ಪ್ರಕಾಶಕರು: ಅನುಗ್ರಹ ಪ್ರಕಾಶನ
Publisher: Anugraha Prakashana
ಬರೆದವರು:
ಅನುಷ್ ಶೆಟ್ಟಿ
ಸ್ವಲ್ಪ ನಿಧಾನಕ್ ಹೋಗು ಅಬು.. ನೆನಿಬೇಕು ಅನ್ನುಸ್ತಿದೆ” ಎಂದಳು ವೇದ. ಸಂತು ಏನೂ ಮಾತಾಡದೆ ಲೂನಾ ಹಿಂದಿನ ಕಂಬಿಯನ್ನು ಬಿಗಿಯಾಗಿ ಹಿಡಿದು ಕುಳಿತಿದ್ದ. ಅಬು ಆಕ್ಸಲೇಟರ್ ಹ್ಯಾಂಡಲನ್ನು ಸಂಪೂರ್ಣವಾಗಿ ತನ್ನೆಡೆಗೆ ತಿರುಗಿಸಿದರೂ, ಮೂವರನ್ನು ಕೂರಿಸಿಕೊಂಡು ದಾವಣಿ ಬೀದಿಯ ದಿಣ್ಣೆಯನ್ನು ಹತ್ತಲು ಏಗುತ್ತಿದ್ದ ಲೂನಾ ವೇಗವಾಗಿ ಚಲಿಸಲು ಸಾಧ್ಯವೂ ಇರಲಿಲ್ಲ. ಆ ಏಗಾಟದ ಶಬ್ಧವೂ ಅವರಿಗೆ ಕೇಳದಷ್ಟು ಜೋರಾಗಿ ಮಳೆ ಸುರಿಯಲಾರಂಭಿಸಿತು. ಹೀಗೆ ನಿಧಾನ ಗತಿಯಲ್ಲಿಯೇ ಅವರೆಲ್ಲ ವೇದಾಳ ಮನೆಯೆದುರು ಬರುತ್ತಿದ್ದಂತೆಯೇ ಅದಾಗಲೇ ಮನೆಯ ಮುಂದೆ ನಿಂತಿದ್ದ ವಾಹನವೊಂದರ ಹೆಡ್‍ಲೈಟ್‍ನ ಬೆಳಕು ಮಳೆಯ ಪರದೆಯ ಸೀಳಿ ಅಬುವಿನ ಕಣ್ಣು ಕೋರೈಸಿತು. ಇಷ್ಟು ಹೊತ್ತಲ್ಲಿ ಯಾರಿರಬಹುದೆಂಬ ಕುತೂಹಲದಲ್ಲೇ ಮೂವರೂ ಇನ್ನೂ ಹತ್ತಿರಾಗಿ ನೋಡಿದಾಗಲೇ ತಿಳಿದದ್ದು ಅದು ಪೊಲೀಸ್ ಜೀಪ್ ಎಂದು. ಅಬು ಜೀಪ್ ಮುಂದೆಯೆ ಲೂನಾ ನಿಲ್ಲಿಸಿದ. ಮೂವರೂ ಲೂನಾದಿಂದ ಕೆಳಗಿಳಿಯುತ್ತಲೇ ಕೇಶವ್ ಕೂಡ ಕೊಡೆ ಹಿಡಿದು ಜೀಪ್‍ನಿಂದ ಕೆಳಗಿಳಿದರು. ಸ್ಟೇರಿಂಗ್ ಹಿಡಿದು ಕೂತಿದ್ದ ಹರೀಶನೂ ಮಳೆಯಲ್ಲಿ ನೆನೆಯುತ್ತ ಕೆಳಗಿಳಿದ. ಹಿಂದಿನ ಸೀಟಿನಿಂದ ಇಳಿದ ರಂಗಪ್ಪನು ತಲೆಗೆ ಟವಲ್ ಹಿಡಿದು ನಿಂತ. ವೇದ ಏನೂ ಅರ್ಥವಾಗದೆ ಮೂವರನ್ನೂ ಒಮ್ಮೆ ದಿಟ್ಟಿಸಿದಳು. ಅವಳನ್ನು ನೋಡುತ್ತಿದ್ದ ಕೇಶವ್ ತಮ್ಮ ಪ್ಯಾಂಟ್‍ನ ಜೇಬಿನಿಂದ ಮಡಚಿದ್ದ ಹಾಳೆಯೊಂದನ್ನು ಹೊರತೆಗೆದು ವೇದಾಳಿಗೆ ಕಾಣುವಂತೆ ಹಿಡಿದರು. ಅವಳಿಗೆ ಅರ್ಥವಾಯಿತು. ಮಳೆಯ ನೀರಲ್ಲಿ ಹಣೆಗಂಟಿದ್ದ ಮುಂದಲೆಯ ಕೂದಲನ್ನು ಹಿಂದಕ್ಕೆ ಸವರಿ ಅಸಹ್ಯದಿಂದ ರಂಗಪ್ಪನನ್ನೊಮ್ಮೆ ನೋಡಿದಳು. ಹೆಡ್‍ಲೈಟ್‍ನ ಬೆಳಕಲ್ಲಿ ಕಾಣುತ್ತಿದ್ದ ಆ ಅವಳ ಕೊಂಚ ಕೆಂಪಾಗಿದ್ದ ಕಂಗಳನ್ನು ಎದುರಿಸಲಾಗದ ರಂಗಪ್ಪ ಮನೆಯೊಳಗೆ ನಡೆದ. ವೇದ ಹತಾಶೆ ಮತ್ತು ಶರಣಾಗತಿಯಿಂದ ಅಬು ಮತ್ತು ಸಂತುವನ್ನೊಮ್ಮೆ ನೋಡಿ ಮುಗುಳ್ನಕ್ಕಳು. ಮಳೆಯು ಆರ್ಭಟಿಸತೊಡಗಿತು
ಭರವಸೆಯ ಯುವ ಬರಹಗಾರ ಅನುಷ್ ಶೆಟ್ಟಿಯವರ ಆರನೆಯ ಕಾದಂಬರಿ "ಹುಲಿ ಪತ್ರಿಕೆ - 2" ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !
ಪುಟಗಳು: 200