ಮನುಷ್ಯನ ಜೀವನದಲ್ಲಿ ಒಂದಲ್ಲ ಒಂದು ಹೊಸ ತಿರುವು ಬಂದೇ ಬರುತ್ತದೆ. ಅದು ಅವರ ಬದುಕನ್ನು ಹೊಸ ಮಜಲಿಗೆ ಹೊರಳಿಸುವ ತಿರುವು ಆಗಿರಬಹುದು ಅಥವಾ ವ್ಯಕ್ತಿಯ ವ್ಯಕ್ತಿತ್ವವನ್ನು ಬದಲಿಸುವ, ಹೊಸ ಹುಟ್ಟು ಅನಿಸುವ ತಿರುವೂ ಆಗಿರಬಹುದು. ಬಹುಷಃ ಅದುವೇ ಮನುಷ್ಯನ ಇಹದ ಬದುಕಿನ ಅರ್ಥ ಅಥವಾ ಅವನ ಹುಟ್ಟಿನ ಉದ್ದೇಶ ಅರಿತುಕೊಳ್ಳುವ ಪ್ರಮುಖಘಟ್ಟ. ಅವನ ಮರುಹುಟ್ಟು.
'ಮರುಹುಟ್ಟು' ಕಾದಂಬರಿಯ ಹುಟ್ಟು, ಒಂದು ಫ್ಯಾಂಟಸಿ ಎಳೆಯಿಂದ ಶುರುವಾಯಿತು. ಡಿಸ್ಕವರಿ ಚಾನೆಲ್‌ನಲ್ಲಿನ ಒಂದು ಗರುಡಪಕ್ಷಿಗಳ ಸಾಕ್ಷ್ಯಚಿತ್ರದಲ್ಲಿ ದೈತ್ಯ ಗರುಡಗಳು ಜಿಂಕೆಯಂತಹ ತಮಗಿಂತಲೂ ಹಿರಿದಾದ ಪ್ರಾಣಿಯನ್ನು ಹೊತ್ತೊಯ್ಯುವ ಸಾಹಸ ಹಾಗು ಬದುಕಿನ ಒಂದು ಘಟ್ಟದಲ್ಲಿ ಯಾತನಮಯವಾದ, ನೋವಿನ ಪ್ರಕ್ರಿಯೆಗೆ ಒಳಪಟ್ಟು, ಹೊಸ ಕೊಕ್ಕು, ಗರಿಗಳೊಂದಿಗೆ, ಮುಖ್ಯವಾಗಿ ಹೊಸ ಚೈತನ್ಯದೊಂದಿಗೆ ಪುಟಿದೆದ್ದು ಬರುವ ಅವುಗಳ ಮರುಹುಟ್ಟು, ಈ ಕಾದಂಬರಿಯ ಫ್ಯಾಂಟಸಿ ಪಾತ್ರ ಈಗಲ್‌ಮ್ಯಾನ್‌ನ ಕಲ್ಪನೆ ಹುಟ್ಟಿಸಿತು. ನಂತರ, ಅದಾಗಲೇ ನನ್ನ ಸ್ಮೃತಿಯಲ್ಲಿ ಸಿದ್ಧವಿದ್ದ, ಪಾಲಕರ ಪ್ರೀತಿಯ ಕೊರತೆಯಿಂದ ಬಹುಮುಖ ಪ್ರತಿಭೆಯಿರುವ ಹುಡುಗನೊಬ್ಬ ಮಾನಸಿಕವಾಗಿ ದುರ್ಬಲನಾದ ಪಾತ್ರದ ಜೊತೆಗೆ ಹೊಂದಿಕೆಯಾಗಿ ಕಾದಂಬರಿಗೆ ಹೊಸ ತಿರುವು ಸಿಕ್ಕಿತು. ಕಾದಂಬರಿ ಬೆಳೆಯಿತು.
ಮಕ್ಕಳ ಮಾನಸಿಕ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳದೇ ಬರೀ ದೈಹಿಕ ಆರೋಗ್ಯದ ಬಗ್ಗೆ ಮಾತ್ರ ಕಾಳಜಿ ವಹಿಸುವ ಪಾಲಕರ ನಿಷ್ಕಾಳಜಿ ಹಾಗು ಕೇವಲ ಮನೋರೋಗಗಳ ವಾಸಿಮಾಡಿ ವೃತ್ತಿಬದುಕು ಸಾಗಿಸದೆ, ಮನುಷ್ಯನಲ್ಲಿ ಮಾನವೀಯ ಗುಣಗಳ, ಮೌಲ್ಯಗಳ ಬೀಜ ಬಿತ್ತುವ ಪ್ರವೃತ್ತಿಯ ಮನೋವಿಜ್ಞಾನಿಯ ಸಾಮಾಜಿಕ ಕಾಳಜಿ ಕಾದಂಬರಿಯಲ್ಲಿದೆ. ಹಾಗೆಯೇ ಸಜ್ಜನ, ಮೃದುಸ್ವಭಾದ ಮೇಧಾವಿ ವಿಜ್ಞಾನಿಯೊಬ್ಬನು ದೇಶದ್ರೋಹಿಗಳ ಕೈಯಲ್ಲಿ ನಲುಗಿ ಕೊನೆಗೊಮ್ಮೆ ರೌದ್ರನಾಗಿ ತನ್ನ ಅಪ್ರತಿಮ ಜ್ಞಾನದಿಂದ ಈಗಲ್‌ಮ್ಯಾನ್ ಎಂಬುವ ಖಗಮಾನವನನ್ನು ಸೃಷ್ಟಿಸಿ ದೇಶದ್ರೋಹಿಗಳ, ಭ್ರಷ್ಟರ ರಕ್ತಹರಿಸುವ ರೋಚಕತೆಯ ಜೊತೆಗೆ ಮನೋವಿಜ್ಞಾನಿಯಿಂದ ಮರುಜೀವ ಪಡೆದ ಮಾನಸಿಕ ದುರ್ಬಲ ಹುಡುಗನ ನವಿರಾದ ಪ್ರೇಮಕತೆಯಿದೆ.
ಇದು ನನ್ನ ಮೊದಲ ಕಾದಂಬರಿ. ಬರವಣಿಗೆ ಓದುಇಗನ ಅಂತಃಕರಣ ಕಲುಕಬೇಕು, ಓದುಗನ ಮೇಲೆ ಪ್ರಭಾವ ಬೀರಬೇಕು ಆ ಮೂಲಕ ಓದುಗರಿಗೆ ಅದರಿಂದೇನಾರೂ ದಕ್ಕಬೇಕು ಎಂಬುದು ನನ್ನ ಅನಿಸಿಕೆ. ಬರವಣಿಗೆ ಮನರಂಜನೆಯ ಜೊತೆಗೆ ಪ್ರಬುದ್ಧತೆಯನ್ನು ಕೊಡಬೇಕು. ಆ ನಿಟ್ಟಿನಲ್ಲಿ ಈ ಕಾದಂಬರಿಯ ಪಾತ್ರಗಳು, ಅವರ ಬದುಕಿನ ತಿರುವುಗಳು, ನಮ್ಮ ಬದುಕಿಗೂ ಹತ್ತಿರವೆನಿಸಿ, ಆಪ್ತವೆನಿಸುತ್ತವೆ ಎಂದು ನಾನು ನಂಬಿದ್ದೇನೆ.
- ಪ್ರಾಣೇಶ್ ಕುಮಾರ್
ಪುಟಗಳು: 90
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !