ಒಂದು ಪ್ರೇಮ ಪುಸ್ರಕವು
ಪ್ರೀತಿಗೆ ಇಂತಿಷ್ಟೇ ಪರಿಮಿತಿ ಪರಿಮಾಣಗಳಿರುವುದಿಲ್ಲ. ಪ್ರೀತಿ ಅದಮ್ಯ, ಅಮೂರ್ತ, ನಿರಂತರ, ನಿರಾಕಾರ! ಪ್ರೀತಿ ಭಗವಂತನ ಭಾಷೆ ಎನ್ನುತ್ತಾ ತೀವ್ರವಾಗಿ ಪ್ರೀತಿಗೊಳಪಟ್ಟು ಉಳಿದು ಹೋದ ಹೃದಯಗಳೆಲ್ಲಾ ಈ ಪ್ರೀತಿ ಸರಿ ಇಲ್ಲಪ್ಪ ಎಂದುಬಿಡುವಂತಹ ಒಂದು ಪುಸ್ತಕ "ಮಾಂಡೋವಿ". ಮಾಂಡೋವಿ ಒಂದು ನದಿಯ ಹೆಸರು. ಗೋವಾದಲ್ಲಿ ಹರಿಯುತ್ತದೆ. ಮಹದಾಯಿ ಇದೆಯಲ್ಲ ಅದೇ ಮಾಂಡೋವಿ. ಅದರದ್ದೇ ಹರಿವು ಅದರದ್ದೇ ಸೆಳೆತ, ಅದರದ್ದೇ ಮಿಳಿತ ಮತ್ತು ಅದರಷ್ಟೇ ತುಡಿತಗಳಿವೆ ಈ ಪುಸ್ತಕದಲ್ಲಿ.
ಬೆಳಗೆರೆ ಅವರು ಇಂದಿಗೂ ನನ್ನನ್ನು ಒಂದು ಓದಿನಲ್ಲಿ ಓದಿಸಿಕೊಂಡವರಲ್ಲ (ಕೆಲವನ್ನು ಹೊರತುಪಡಿಸಿ). ವಿಚಿತ್ರ ಕುತೂಹಲವನ್ನು ಮನೆ ಮಾಡಿಸಿ ಕಾಡುವ ಅಕ್ಷರ ಮಾಂತ್ರಿಕ ರವಿ ಬೆಳಗೆರೆ.
ಮಾಂಡೋವಿ ಸುಂದರಿ. ನದಿಯ ಸೆಳವು ಸೆಳಕು ಎರಡನ್ನು ಮೈಗೂಡಿಸಿಕೊಂಡು ಬೆಳೆದವಳು. ಹುಟ್ಟಿದಾಗಲೇ ಅಮ್ಮನ ಕಳೆದುಕೊಂಡು ಮುಕ್ತಾಯಿಯೊಡನೆ ಬೆಳೆಯುವ ಮಾಂಡೋವಿಗೆ ಪ್ರೀತಿಯಾಗುತ್ತದೆ. ಮದುವೆಯಾಗುತ್ತದೆ, ಎರಡೂ ಬೇರೆಯವರೊಂದಿಗೆ! ಅರವತ್ತರ ಅಂಚಿನಲ್ಲಿ ವೈಧವ್ಯದ ಹಿಂಸೆಯೂ ಸಿಗುತ್ತದೆ. "ಪ್ರೀತಿಯ ದಾರಿದ್ರ್ಯ ಮಿತಿಯಿರದ ಐಶ್ವರ್ಯಗಳ" ನಡುವೆ ತೊಳಲಾಡುವ ಮಾಂಡೋವಿ ಕಾದಂಬರಿ ಮಾಂಡೋವಿ, ಚಲಂ ಮತ್ತು ಡಾ. ಗೌಡರ ನಡುವೆ ಸುತ್ತುತ್ತದೆ.
ಎದೆ ಸುಟ್ಟುಕೊಂಡು ಪ್ರೀತಿಸುವ ಹುಡುಗನೊಬ್ಬ ಅಚಾನಕ್ ಆಗಿ ಕಾರಣಗಳನ್ನು ತಿಳಿಯದೆ ತಿರಸ್ಕೃತನಾಗಿ ಹೋಗುತ್ತಾನೆ. ವಿಷಣ್ಣನಾಗಿಬಿಡುತ್ತಾನೆ. ಅನಾಥನಾಗುತ್ತಾನೆ. ಹಲುಬುತ್ತಾನೆ, ಅಸಹಾಯಕನಾಗುತ್ತಾನೆ! ಆ ರೀತಿ ಉಳಿದು ಹೋದ ಮಾಂಡೋವಿಯ ಪ್ರೇಮಿ "ಚಲಂ" ಈ ಕಾದಂಬರಿಯಲ್ಲಿ ತುಂಬಾ ಕಾಡುವ ಪಾತ್ರ. ಮಾಂಡೋವಿಯ ಮದುವೆಯ ನಂತರ ಅವಳ ಶಪಿಸಿ ಅವಳ ಒಳಿತನು ಬಯಸಿ ಅವಳ ನೆನಪಿನಲ್ಲೇ ಉಳಿದು ಇಂದಲ್ಲ ನಾಳೆ ಅವಳು ಬಂದೇ ಬರುತ್ತಾಳೆ ಎಂದು ಕಾಯುವ ಅದಮ್ಯ ಪ್ರೇಮಿ ಚಲಂ. ಬರೋಬ್ಬರಿ ಅರ್ಧ ಶತಮಾನಗಳಷ್ಟು!
ನಾವು ಪ್ರೀತಿಸಿಕೊಂಡವರನ್ನು ಅವನ್ಯಾರೋ ಸೂಟು ತೊಟ್ಟ ಧೀರ ಅಹೋರಾತ್ರಿ ನಮ್ಮಿಂದ ದೂರ ಕರೆದುಹೋಗಿಬಿಡುತ್ತಾನೆ. ನಾವು ಪ್ರೀತಿಸಿದವಳು ಸಾಮಾಜಿಕ ಭದ್ರತೆಗೋ ಏಕೋ ಹಾದಿ ಮರೆತವಳಂತೆ ಹಿಂಬಾಲಿಸುತ್ತಾಳೆ. ಹಾಗೇ ಮಾಂಡೋವಿಯ ಕರೆದುಹೋದ ಚನ್ನಬಸವನಗೌಡ ಅವಳನ್ನೆಷ್ಟು ಪ್ರೀತಿಸುತ್ತಾನಾ? ಚಲಂನಷ್ಟು? ಅಥವಾ ಕಾರಣವಲ್ಲದ ಕಾರಣಕ್ಕೆ ಚಲಂನನ್ನು ತೊರೆದ ಮಾಂಡೋವಿ ಗಂಡನನ್ನು ಪ್ರೀತಿಸುತ್ತಾಳಾ? ಚಲಂನಂತೆ?
ಗೌಡನ ಸಂಬಂಧಗಳು, ಚಲಂನ ತುಡಿತಗಳು, ಮಾಂಡೋವಿಯ ಸುತ್ತಲೂ ಬರುವ ಶೇಷಿ, ಜುಲೇಖಾ, ಶಿವರಾಜಪ್ಪ, ಮಂಗಳಗೌರಿ ಪಾತ್ರಗಳೂ ಕೂಡ ಓದುಗನಿಗೆ ಒಂದು ವಿಲಕ್ಷಣ ಕುತೂಹಲಗಳ ನೀಡಿ ಓದಿಸಿಕೊಳ್ಳುತ್ತವೆ.
ಗೌಡನ ಮರಣಾನಂತರ ಮಾಂಡೋವಿಗೆ ಸಿಗುತ್ತಾಳಾ? ಸಿಕ್ಕರೂ ಎಷ್ಟು ಸಿಕ್ಕಾಳು? ಮುಟಿಗೆಯಷ್ಟು? ಮುಗಿಲಿನಷ್ಟು? ಎಲ್ಲ ಪ್ರಶ್ನೆಗಳಿಗೂ ಉತ್ತರಗಳಿವೆ! ಸಮಯ ಸಿಕ್ಕಾಗ ಓದಿ :)
- ಅಭಿ.
ಕೃಪೆ https://www.goodreads.com/
ಪುಟಗಳು : 208
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !