ಬರಹಗಾರರು: ಜೋಗಿ
ಪುಸ್ತಕ ಪ್ರಕಾರ: ಕಾದಂಬರಿ
ಮಹಾನಗರಗಳಿಗೆ ಇರುವ ಶಾಶ್ವತವಾದ ಗುಣವೆಂದರೆ ಹೇಡಿತನ. ಪರಮವೀರನಂತೆ ಕಾಣಿಸುವ ಮಹಾನಗರಗಳು ತಮ್ಮೊಳಗೆ ಎಂಥಾ ಕೀಳರಿಮೆಯನ್ನು ಹುದುಗಿಸಿ ಇಟ್ಟುಕೊಂಡಿರುತ್ತವೆ ಎಂದರೆ ಅವು ಯಾವುದನ್ನೂ ಕನಿಷ್ಠ ಪ್ರತಿಭಟಿಸಲಿಕ್ಕೂ ಹೋಗುವುದಿಲ್ಲ. ಕಂಡೋರ ಸುದ್ದಿ ನಮಗ್ಯಾಕೆ ಅಂತ ಸುಮ್ಮನಿರುವ ಮಧ್ಯಮವರ್ಗದಂತೆ ಮಹಾನಗರಗಳು ಎಲ್ಲವನ್ನೂ ಕಂಡೂ ಕಾಣದಂತೆ ಇದ್ದುಬಿಡುತ್ತವೆ. ಬೆಂಗಳೂರಿನಲ್ಲಿ ಏನಾದರೂ ಪ್ರತಿಭಟನೆ ನಡೆಯಬೇಕಿದ್ದರೆ ಹೊರಗಿನಿಂದ ರೈತರೋ ಅಂಗನವಾಡಿ ಕಾರ್ಯಕರ್ತರೋ ಬರಬೇಕು. ಮಹಾನಗರದ ಮಂದಿ ಮಾತ್ರ ಮಕ್ಕಳಿಗೆ ರಜಾ ಯಾವಾಗ, ಅಮೆಝಾನ್ನಲ್ಲಿ ಆಫರ್ ಯಾವುದಿದೆ, ಅತೀ ಹೆಚ್ಚು ಬಡ್ಡಿ ತರುವ ಉಳಿತಾಯ ಯೋಜನೆ ಯಾವುದು ಎಂಬ ಸದ್ಯದ ಚಿಂತೆಯಲ್ಲೇ ಇರುತ್ತಾರೆ. ಇದರಿಂದ ಅನುಕೂಲವೂ ಉಂಟು. ಹೀಗೆ ಭಯಂಕರ ನಿರ್ಲಿಪ್ತತೆ ಮತ್ತು ಅಸಾಧ್ಯ ಉಡಾಫೆಯಲ್ಲೇ ಬದುಕಬಲ್ಲೆ ಎಂದು ನಂಬಿರುವ ಬೆಂಗಳೂರಿಗೆ ಅದರದ್ದೇ ಆದ ಶಾಣ್ಯಾತನವೂ ಇದೆ. ಇದು ಕೊಂಚ ಅರಚಾಡುತ್ತದೆಯೇ ಹೊರತು ಯುದ್ಧಕ್ಕೆ ಇಳಿಯುವುದಿಲ್ಲ. ಸಂಜೆ ಹೊತ್ತು ಟೀವಿಗಳಲ್ಲಿ ನಡೆಯುವ ಮಾತಿನ ಕಾಳಗದ ಹಾಗೆ ಇಲ್ಲಿ ನಡೆಯುವುದೆಲ್ಲ ಅಬ್ಬರ ಮತ್ತು ತೋರಿಕೆಯದ್ದೇ ಹೊರತು, ಆತ್ಮಗತವಾದದ್ದು ಸೊನ್ನೆ.
ಹಾಗಿದ್ದರೆ ಇದು ಬೆಂಗಳೂರಿನ ಮೂಲಗುಣವೇ? ಜೋಗಿಯವರ ಬೆಂಗಳೂರು ಮಾಲಿಕೆಯ ಸ್ವತಂತ್ರ ಕೃತಿಗಳಲ್ಲಿ ನಾಲ್ಕನೆಯದು ಈ ಕಾದಂಬರಿ.