ಪುಸ್ತಕ : ಬೆಂಗಳೂರು
ಲೇಖಕರು: ಜೋಗಿ
ಬೆಲೆ : 99ರೂ
ಮೈಲ್ಯಾಂಗ್ ಅಲ್ಲಿ ಇಬುಕ್ ಖರೀದಿ ಮಾಡಿ ಓದಿದ್ದು
ಒಂದೊಂದು ಕಥೆಗಳೇ ಹಾಗೆ ಓದ್ತಾ ಓದ್ತಾ ಹೋದಂತೆ ನಮ್ಮನ್ನು ಎಲ್ಲಿಗೋ ಕರೆದುಕೊಂಡು ಹೋಗಿಬಿಡುವ ಸಾಧ್ಯತೆ ಇರುತ್ತದೆ. ಪರದೇಶಿ ಹುಡಗನೊಬ್ಬ ಗೊತ್ತು ಗುರಿ ಇಲ್ಲದೆ ಹತ್ತಿದ ರೈಲು ಪ್ರಯಾಣದ ಅನುಭವದಂತೆ. ಹೋಗುವ ದಾರಿ ಉದ್ದಕ್ಕೂ ಅವನೊಳಗೆ ಏನೋ ಗೊಂದಲ. ಎಲ್ಲಿಗೆ ಹೊರಟಿದ್ದೇನೆ? ಎಲ್ಲಿ ಇಳಿಯುತ್ತೇನೆ? ಇಳಿದರೆ ಅಲ್ಲೇನು? ಯಾವುದಕ್ಕೂ ಪರಿಹಾರ ಸಿಗದ ಒದ್ದಾಟದಲ್ಲೇ ಒಂದು ವಿಶಿಷ್ಟ ಖುಷಿ ಇರುತ್ತದೆ ಅವನಲ್ಲಿ. ಅಪರಚಿತ ಚಹರೆಗಳಲ್ಲಿ, ಹೊಸ ಹೊಸ ಊರುಗಳ ಪುಟ್ಟ ಸ್ಟೇಶನ್ ಗಲಾಟೆಯಲ್ಲಿ ಅಥವಾ ನಿಶಬ್ಧತೆಯಲ್ಲಿ, ರೈಲು ಮುಂದೆ ಮುಂದೆ ಸಾಗಿದಂತೆ ಹಿಂದಕ್ಕೆ ಹೋಗುತ್ತಿರುವ ಮರ,ಗಿಡ, ಬಳ್ಳಿ, ಲೈಟು ಕಂಬ, ಮನೆಗಳು, ಬಂಗಲೆಗಳು, ಟೆಂಟುಗಳು, ಕೆರೆ, ಬಾವಿ ,ದನ, ಹಳ್ಳ ಎಲ್ಲವೂ ಹಿಂದಿಕ್ಕಿ ತಳ್ಳುತ್ತಾ ತಾನು ಮಾತ್ರ ಮುಂದೆ ಹೋಗುತಿದ್ದೇನೆಂಬ ಉಮೇದು ಅವನಿಗೆ. ಒಳಗೊಳಗೇ ಎಂಥದೋ ಖುಷಿ, ಪುಳಕ, ಆತಂಕ, ಭಯ, ಎಲ್ಲವೂ ಮಿಶ್ರಣವಾದ ತಿಳಿ ನೀರಿನ ಕೊಳದಲ್ಲಿ ಕಲ್ಲು ಎಸೆದಂತ ಅನುಭವ. ಒಂದು ಪುಸ್ತಕ ಓದುವಾಗ ನಾವು ಕಥೆಯೊಳಗೆ ಕಥೆ ನಮ್ಮೊಳಗೆ ಇಳಿಯದಿದ್ದರೆ ಅದೊಂದು ಕೇವಲ ಓದು. ಅದು ನಮ್ಮೊಳಗೆ ನಡೆದಂತೆ ಅನ್ನಿಸಿದರೆ ಅಥವಾ ನಾವೇ ಆ ಪಾತ್ರದ ಮೂರ್ತ ರೂಪದಂತೆ ಕಂಡರೆ, ಆ ಕಥೆಯೊಂದಿಗೆ ನಮ್ಮದೂ ಪ್ರಯಾಣ ಸಾಗಿದರೆ ಅದು ಆ ಕ್ಷಣದ, ಓದಿದ ಅಷ್ಟೂ ಗಳಿಗೆಯ ನಮ್ಮದೇ ಅನುಭವ ಅದು. ಅಂತಹದ್ದೊಂದು ಚೆಂದದ ಕಥೆಯುಳ್ಳ ಕಾದಂಬರಿ ‘ಬೆಂಗಳೂರು’
ಬೆಂಗಳೂರು ಎಂಬ ಮಾಯಾನಗರಿಯ ಒಂದು ಚಿತ್ರಣವನ್ನೇ ಬಿಚ್ಚಿಟ್ಟ ಜೋಗಿಯವರು ನಮಗೆ ಕಂಡ ಬೆಂಗಳೂರು ಉಳಿದವರಿಗೆ ಕಂಡ ಬೆಂಗಳೂರು, ನಮ್ಮೆಲ್ಲರ ಕಣ್ತಪ್ಪಿ ಉಳಿದ ಬೆಂಗಳೂರಿನ ಚಿತ್ರ ಅದರ ಕರಾಳತೆ ಅದರ ಆದರ ಎಲ್ಲವನ್ನೂ ಇನ್ನಷ್ಟು ಢಾಳಾಗಿ ಕಾಣುವಂತೆ ಕಾದಂಬರಿಯಲ್ಲಿ ತೆರೆದಿಟ್ಟಿದ್ದಾರೆ. ಈ ಕಾದಂಬರಿಯಲ್ಲಿ ಒಬ್ಬ ಕಥಾನಾಯಕ ನರಸಿಂಹನದಷ್ಟೇ ಕಥೆ ಸಾಗುವುದಿಲ್ಲ ಅದರ ಬದಲಿಗೆ ಮೋಹಿನಿ, ಅವನ ಅಪ್ಪ, ಅವನ ಅಮ್ಮ, ಅವನ ಅಕ್ಕ, ಕಸ್ತೂರಿ ಮಾತ್ರೆ ಡಾಕ್ಟರ್, ಮಂಗಳಾ, ನಾಗರಾಜ ಮೂರ್ತಿ, ಆಂಜನಪ್ಪ, ಪ್ರಸಾದ ಶಣೈ, ಸಂಪಿಗೆ ಮರ, ಬಾದಾಮಿ ಮರ, ಬಸ್ಸಿನೊಳಗೆ ಸಿಕ್ಕ ಮುದುಕ, ಅಳಿಲು ಹೀಗೆ ಎಲ್ಲದರಲ್ಲೂ ಎಲ್ಲರದೂ ಒಂದೊಂದೂ ವೈವಿಧ್ಯತೆಯ ಕಥೆಗಳೇ. ಅವರವರ ಬದುಕು ಎಷ್ಟೊಂದು ರೋಚಕ, ಎಷ್ಟೊಂದು ಅನಿವಾರ್ಯತೆಯಿಂದ ಕೂಡಿದೆ, ಎಷ್ಟೊಂದು ನಿಸ್ಸಾಯಕತೆ ಅನ್ನಿಸುತ್ತದೆ. ಬಹುಶಃ ನಾವು ಯಾರು ಕಂಡಿರದ ಕಂಡರೂ ಅಲಕ್ಷ್ಯಮಾಡಿದ ಬೆಂಗಳೂರು ನಗರದ ಚಿತ್ರಣವನ್ನು ಸಂಪೂರ್ಣವಾಗಿ ಕಾದಂಬರಿ ರೂಪದಲ್ಲಿ ಓದಬಹುದು.
ಒಂದು ಕುಟುಂಬದ ಎಲ್ಲರಿಗೂ ಒಬ್ಬರಿಂದೊಬ್ಬರಿಗೆ ದಕ್ಕ ಬೇಕಾದ ಪ್ರೀತಿ ವಾತ್ಸಲ್ಯಗಳು ದಕ್ಕದೇ ಹೋದಾಗ, ಅಥವಾ ಮನೆಯ ಯಾರೋ ಒಬ್ಬರು ವಿಚಿತ್ರವಾಗಿ ನಡೆದುಕೊಂಡಾಗ ಅದರಲ್ಲೂ ಮಕ್ಕಳ ಎದುರಿಗೆ ತಂದೆ ತಾಯಿ ದಾರಿ ತಪ್ಪಿದಾಗ ಆ ಮಗುವಿನ ಮುಂದಿನ ಭವಿಷ್ಯ ಹೇಗಿರುತ್ತದೆಂದು ಹೇಳುವುದೇ ಬೆಂಗಳೂರು ಕಾದಂಬರಿಯ ಕಥಾ ಹಂದರ. ಅಥವಾ ಒಂದು ಕುಟುಂಬದಲ್ಲಿ ಒಂದೊಂದು ಘಟನೆಗಳು ಒಂದೊಂದು ಅವಘಡಗಳು ಹೇಗೆ ಒಬ್ಬನ ಮೇಲೆ ಪ್ರಭಾವ ಬೀರಿದೆ ಅನ್ನುವಂತಹದು. ಬರೊಬ್ಬರಿ ಎರಡು ದಿನ ಕೆಲಸದ ನಡುವೆ ಬಿಡುವ ಮಾಡಿಕೊಂಡು ಓದಿಸಿಕೊಂಡ ಕಾದಂಬರಿ ಇದು. ತನ್ನ ಹೆಂಡತಿಯನ್ನು ಕೊಲ್ಲುವ ಕ್ರೈಮ್ ರಿಪೋರ್ಟರ್ ಒಬ್ಬನ ಕಥಯಿಂದ ಶುರುವಾಗುವ ಕಥೆ. ಅವನ ಬಾಲ್ಯ , ಅವನ ಅಪ್ಪ ಅಮ್ಮ ಅವನು ಬದುಕಿನಲ್ಲಿ ಕಂಡ ಒಂದೊಂದು ಘಟನೆಗಳೆಲ್ಲವೂ ಕುತೂಹಲಕಾರಿಯಾಗಿ ನಮ್ಮನ್ನು ಓದಿನಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತವೆ. ನಾಗರಾಜ ಮೂರ್ತಿ ಯಾರು? ಮಂಗಳಾ ನಾಗರಾಜ ಮೂರ್ತಿ ಯಾಕೆ ಕಥಾನಾಯಕನ ಜೀವನದಲ್ಲಿ ಬರುತ್ತಾಳೆ? ಸರೋಜನಿ ಯಾಕೆ ಕೊಲ್ಲಲ್ಪಡುತ್ತಾಳೆ? ಕಥಾ ನಾಯಕನಿಗೆ ಹುಚ್ಚು ಇತ್ತಾ? ಇದ್ದದ್ದೇ ಆದ್ರೆ ಯಾವ ತರಹದ ಹುಚ್ಚು? ನಮ್ಮ ನಿಮ್ಮ ತರಹದ ಪ್ರೀತಿಯ ಹುಚ್ಚಾ? ಏನೋ ಗೆಲ್ಲಬೇಕು ಅನ್ನುವ ಹುಚ್ಚ? ಅಥವಾ ಸೇಡು ತೀರಿಸಿಕೊಳ್ಳುವ ಹುಚ್ಚ? ಕೊನೆಗೆ ಅವನ ಅಮ್ಮ ಏನಾದಳು? ಎಲ್ಲೋ ಹೋದ ಅವನ ಅಕ್ಕ ಸಿಕ್ಕಳಾ? ಕ್ರೈಮ ಪತ್ರಿಕೆಯೊಂದರ ಮುಖ್ಯಸ್ಥನಾದ ಹೆಸರುವಾಸಿಯಾದ ಅವನಲ್ಲಿ ನಿಜಕ್ಕೂ ನೆಮ್ಮದಿ ಇತ್ತಾ? ಯಾರ್‍ಯಾರದೋ ಬದುಕಿನ ಬಗ್ಗೆ ಬರೆಯುವ ಅವನು ಎಷ್ಟು ಸರಿ ಇದ್ದ ? ಇವೆಲ್ಲವನ್ನೂ ತಿಳಿದುಕೊಳ್ಳಬೇಕೆಂದರೆ, ಎಲ್ಲಾ ಭಾವಗಳನ್ನು ಬರವಣಿಗೆ ರೂಪದಲ್ಲಿ ಕಟ್ಟಿಕೊಟ್ಟು ರೋಚಕ ಕಥೆಯಲ್ಲಿ ಇಡೀ ಕಾದಂಬರಿಯನ್ನು ನಮ್ಮ ಕೈಗಿಟ್ಟ ಜೋಗಿ ಅವರ ಬೆಂಗಳೂರು ನೀವು ಓದಲೇಬೇಕು, ಓದಿದರೆ ಬಹುಶಃ ನನ್ನಷ್ಟೇ ಇಷ್ಟ ಪಡಬಹುದು ನೀವು. ಕಾದಂಬರಿಯಲ್ಲಿ ಬರುವ ಪಾತ್ರಗಳಲ್ಲಿ ಯಾರು ತಪ್ಪು ಯಾರು ಸರಿ ಅನ್ನುವುದನ್ನ ಓದುಗರ ಪಾಲಿಗೆ ಬಿಟ್ಟು ಕಥೆಯನ್ನು ಮಾತ್ರ ಹೇಳಿರುವುದು ನಿಜಕ್ಕೂ ಚೆಂದವಾಗಿದೆ.
ಇಂದಷ್ಟೇ ಓದಿ ಮುಗಿಸಿದೆ. ಚೆಂದದ ಕಾದಂಬರಿ ಇದು ಒಮ್ಮೆ ನೀವೂ ಓದಿ ಸವಿಯಬಹುದು.
ಧನ್ಯವಾದಗಳೊಂದಿಗೆ
ರವಿ ಶಿವರಾಯಗೊಳ.