ಕಾದಂಬರಿಯೊಂದರ ಓದಿನ ಅನುಭವ ಅದೆಷ್ಟು ಖಾಸಗಿಯಾದದ್ದು, ವೈಯಕ್ತಿಕವಾದದ್ದು ಮತ್ತು ಆಪ್ತವಾದದ್ದು. ಇತರ ಸಾಹಿತ್ಯ ಪ್ರಕಾರಗಳಿಗೆ ಹೋಲಿಸಿದರೆ ಕಾದಂಬರಿಯಲ್ಲಿ ಪಾತ್ರಗಳು ಸಂಕೀರ್ಣವಾಗಿ, ದಟ್ಟವಾಗಿ ಇರಲು ಸಾಧ್ಯ. 'ಮದಾಮ್ ಬೋವರಿ'ಯ ಎಮ್ಮಾ, 'ಕ್ರೈಂ ಅಂಡ್ ಪನಿಶ್ಮೆಂಟ್' ನ ರಸ್ಕಾಲ್ನಿಕೊವ್ ಹೀಗೆ ಹಲವಾರು ಕಾದಂಬರಿಗಳ ಪಾತ್ರಗಳು ನೂರ ಐವತ್ತು ವರ್ಷಗಳಷ್ಟು ಹಿಂದಿನ ಕೃತಿಗಳವಾದರೂ ಒಮ್ಮೆ ಓದಿದ ಮೇಲೆ ಬಹುಶಃ ಜೀವನವಿಡೀ ನಮ್ಮೊಡನೆ ಉಳಿದು ಕಾಡುವಂತಹವು. ಹಾಗೆಯೇ ನಮ್ಮ ಕನ್ನಡದ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯ ನಾಯಿ ಗುತ್ತಿ, 'ಶಿಕಾರಿ'ಯ ನಾಗಪ್ಪ - ಈ ಬಗೆಯ ಪಾತ್ರಗಳೂ ಸುಲಭಕ್ಕೆ ಮರೆಯುವಂತಹವಲ್ಲ.
ತಮ್ಮ ಕಾಲ ದೇಶಗಳನ್ನು ಮೀರಿ ನಮ್ಮನ್ನು ತಲುಪುವ, ಪ್ರಭಾವಿಸುವ, "ಕ್ಲಾಸಿಕ್ಸ್" ಎಂದು ಪರಿಗಣಿಸುವ ಕಾದಂಬರಿಗಳು ಮುಖ್ಯವಾಗಿರುವಂತೆಯೇ ಇಂದಿನ ಕಾಲಘಟ್ಟವನ್ನು ಪ್ರತಿನಿಧಿಸುವ ಕಾದಂಬರಿಗಳೂ ಮುಖ್ಯವೇ. ನಮ್ಮದೇ ಸುತ್ತಲಿನ ಸಾಮಾಜಿಕ ವಿದ್ಯಮಾನಗಳು ನಮ್ಮರಿವಿನ ಪರಿಧಿಗೆ ಬರುವುದೂ ಇಂಥ ಕಲಾ ಪ್ರಕಾರಗಳ ಮೂಲಕವೇ. ಕಾದಂಬರಿಯೊಂದರಿಂದ ಓದುಗರಾಗಿ ನಾವು ಮುಖ್ಯವಾಗಿ ನಿರೀಕ್ಷಿಸುವುದು ಅದು ದೈನಂದಿನ ಜೀವನದ ತೀವ್ರ ಅನುಭವಗಳ ಚಿತ್ರಗಳನ್ನು ಕಟ್ಟಿ ಕೊಡುತ್ತಲೇ ತಾನು ಪ್ರತಿನಿಧಿಸುವ ಕಾಲಘಟ್ಟದ ತಲ್ಲಣಗಳನ್ನು ಪ್ರತಿಬಿಂಬಿಸಬೇಕೆಂಬುದನ್ನು.
ಸುಮಾರು ಇನ್ನೂರೈವತ್ತು ಪುಟಗಳ "ಊರು ಭಂಗ" ಕಾದಂಬರಿ ಆರಂಭದ ಪುಟಗಳಿಂದಲೇ ಆವರಿಸಿಕೊಳ್ಳುವ ಧಾಟಿಯದು. ಭಾನುವಾರದ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಈ ಕಾದಂಬರಿಯ ಮೊದಲ ಎರಡು ಅಧ್ಯಾಯಗಳು ಕಾರ್ಪೊರೇಟ್ ಜಗತ್ತಿನ ಕಿರು ಪರಿಚಯ ಮಾಡುವುದರೊಂದಿಗೆ, ಬರವಣಿಗೆಯ ನಿಖರ, ಆಕರ್ಷಕ ಶೈಲಿಯ ಪರಿಚಯವನ್ನೂ ಮಾಡುತ್ತವೆ. ಕಾದಂಬರಿಯುದ್ದಕ್ಕೂ ಸಂಭಾಷಣೆಗಳು , ಸನ್ನಿವೇಶಗಳ ವಿವರಣೆಗಳು , ಎಲ್ಲವೂ ತುಂಬಾ ನೈಜವಾಗಿ ಮೂಡಿ ಬಂದಿವೆ. ಅದರಲ್ಲೂ ಕಾರ್ಪೊರೇಟ್ ಜಗತ್ತಿನ ಪರಿಚಯವಿರುವ ನಗರವಾಸಿ ಓದುಗರಿಗೆ ಆ ಜಗತ್ತಿನ ವಿವರಗಳನ್ನು ಓದುವಾಗ ಅವು ತೀರಾ ಪರಿಚಿತ ವಿಷಯಗಳಂತೆ ಅನಿಸಿದರೆ ಆಶ್ಚರ್ಯವಿಲ್ಲ.
ಅಭಿವ್ಯಕ್ತಿಗೆ ಕಾದಂಬರಿ ಪ್ರಕಾರವು ನೀಡುವ ಕೊಂಚ ಧಾರಾಳ ಸೌಲಭ್ಯವನ್ನು ಸೂಕ್ತವಾಗಿ ಬಳಸಿಕೊಂಡಿರುವ ಲೇಖಕರು ವರ್ತಮಾನದ ಒಂದು ಕವಲು ಮತ್ತು ಒಂದು ಹಿಂದಿನ ತಲೆಮಾರಿನ ಇನ್ನೊಂದು ಕವಲು ಹೀಗೆ ಎರಡು ಕವಲುಗಳಲ್ಲಿ "ಊರು ಭಂಗ" ಕೃತಿಯನ್ನು ನಿರೂಪಿಸಿದ್ದಾರೆ. ಒಂದು ಕವಲು ಸಧ್ಯದ ನಗರ ಕೇಂದ್ರಿತ ಮತ್ತು ಜಾಗತೀಕರಣದ ಪ್ರಭಾವಕ್ಕೊಳಪಟ್ಟ ಮಧ್ಯಮ ವರ್ಗದ ಜೀವನ ಚಿತ್ರವಾದರೆ, ಹಿಂದಿನ ತಲೆಮಾರಿಗೆ ಸಂಬಂಧಿಸಿದ ಕವಲು ಎಪ್ಪತ್ತರ ಶತಮಾನದ ಸಣ್ಣದೊಂದು ಪಟ್ಟಣದ ಮಂದಿಯ ಕತೆಯಾಗಿದೆ.
ಐದು ಭಾಗಗಳಿರುವ ಕಾದಂಬರಿಯ ಒಂದು, ಮೂರು ಮತ್ತು ಐದು - ಈ ಮೂರು ಭಾಗಗಳು ಇಂದಿನ ನಗರ ಕೇಂದ್ರಿತ ಕತೆಯಾಗಿದ್ದು ಉಳಿದೆರಡು ಭಾಗಗಳು ಎಪ್ಪತ್ತರ ದಶಕದ ಕತೆಗೆ ಸೀಮಿತವಾಗಿವೆ. ಹಿಂದಿನ ತಲೆಮಾರಿನ ವೃತ್ತಾಂತವು ನಿರೂಪಕ ತನ್ನ ಗೆಳತಿಗೆ ಹೇಳುವ ಕತೆಯ ರೂಪದಲ್ಲಿ ಬರುವುದೂ ಈ ಕಾದಂಬರಿಯ ಒಂದು ವಿಶೇಷ. ಸರಾಗವಾಗಿ ಓದಿಸಿಕೊಳ್ಳುವ ಶೈಲಿಯಾದರೂ ಹಲವು ಪದರಗಳನ್ನು ಕುಶಲತೆಯಿಂದ ಹೆಣೆದು ಸಿದ್ಧಪಡಿಸಿರುವ ಕಾದಂಬರಿಯಿದು.
ನನಗೆ ಇಷ್ಟವಾದ ಕೆಲವು ಭಾಗಗಳು-
ಕಾದಂಬರಿಯ ನಿರೂಪಕ ಮನಮೋಹನ ಮತ್ತು ಶಮಿ ಇನ್ನೂ ಹೊಸದಾಗಿ ಪರಸ್ಪರರಿಗೆ ಪರಿಚಯವಾಗುತ್ತಿದ್ದಾಗ ಸಾಹಿತ್ಯದ ಕುರಿತು ಅವರ ಮಾತುಕತೆ-
ಶಮಿ- "ನನಗೂ ಸಾಹಿತ್ಯದಲ್ಲಿ ಆಸಕ್ತಿ. ಆದರೆ ಅಂತ ವಿಶೇಷ ಪರಿಶ್ರಮವಿಲ್ಲ... ಅದೊಂದು ಏರಲಾಗದ ಪರ್ವತದ ಹಾಗೆ ಅನಿಸುತ್ತದೆ..."
ಮನಮೋಹನ- "ಸಾಹಿತ್ಯವೆಂದರೆ ಪರ್ವತಾರೋಹಣದ ಹಾಗೆ ಮಾಡಿ ಮುಗಿಸುವ ಕೆಲಸವಲ್ಲ. ಜೀವನವಿಡೀ ಮಾಡುತ್ತಲೇ ಇದ್ದು ಸುಖಿಸಬೇಕಾದ ಸಂಗತಿ." (ಪುಟ ೧೯)
ಸ್ವಲ್ಪ ಪರಿಚಯವಾದ ಮೇಲೆ ಶಮಿ ಅವನ ಹಿಂದಿನ ಜೀವನದ ಕುರಿತು ಕೇಳಲು ಇಷ್ಟಪಡುತ್ತಾಳೆ. ಆಗ ಅವನು ಬಾಲ್ಯದಲ್ಲಿ ತನ್ನೂರಿನಲ್ಲಿ ನೋಡಿದ್ದ ಕಿಮಾನಿ ವಕೀಲರ ಕತೆ ಹೇಳಲು ನಿರ್ಧರಿಸುತ್ತಾನೆ. ಆ ಕತೆ "ಆದರ್ಶದ ತಟವಟ, ಸಮಾಜದ ಅಸಹನೆ, ಹೊಸ ತಲೆಮಾರಿನ ವಿರೋಧ, ದುರಂತ ನಾಯಕನ ಹಟಮಾರಿತನ ಇತ್ಯಾದಿಗಳು ತುಂಬಿದ ರೋಚಕ ಕತೆಯಾಗಬಹುದು" (ಪುಟ ೫೫) ಎಂದು ಅವನು ಭಾವಿಸುವುದು ಸುಳ್ಳಾಗುವುದಿಲ್ಲ. ಇಡೀ ಒಂದು ಅಧ್ಯಾಯದಲ್ಲಿ ಕಿಮಾನಿ ವಕೀಲರ ಕತೆ ನಿಜಕ್ಕೂ ರೋಚಕವಾಗಿ ಬಿಚ್ಚಿಕೊಳ್ಳುತ್ತದೆ. ಅವರಂತೆ "ಆದರ್ಶ ಮತ್ತು ನ್ಯಾಯಕ್ಕಾಗಿ ಹೋರಾಟ" ಕ್ಕಾಗೆ ಜೀವನ ಮುಡಿಪಿಡುವ ಒಬ್ಬಿಬ್ಬರನ್ನಾದರೂ ನಮ್ಮ ಜೀವನದಲ್ಲೂ ನೋಡಿರುತ್ತೇವೆ. ಅರವಿಂದ ಅಡಿಗರ "ಲಾಸ್ಟ್ ಮ್ಯಾನ್ ಇನ್ ಟವರ್" ಕಾದಂಬರಿಯ ಮಾಸ್ಟರಜಿ ಪಾತ್ರವೂ ಅಂತಹದ್ದೇ.
ಹಾಗೆಯೇ, ನಿತ್ಯವೂ ಅವಳಿಗೆ ಕಂತುಗಳಲ್ಲಿ ಕಿಮಾನಿ ವಕೀಲರ ಕತೆ ಹೇಳುತ್ತಾ ಅವಳನ್ನು ಒಲಿಸಿಕೊಳ್ಳುವ ಮನಮೋಹನನ ತಂತ್ರವೂ ಇಷ್ಟವಾಯಿತು. "ಅರೇಬಿಯನ್ ನೈಟ್ಸ್" ನಲ್ಲಿ ಶಹಾನಿಗೆ ನಿತ್ಯವೂ ಒಂದು ಕತೆ ಹೇಳುತ್ತಾ ಜೀವ ಉಳಿಸಿಕೊಳ್ಳುವ ಶಹಜಾದೆಯ ಪ್ರಸ್ತಾಪ ಕಾದಂಬರಿಯಲ್ಲಿ ಬರುತ್ತದೆ. ಬಹಳ ಹಿಂದೆ ತಮ್ಮ ಒಂದು ಲೇಖನದಲ್ಲಿ ಲಂಕೇಶರು ಸಹ "ಅರೇಬಿಯನ್ ನೈಟ್ಸ್" ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ್ದರು. ಅದರಲ್ಲಿ ಹೀಗೆ ಬರೆದಿದ್ದರು-"ಬರೆಯುವುದು , ಶೂನ್ಯದಿಂದ ಸದ್ದುಗಳನ್ನು ಹೊರಡಿಸುವುದು, ನಿಶ್ಯಬ್ದದಿಂದ ಸದ್ದುಗಳನ್ನು ಏಳಿಸುವುದು ಲೇಖಕನಿಗೆ ಅಂಟಿದ ಶಾಪ... ಅನುಭವಗಳನ್ನು ಹೇಳುವುದು, ಹೇಳುವ ಮೂಲಕ ಅದನ್ನು ಕಾಣುವುದು, ಬಿಡುಗಡೆ ಪಡೆಯುವುದು ಇದನ್ನು ತಾನೇ ಶಹಜಾದೆ ಮಾಡಿದ್ದು?"
ಕಿಮಾನಿ ವಕೀಲರ ಕತೆ ಆರಂಭಿಸುವ ಮುನ್ನ ಪೀಠಿಕೆಯಾಗಿ ಮನಮೋಹನ ಹೀಗೆ ಹೇಳುತ್ತಾನೆ-
"ಇಲ್ಲಿ ಒಂದಿಷ್ಟು ವಿವರಗಳು, ಒಂದಿಷ್ಟು ಘಟನೆಗಳು ಇವೆ. ಸುಮ್ಮನೇ ಇವೆ . ಅತಿ ಬುದ್ಧಿವಂತಿಕೆಯ ಹಮ್ಮಿನಿಂದ ಅವುಗಳ ಪ್ರಸ್ತುತತೆಯೇನು, ಅವುಗಳ ಅರ್ಥವೇನು ಎಂದು ತಿಣುಕತೊಡಗಿದೊಡನೆ ನಮಗೆ ತಿಳಿಯದ್ದನ್ನು ಮನಸು ತೆಗೆದು ಹಾಕುತ್ತದೆ. ಹಾಗಾಗಿ ಅರ್ಥದ ಗೊಡವೆಯೂ ಬೇಡ, ಎಲ್ಲವನ್ನೂ ಒಂದು ಸೂತ್ರಕ್ಕೆ ಕಟ್ಟುವ ಹಟವೂ ಬೇಡ... ಸಂಬಂಧ ಕಲ್ಪಿಸಿ ನಮಗೆ ತಿಳಿದ ಅರ್ಥ ಹೊರಡಿಸುವುದರಲ್ಲೊಂದು ಬಗೆಯ ಹಿಂಸೆಯಿದೆ, ಅನ್ಯಾಯವಿದೆ..."(ಪುಟ ೫೬).
ಇನ್ನು ಕಾದಂಬರಿಯ ಆರಂಭದ ಪುಟಗಳಿಂದಲೂ ವಿದ್ಯುತ್ತಿನಂತೆ ಪ್ರವಹಿಸುತ್ತಾ ಬರುವ ಮನಮೋಹನ-ಶಮಿಯರ ನಡುವಿನ ಒಡನಾಟ, ಸಂಬಂಧಗಳ ಚಿತ್ರಣದ ಬಗೆಗೆ ಒಂದೆರಡು ಮಾತು. ಸಮಾರಂಭವೊಂದರಲ್ಲಿ ಅಚಾನಕ್ಕಾಗಿ ಆಗುವ ಇವರಿಬ್ಬರ ಪರಿಚಯವ ಕ್ರಮೇಣ ಸ್ನೇಹ, ಸರಸ, ಶೃಂಗಾರಗಳ ಹಾದಿಯಲ್ಲಿ ಸಾಗಿ ಕಡೆಗೆ ಇನ್ನೊಂದು ತಿರುವು ಪಡೆಯುವುದು ಕುತೂಹಲಕರವಾಗಿದೆ. ಇದೆಲ್ಲದರ ಅರ್ಥೈಸುವಿಕೆ 'ಅವರವರ ಭಾವಕ್ಕೆ' ಬಿಟ್ಟಿದ್ದು ಅಂದುಕೊಂಡರೂ ಅಸಾಧ್ಯದ್ದೆಂದು ತೋರುವ ಸಂಬಂಧವೊಂದನ್ನು ಸೂಕ್ಷ್ಮತೆಯಿಂದ, ಕುಶಲತೆಯಿಂದ, ಒಂದು ತೀವ್ರತೆಯಿಂದ ಚಿತ್ರಿಸಿರುವ ಬಗೆ ಗಮನ ಸೆಳೆಯುತ್ತದೆ. ಮನಮೋಹನನ ಮೋಹದ ತೀವ್ರತೆಯ ಅಭಿವ್ಯಕ್ತಿಗೆ ಕಾದಂಬರಿಯಲ್ಲೂ ಕವನಗಳನ್ನು ಬಳಸಿರುವುದೂ ಪರಿಣಾಮಕಾರಿ ತಂತ್ರ. ಅದರಲ್ಲೂ "ದೇವರೇ ಅವಳ ಜೊತೆ ಕತ್ತಲೆಯನ್ನೂ ಕೊಡು" ಎಂದು ಆರಂಭವಾಗುವ "ಹಗಲಲ್ಲಿ ಬರಿದಾಗಿ" ಎಂಬ ಹೆಸರಿನ ಕವಿತೆ ಇಷ್ಟವಾಯಿತು. (ಪುಟ ೧೬೮)