರಾಜ ಅವರದ್ದೇ ದನಿಯಲ್ಲಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.