ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಅವರ ಹಾಂಟೆಡ್ ಹೊಸಮನೆ ಕಾದಂಬರಿ ಕೈಸೇರಿದ ಎರಡೇ ದಿನಕ್ಕೆ ಓದಿ ಮುಗಿಸಿದ್ದೇನೆ. ಪತ್ತೇದಾರಿ ಚೌಕಟ್ಟಿನ ಒಳಗೆ ಹಾರರ್ ಸ್ಪರ್ಶವನ್ನು ಕೊಟ್ಟು ಅತ್ಯುತ್ತಮವಾಗಿ ಕಥಾಹಂದರವನ್ನು ಕಟ್ಟಿಕೊಟ್ಟಿದ್ದಾರೆ. ರೋಚಕವಾದ ಈ ಕಥೆ ಓದಿಸಿಕೊಂಡು ಹೋಗುವ ಗುಣ ಹೊಂದಿದೆ. ಹಾರರ್ ಮತ್ತು ಪತ್ತೇದಾರಿ ಎಂಬ ಎರಡು ಆಸಕ್ತಿ ಕೆರಳಿಸುವ ಪ್ರಕಾರಗಳ ಬ್ಲೆಂಡ್ ಇಲ್ಲಿ ಮುದ ನೀಡುತ್ತದೆ. ಗೃಹ ಪ್ರವೇಶಕ್ಕೆ ಸಿದ್ಧವಾದ ಹೊಸ ಮನೆಯಲ್ಲಿ ನಡೆಯುವ ಜೋಡಿ ಕೊಲೆಗಳ ಸುತ್ತ ಹೆಣೆದ ಕಥೆ ಕ್ಷಣ ಕ್ಷಣಕ್ಕೂ ಆಸಕ್ತಿ ಬಡಿದೆಬ್ಬಿಸುತ್ತ ಮುಂದೆ ಸಾಗುತ್ತದೆ. ಕಥಾ ವಸ್ತು ಪತ್ತೆ ದಾರಿಯಾಗಿದ್ದರೂ ಹಾರರ್ ಎಳೆ ಮೈ ಮನ ಬೆಚ್ಚಗಾಗಿಸುತ್ತ ಕೊನೆವರೆಗೂ ಓದುಗರನ್ನು ಹಿಡಿದಿಡುತ್ತದೆ. ರಮೇಶ್ ಶೆಟ್ಟಿಗಾರರ ಕಥಾಲೋಕವು ತಾವು ಹುಟ್ಟಿದ ಮಣ್ಣಿನ ಸುತ್ತ ಮುತ್ತಲೇ ಇರುತ್ತದೆ. ಈ ಮೂಲಕ ಕಥೆಗೆ ತಾವು ತೀರಾ ಹತ್ತಿರದವರಂತೆ ನಿರೂಪಿಸುತ್ತ ಹೋಗುತ್ತಾರೆ. ಇದು ಓದುಗನ ಓದಿನ ಅನುಭವವನ್ನು ನೈಜವಾಗಿಸುತ್ತದೆ. ಬರಹದ ಭಾಷೆ, ಶೈಲಿ, ಪಾತ್ರ ನಿರ್ಮಿತಿ, ಅವುಗಳ ಸ್ವಭಾವ ಎಲ್ಲವೂ ಇವರ ಕಾಲಾಟದೊಳಗಿನ ಸ್ಥಳಗಳಿಂದಲೇ ಹುಟ್ಟಿದವು. ಇದು ಉಂಟು ಮಾಡುವ ಸಹಜತೆ ಈ ಕಥೆಗಾರನ ಸಾಮರ್ಥ್ಯಗಳಲ್ಲೊಂದು. ಇವರು ಕಥಾವಸ್ತುವನ್ನು ವರ್ತಮಾನದ ಕಾಲ ರೇಖೆಯೊಳಗೆ ಹೇಳಲು ಪ್ರಯತ್ನಿಸುವ ಗುಣ ನನಗೆ ಮೆಚ್ಚಿಗೆಯಾಯಿತು. ಇದು ಅಷ್ಟು ಸುಲಭವೂ ಅಲ್ಲ. ಕೊರೋನಾ ಕಾಲಘಟ್ಟ, ಲಾಕ್ ಡೌನ್ ಎಲ್ಲವೂ ಕಥೆಯಲ್ಲಿ ಪ್ರಭಾವ ಬೀರುತ್ತವೆ. ಕಥಾವಸ್ತು ಪತ್ತೇದಾರಿಯಾಗಿದ್ದರೂ ಕೆಲವು ಪ್ರಚಲಿತ ವಿದ್ಯಮಾನಗಳಲ್ಲಿರುವ ದೋಷಗಳನ್ನು ಕಥೆಗಾರ ವಿಡಂಬಿಸುವುದು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ಅದು ಒಬ್ಬ ಬರಹಗಾರನ ಕರ್ತವ್ಯ ಕೂಡ. ಒಟ್ಟಿನಲ್ಲಿ ಈ ಕೃತಿಯು ಲೇಖಕರ ಬಗ್ಗೆ ಆಸಕ್ತಿ ಮೂಡಿಸಿ ಇವರ ಇತರೆ ಬರಹಗಳನ್ನು ಓದುವತ್ತ ಓದುಗನನ್ನು ಪ್ರೇರೇಪಿಸುವುದರಲ್ಲಿ ಸಂಶಯವಿಲ್ಲ.
ಹಾಂಟೆಡ್ ಹೊಸಮನೆ ಪುಸ್ತಕ ವಿಮರ್ಶೆ
- ಗಣೇಶ್ ಪ್ರಸಾದ್
ಕೃಪೆ - krutisamaya.blogspot.com
ಪುಟಗಳು: 150
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !