ಬರಹಗಾರ: ಪೂರ್ಣಚಂದ್ರ ತೇಜಸ್ವಿ
ಇದು 1962 ರಲ್ಲಿ ತಮ್ಮ ಎಂ.ಎ. ಮುಗಿಸಿದ ನಂತರದ ದಿನಗಳಲ್ಲಿ ತೇಜಸ್ವಿ ಬರೆದ ಮೊಟ್ಟಮೊದಲ ಕಾದಂಬರಿ.
ಕಲ್ಮನೆಯೆಂಬ ಮಲೆನಾಡ ತಪ್ಪಲಿನ ಊರ ಕಥೆ ಇದು. ಅಲ್ಲಿನ ಜನರ ನಂಬಿಕೆಗಳು ಹಾಗು ಅವರ ಮೌಢ್ಯದ ನಡುವಿನ ತಾಕಲಾಟವೇ ಕಾದಂಬರಿಯ ವಸ್ತು.
ಕಲ್ಮನೆಯ ರಂಗಪ್ಪನವರು ವೆಂಕನೆಂಬ ಮೌಢ್ಯಪೋಷಿತ ಮಂತ್ರವಾದಿಗೆ ಬದುಕಿದ್ದಾಗ ಮೂಢನಂಬಿಕೆಗಳಿಗೆ ಬಲಿಯಾಗದೆ, ಕಾಯಿಲೆಯಾಗಿ ತೀರಿಹೋದಾಗ ಮಗಳು ಹೋಮ-ಶಾಂತಿಯೆಂದು ವೆಂಕುವನ್ನಾಶ್ರಯಿಸದೆ, ಕಡೆಗೆ ರಂಗಪ್ಪನ ಸಮಾಧಿ ಬಳಿ ವಾಮಾಚಾರ ಮಾಡಲು ಹೋದ ವೆಂಕುವಿನ ಅರಿವಿಗೆ ಬಾರದೆ ತಿರುಮಂತ್ರವಾಗಿ ರಂಗಪ್ಪನ ಬದುಕು-ಸಾವಿನ ಹಾಗೆ ಅವನ ನಂಬಿಕೆ ಅವನಿಗೇ ಪ್ರಶ್ನೆಯಾಗಿ ಉಳಿಯುತ್ತದೆ. ಇಲ್ಲಿ ವೆಂಕ ಶತಮಾನಗಳ ಮೂಢ ಕ್ರೌರ್ಯದ ಪ್ರತಿನಿಧಿ.
ರಂಗಪ್ಪನ ಮಗಳು ನಳಿನಿಯನ್ನು ವಿವಾಹವಾಗಲು ಬಂದ ವಿದ್ಯಾವಂತ ಸೋಮುವು ಆಕೆಯ ತಂದೆಯಗಲಿದ ದುಃಖದಲ್ಲಿ ಮುಸುಕಾದ ಪ್ರೇಮದೆಡೆ ಅಪನಂಬಿಕೆ ಬೆಳೆಸಿಕೊಳ್ಳುತ್ತಾನೆ. ಈ ಮಧ್ಯೆ ಕಲ್ಮನೆಯ ಕಾಡಿದ ಭಾರೀ ಕಾಡುಹಂದಿಗೆ ಡೈನಮೈಟ್ ಇಟ್ಟು, ಅದಕ್ಕೆ ಬಲವಾದ ಪೆಟ್ಟು ತಾಗಿದರೂ ಇನ್ನೂ ಬದುಕುಳಿಯುತ್ತದೆ. ಆಳುಗಳು ಅದರ ಇರುವನ್ನು ಹುಡುಕಿ ಕೊನೆಗಾಣಿಸೋಣವೆಂದಾಗ ಸಮಾಧಿಯನ್ನೂ ಬಿಡದೆ ಬೆದಕಿ ತೆಗೆದು ಹೆಣ ಬಗೆದ ರಾಕ್ಷಸ ಹಂದಿಯ ಸಿಡಿಮದ್ದಿನಿಂದ ಹಿಂಜಿದ ಬಾಯಲ್ಲಿ ಹುಳು ಮುಲುಗುಟ್ಟಿ ಯಾತನೆ ಪಟ್ಟು ಸಾಯಲಿ ಎಂದು ಬಯಸುವ ಸೋಮು ನಿಷ್ಕಾರಣ ಕ್ರೌರ್ಯವೊಂದರ ಕುರುಹಾಗುತ್ತಾನೆ.
ಹಂದಿ ಬೇಟೆಯಾಡಲು ಹೋದಾಗಿನ ರೋಚಕತೆ, ಪಾನಮತ್ತ ಮಾರ್ಯನೆಂಬ ಆಳಿನ ಕಾಲ್ಗಳಡಿಯಲ್ಲೇ ತಿವಿದು ನುಸುಳಿದಾಗಿನ ಕಳ್ಳಭಟ್ಟಿಯ ನಶೆ ತಂದ ಫಜೀತಿ, ವೆಂಕನ ಪೊಳ್ಳು ಮಂತ್ರಗಳಿಗೆ ಒಂಟಿಗ ಹಂದಿಯ ರೂಪದ ಭೂತ ವಶವಾಯಿತೆಂದು ಬೀಗುವ ಅವನ ಹೆಡ್ಡತನ, ಜೀತದಾಳು ಲಿಂಗನ ಮುಗ್ಧತೆ, ತಾನು ಬಯಲುಸೀಮೆಗೆ ಓಡಿಹೋಗಬೇಕೆನ್ನುವ ತವಕ, ಎಲ್ಲವೂ ನಮ್ಮನ್ನು ಕಲ್ಪನೆಯ ಕಥೆಯೊಳಕ್ಕೆ ಇಳಿಸಿ ಎಲ್ಲಿಯೂ ನಿಲ್ಲಿಸದೆ ಓದಿಸಿಕೊಂಡು ಹೋಗುತ್ತವೆ.
ಈ ಕಾದಂಬರಿ 5೦ ವರ್ಷ ಹಳೆಯದು. ತೇಜಸ್ವಿಯವರ ಕಥಾಮಂಡನೆ ಕೊಂಚವೂ ಹಳತೆನ್ನಿಸುವುದಿಲ್ಲ. ಅವರ ಬರಹವನ್ನ ಇಷ್ಟ ಪಡುವವರು ಓದಲು ತಪ್ಪಿಸಬಾರದ ಪುಸ್ತಕ.
ಈ ಪುಸ್ತಕ ಯಾವುದೇ ತೇಜಸ್ವಿಯವರ ಪುಸ್ತಕದಂತೆ ಅದೇ ಅದ್ಭುತ ಅನುಭವ, ಲೌಕಿಕಾಲೌಕಿಕತೆಗಳ ನಡುವಿನ ಅನುಭೂತಿಯನ್ನು ಎಂದಿನಂತೆ ಕಟ್ಟಿಕೊಡುತ್ತದೆ.
ಕೃಪೆ-
ನಿಲುಮೆ
http://suprabhasulthanimatt.blogspot.com/
ಪುಟಗಳು: 158
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !