ಕುವೆಂಪು ಅವರ ನಾಟಕಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಕಾಣುವ ಮತ್ತೆರಡು ಧಾರೆಗಳೆಮದರೆ ಗುರು-ಶಿಷ್ಯ ಮತ್ತು ತಾಯಿ-ಮಗ ಸಂಬಂಧ ಹಾಗೂ ಸಂಘರ್ಷಗಳು. ಮೊದಲಿಗೆ ಗುರು-ಶಿಷ್ಯ ಸಂಬಂಧದ ಸಂವಾದ ಮತ್ತು ಸಂಘರ್ಷಗಳನ್ನು ನೋಡಬಹುದು. ಈ ಗುರುತತ್ತ್ವ ಮತ್ತು ಕುವೆಂಪು ಅವರ ಬದುಕಿಗೂ ಅವಿನಾಭಾವ ಸಂಬಂಧವಿದೆ. ಬೆರಳ್ ಗೆ ಕೊರಳ್ ನಾಟಕದ ಕೊನೆಯಲ್ಲಿ ನೀಡಿರುವ ಟಿಪ್ಪಣಿಕೆಯಲ್ಲಿ ಗುರುತ್ತ್ವವನ್ನು ಪ್ರತಿಪಾದಿಸಿದ್ದಾರೆ. ಅದರಲ್ಲಿನ ಮೊದಲ ವಾಕ್ಯವೇ ’ಗುರುಶಿಷ್ಯರಿಬ್ಬರೂ ಪರಸ್ಪರ ಪೂರಕವಾದವರು’ ಎಂಬುದು. ಇಲ್ಲಿ ಕಲಿಕೆ ಎಂಬುದು ಏಕಮುಖವಾದುದಲ್ಲ. ಪರಂಪರಾನುಗತ ನಂಬಿಕೆಯಂತೆ ಗುರುವಿನಿಂದ ಶಿಷ್ಯನೊಬ್ಬನೇ ಕಲಿಯುವುದಲ್ಲ; ಶಿಷ್ಯನಿಂದಲೂ ಗುರು ಕಲಿಯುತ್ತಾನೆ. ಗುರು ನರರೂಪದಲ್ಲಿ ಮಾತ್ರವಲ್ಲ, ಬೆಟ್ಟ, ಜಲಪಾತ, ಮರ, ನಕ್ಷತ್ರ, ಮೋಡ, ಸೂರ್ಯೋದಯ ಸೂರ್ಯಾಸ್ತ ಹೀಗೆ ಯಾವ ರೂಪದಲ್ಲಾದರೂ ಗುರು ದೊರೆಯಬಹುದು. ಈ ಹಿನ್ನೆಲೆಯಲ್ಲಿಯೇ ನಾನು ಮೊದಲಿಗೆ ಕುವೆಂಪು ಅವರದು ಎಲ್ಲರನ್ನು ಮಾತ್ರವಲ್ಲ ಎಲ್ಲವನ್ನೂ ಒಳಗೊಳ್ಳುವ ಬಹುತ್ವ ಎಂದು ಹೇಳಿದ್ದು.
ಬೆರಳ್ ಗೆ ಕೊರಳ್: ದ್ರೋಣ-ಏಕಲವ್ಯ
ಈ ನಾಟಕದಲ್ಲಿ ಬರುವ ದ್ರೋಣ, ಮೂಲದ ದ್ರೋಣನಲ್ಲ. ವಿದ್ಯಾರ್ಜನೆಗಾಗಿ ಬಂದ ಏಕಲವ್ಯನನ್ನು ಜಾತಿ, ಧರ್ಮದ ಕಾರಣದಿಂದ ದ್ರೋಣ ನಿರಾಶೆಗೊಳಿಸುವುದಿಲ್ಲ. ಹಸ್ತಿನಾವತಿಯ ಋಣದ ಕಾರಣದಿಂದ ರಾಜಕುಮಾರರ ಜೊತೆಯಲ್ಲಿ ಆತನನ್ನು ಸೇರಿಸಲಾಗದಿದ್ದರೂ ಸ್ವತಃ ತನ್ನ ಮನೆಯಲ್ಲಿಯೇ ಇರಿಸಿಕೊಂಡು ತನ್ನ ಮಗ ಅಶ್ವತ್ಥಾಮನ ಜೊತೆಯಲ್ಲಿಯೇ ಬಿಲ್ವಿದ್ಯೆಯನ್ನು ಏಕಲವ್ಯನಿಗೆ ಕಲಿಸುವ ಉದಾತ್ತ ಪಾತ್ರ. ಇದೇ ರೀತಿಯ ಇನ್ನೂ ಎರಡು ಪಾತ್ರಗಳಿವೆ. ಒಂದು ಕಾನೀನ ನಾಟಕದ ಪರಶುರಾಮ ಮತ್ತು ನನ್ನಗೋಪಾಲ ನಾಟಕದ ಗುರು.
ಇಲ್ಲಿನ ಏಕಲವ್ಯ ಗುರುವಿಗೆ ಪರಿಪೂರ್ಣ ವಿಧೇಯತೆ ತೋರುವ, ಮುಂದೆ ಗುರುವಿನ ಮಾತಿನ ಮರ್ಮವನ್ನು ಅರ್ಥಮಾಡಿಕೊಂಡೇ, ತನ್ನ ಹೆಬ್ಬೆರಳನ್ನು ಹಿಂದು ಮುಂದೆ ನೋಡದೆ ಕತ್ತರಿಸಿಕೊಡುವ ವಿಧೇಯ ವಿದ್ಯಾರ್ಥಿ. ಆದರೆ, ತನ್ನತನವನ್ನು, ತಾನು ಅರಿವಿನ ವಿದ್ಯೆಯ ಮಹದುದ್ದಿಷ್ಯವನ್ನು ಎಂದಿಗೂ ಬಿಟ್ಟುಕೊಡದ, ಒಂದು ರೀತಿಯಲ್ಲಿ ಗುರುವಿಗೇ ಎಚ್ಚರ ಮೂಡಿಸುವ ಇಚ್ಛಾಶಕ್ತಿಯ ಪ್ರತೀಕ. ಇಲ್ಲಿ ಏಕಲವ್ಯನ ಶಬ್ದವೇಧಿಯನ್ನು ಪರೀಕ್ಷಿಸುವ ಸನ್ನಿವೇಶದಲ್ಲಿ, ಮುಗಿಲಾಚೆ ಮರೆಯಾದ ಹಕ್ಕಿಯನ್ನು ಎಚ್ಚಿ ಕೆಡವು ಎಂಬ ಆದೇಶ ದ್ರೋಣನಿಂದಾಗುತ್ತದೆ. ಅದಕ್ಕೂ ಮೊದಲೆ, ಆ ಹಕ್ಕಿಯ ದನಿ ಕೇಳಿಸುತ್ತಿದೆಯಲ್ಲ ಎಂಬ ಮಾತಿಗೆ, ಏಕಲವ್ಯ ತಾನು ಬಾಲ್ಯದಿಂದ ಯಾವ ಯಾವ ಸಂದಭ್ದಲ್ಲಿ ಆ ಹಕ್ಕಿಯ ಉಲಿಯನ್ನು ಕೇಳಿದ್ದೇನೆ, ಕೇಳಿ ಸಂತಸಪಟ್ಟಿದ್ದೇನೆ. ಈಗಲೂ ಹೊಸದೆಂಬಂತೆ ಕೇಳುತ್ತಿದ್ದೇನೆ ಎಂದು ಭಾವಪರವಶನಾಗಿ ಮಾತನಾಡುತ್ತಿರುತ್ತಾನೆ. ’ಎಚ್ಚು ಕೆಡವದನ್’ ಎಂದು ತನ್ನ ಗುರು ಹೇಳಿದಾಗ ಏಕಲವ್ಯ ಬೆಚ್ಚಿ ಹಿಂಜರಿದು ’ಅದಾಗದು, ಆರ್ಯ!’ ಎಂದು ನಿರಾಕರಿಸಿಬಿಡುತ್ತಾನೆ. ಆಗ,
ದ್ರೋಣ: ಕಾಣದಿರ್ದೊಡಂ ಏನ್? ಕೇಳ್ವುದುದರಾ ಕೊರಳ್.
ಶಬ್ದವೇಧಿಯನರಿವೆಯಲ್ತೆ? ನೋಳ್ಪಮ್.
ಏಕಲವ್ಯ: ಇದೇನಿದಾರ್‍ಯ? ಅರಿಯದನೊಲ್ ಆಡುತಿರ್ಪಯ್!
ದ್ರೋಣ: (ಮರೆನಗೆ ನಗುತ್ತಾ)
ನೋಳ್ಪಮ್ ನಿನ್ನ ವಿದ್ಯಾಸಾಮರ್ಥ್ಯಮಂ; ಇಸು, ಏಕಲವ್ಯ
ಏಕಲವ್ಯ: ಅಪರಾಧಮಿಲ್ಲದಾ ಸಾಧುವಂ ಕೊಲಲ್ಕಲ್ತು,
ಆಚಾರ್ಯ, ಆ ವಿದ್ಯೆಯಂ ನೀನಿತ್ತುದೆನಗೆ.
ಮುನಿಗುಂ ಮಂತ್ರಾಧಿದೇವತೆ; ಮೇಣ್,
ದಿವ್ಯ ವಿದ್ಯಾ ಬಲದಿ ಪಾಪಕಾರ್ಯವನೆಸಗೆ
ಧರ್ಮಂ ಋತಚ್ಯುತನೆನಗೆ ತಾನುಗ್ರಮಕ್ಕುಂ; ಮೇಣ್
ವಿದ್ಯಾಶಕ್ತಿ ತಾನೊಡನೆ ತಿರೋಹಿತಮಕ್ಕುಂ; ಮೇಣ್
ಆತ್ಮಹಾನಿಯಿಂ ಸರ್ವನಾಶಮಕ್ಕುಂ.-
ತಾಮದನೆಲ್ಲಮಂ ಬಲ್ಲಿರಾದೊಡಂ,
ನನಗಿದು ಪರೀಕ್ಷೆಯಲ್ತೆ, ಈವೊಳ್ತು!
ದ್ರೋಣ ಮುಂದುವರೆದು ’ಪುಣ್ಯವಂತನ್ ನೀನ್ ಏಕಲವ್ಯ’ ಎಂದು ಆಲಂಗಿಸಿಕೊಳ್ಳುತ್ತಾನೆ. ಏಕಲವ್ಯನ ಜಾಗದಲ್ಲಿ ಒಬ್ಬ ಅರಸುಕುಮಾರಿನಿದ್ದರೆ ಆಥವಾ ಅರ್ಜುನನಿದ್ದರೆ, ದ್ರೋಣನ ಆದೇಶದ ಮರುಕ್ಷಣವೇ, ಆ ಹಕ್ಕಿ ಹೆಣವಾಗಿ ಬಿದ್ದಿರುತ್ತಿತ್ತು! ಟಿಪ್ಪಣಿಕೆಯಲ್ಲಿ ಗುರುತತ್ತ್ವವನ್ನು ನಿರೂಪಿಸುತ್ತಾ ಮೊದಲ ಸಾಲಿನಲ್ಲಿಯೇ ನುಡಿದ ’ಗುರುಶಿಷ್ಯರಿಬ್ಬರೂ ಪರಸ್ಪರ ಪೂರಕವಾದವರು’ ಎಂಬ ಮಾತು ಇಲ್ಲಿ ಸಾಕಾರಗೊಂಡಿರುವುದನ್ನು ಕಾಣಬಹುದು.
ಈ ನಾಟಕ ಗುರುಗಳಾದ ಶ್ರೀಯವರಿಗೆ ಅರ್ಪಣೆಯಾಗಿದೆ. ಇಲ್ಲಿ ಕವಿಯನ್ನು ’ನನ್ನೊಡನೆ ಬಾ; ಕನ್ನಡದ ನಾಡನೆಳ್ಚರಿಸುವಾ....’ ಎಂಬ ಕರೆಗೆ, ನಿಮ್ಮ ಧರ್ಮಂ ನಿಮಗೆ; ನನ್ನ ಧರ್ಮಂ ನನಗೆ. ಪಲವು ಬಟ್ಟೆಗಳಲ್ತೆ ಭಗವದಿಚ್ಛೆಯ ಮನೆಗೆ?’ ಎಂದು ನೀಡಿರುವ ಉತ್ತರವನ್ನು ಗಮನಿಸಬೇಕು. ಇದು ಗುರು ಕರೆಯ ನಿರ್ಲಕ್ಷ್ಯವಲ್ಲ. ತನ್ನ ಉದ್ದೇಶದ ನಿರೂಪಣೆಯಷ್ಟೆ. ದ್ರೋಣ ಏಕಲವ್ಯರಂತೆಯೇ ಶ್ರೀ ಮತ್ತು ಕುವೆಂಪು ಅವರ ಗುರುಶಿಷ್ಯ ಸಂಬಂಧ ಲೌಕಿಕದ ಗೊಡವೆಗೆ ಬೀಳುವಂತದ್ದಲ್ಲ! ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ, ಪತ್ರಿಕಾ ಸಂಪಾದಕನೊಬ್ಬನಿಗೆ ಪತ್ರ ಬರೆಯುವ ವಿಚಾರದಲ್ಲಿ ಶ್ರೀಯವರ ಅಭಿಪ್ರಾಯವನ್ನು ಕುವೆಂಪು ತಿರಸ್ಕರಿಸಿದ್ದ ಸನ್ನಿವೇಶ ನೆನಪಿನ ದೋಣಿಯಲ್ಲಿ ದಾಖಲಾಗಿದೆ. ಆದರೆ, ಈ ಘಟನೆಗಳು ಅವರನ್ನೆಂದೂ ಶ್ರೀಯವರಿಗೆ ಅವಿಧೇಯನನ್ನಾಗಿ ಮಾಡಲಿಲ್ಲ. ಗುರುವಿಗೆ ಶಿಷ್ಯನೂ ಶಿಷ್ಯನಿಗೆ ಗುರುವು ಪೂರಕವಾಗಿಯೇ ಬದುಕ್ಕಿದ್ದು ಒಂದು ಆದರ್ಶವೆಂದು ಭಾವಿಸಬಹುದು.