
ನಾನು ಬಾಲ್ಯ ಕಳೆದ ನಮ್ಮ ಮನೆಯಲ್ಲಿ ದೇವರ ಕೋಣೆಯಿದೆ. ಒಂದು ಸಲ ಕರೆಂಟು ಹೋದಾಗ ಏನನ್ನೋ ಹುಡುಕಲು ಟಾರ್ಚ್ ಹಾಕಿದವನಿಗೆ ಅಕಸ್ಮಾತ್ ಎಂಬಂತೆ ಅದರ ಮೂಲೆಯೊಂದು ಕಣ್ಣಿಗೆ ಬಿದ್ದು ,ಇಷ್ಟು ದಿನ ಈ ಕೋಣೆಯ ಈ ಭಾಗ ನೋಡೇ ಇಲ್ಲವಲ್ಲ ಅಂತ ಆಶ್ಚರ್ಯವಾಗಿತ್ತು. ಜಯಂತರ ಕತೆಗಳೇ ಹಾಗೇ. ನಾವು ಪ್ರಜ್ಞಾಪೂರ್ವಕವಾಗಿ ಭಾಗವಹಿಸದ ಕ್ರಿಯೆಗಳನ್ನೂ ಅವರ ಬರವಣಿಗೆ ಹೊಳೆಸುತ್ತದೆ. ಹಾಗಾಗಿ ನಮ್ಮ ಮುಂದೆ ಸಾಗಿ ಹೋಗುತ್ತಿರುವ ವ್ಯಕ್ತಿ ಜಯಂತರ ಬರವಣಿಗೆಯಲ್ಲಿ ಸಿದ್ಧನೋ ಎಂಬ ಅನುಮಾನ ಹುಟ್ಟಿಸುತ್ತಾನೆ.
ಎರಡು ಅಂಶಗಳು ಇವರ ಕತೆಗಳಲ್ಲಿ ನನಗೆ ಅರಿವಿಗೆ ಬಂದದ್ದು. ಒಂದು ದಟ್ಟ ನಗರ ಪ್ರಜ್ಞೆ. ಎರಡು ಅಲ್ಲಿ ಕತೆಯ ಎಲ್ಲಾ ಪಾತ್ರಗಳಿಗೂ ಹೇಳದೆ ಉಳಿದ ಅವರದೇ ಕತೆಗಳಿರುತ್ತದೆ.ಬರಿಯ ಮುಖ್ಯ ಪಾತ್ರದ ಕಡೆ ಗಮನ ಕೇಂದ್ರೀಕರಿಸದೆ ವಾತಾವರಣವೂ ಪಾತ್ರವಾಗುವ ಬಗೆ.
'ಮಧುಬಾಲ' ಕತೆಯ ಈ ಸಾಲುಗಳ ಗಮನಿಸಿ.
" ನಾವು ರಕ್ತಸಂಬಂಧ ಇತ್ಯಾದಿಗಳಿಂದ ಅನಾಥರಾಗುವುದಿಲ್ಲ ಜೂಲಿ..ಈ ಜಗತ್ತಿನಲ್ಲಿ ನಮ್ಮದೇ ಅಂತ ಒಂದು ಜಾಗ ಇರ್ತದೆ.ಯಾವುದೋ ನಿಗದಿತ ಬಸ್ಸು,ಯಾವುದೋ ನಮ್ಮದೇ ಸ್ಟಾಪು,ರೈಲ್ವೇ ಫ್ಲಾಟ್ಪಾರ್ಮನಲ್ಲಿ ನಾವು ನಿಲ್ಲೋ ನಮ್ಮದೇ ಮೂಲೆ,ನಮ್ಮದೇ ಮುರುಕು ಹಿಡಿಕೆಯ ಚಹಾ ಕಪ್ಪು, ಕೆಲವು ಸಲ ನಾವು ಮಾತಾಡಿರದ ಆದರೆ ನಿಯಮಿತವಾಗಿ ನೋಡುವ ವ್ಯಕ್ತಿಗಳೂ ಈ ಜಾಗದ್ದೇ ಭಾಗವಾಗಿರ್ತಾರೆ.ಈ ಜಾಗ ಕಳಕೊಂಡರೆ ಮಾತ್ರ ನಾವು ಖರೇ ತಬ್ಬಲಿಗಳು..'
ಇಲ್ಲಿನ ಮಧುಬಾಲ,ಅಭಂಗ ಅಭಿಸಾರ(ಗೆಳೆಯರಿಬ್ಬರ ಬಗೆ),ನೀರು ,ಅಲ್ಪವಿರಾಮ(ಇದು ನನ್ನ ಮೆಚ್ಚಿನ ಕತೆ ಟಿವಿಯಲ್ಲಿ ಬರುವವಳು ಹೋದ ನಮ್ಮ ಬೇಬಿಯೇ ಅಂತ ನಂಬಿದ ಜೀವಗಳ ಕತೆ) ಜೀ,ಒಳಾಂಗಣ (ಶೂಟಿಂಗಿಗೆ ಮನೆ ಕೊಟ್ಟು ಅಪರಿಚಿತರಾಗುವ ಸನ್ನಿವೇಶ ಚೆನ್ನಾಗಿದೆ) ಇವೆಲ್ಲ ತಮ್ಮ ದಟ್ಟ ವಿವರಗಳಿಂದ ನಮ್ಮೊಳಗೆ ಬೆಳೆಯುತ್ತದೆ. ಚದುರಿದ ಚಿತ್ರಗಳಂತೆ ಭಾಸವಾಗುವ ಈ ಎಲ್ಲಾ ಕತೆಗಳ ಮುಂಬಯಿ ಎಂಬ ಶಹರದ ಕ್ಯಾನ್ವಾಸ್ ಮೇಲೆ ಇಟ್ಟು ನೋಡಿದರೆ ಪರಸ್ಪರ ಇವೆಲ್ಲ ಹೆಣೆದುಕೊಂಡಿರುವುದು ಗೋಚರಕ್ಕೆ ಬರುತ್ತದೆ.
ಮುಖಪುಟ,ಚಿತ್ರಗಳು, ಭಾಷೆ, ಹೆಸರು ಎಲ್ಲದರಲ್ಲಿ ಪೂರ್ಣಾಂಕ ಕೊಡಬಹುದಾದ ಅಪರೂಪದ ಪುಸ್ತಕ. ಜಯಂತ್ ಕಾಯ್ಕಿಣಿ ಶೈಲಿ ಬಗ್ಗೆ ಮಾತುಂಟೇ? 'ವ್ಹಾ ಉಸ್ತಾದ್'
-Prashanth Bhat
ಕೃಪೆ: https://www.goodreads.com
ಪುಟಗಳು: 139
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !