"ನಮ್ಮ ಜೀವನಕ್ಕೆ ಯಾವ ಕಥೆ ಹೊಂದುತ್ತದೆಯೋ, ಆ ಕಥೆಯನ್ನು ಆರಿಸಿಕೊಳ್ಳಬೇಕು. ಆ ಕಥೆಯಲ್ಲಿ ಬರುವ ಧರ್ಮ-ಅಧರ್ಮಗಳ ಚರ್ಚೆಯನ್ನು ಗಮನಿಸಿಕೊಳ್ಳಬೇಕು. ಅದಕ್ಕೆ ಯಾವುದೇ ರೀತಿಯ ತಾರ್ಕಿಕ ಅಂತ್ಯ ಇಲ್ಲದ್ದ ರಿಂದ, ನಮ್ಮ ಜೀವನಕ್ಕೆ ಹೊಂದುವ ಉತ್ತರವನ್ನೂ ನಾವೇ ಕಂಡುಕೊಳ್ಳಬೇಕು. ಇದರಷ್ಟು ಪ್ಲೆಕ್ಸಿಬಲ್ ಆಗಿ ಯಾವುದೇ ಧರ್ಮವೂ ಕೊಡಲಾರದು" ಎನ್ನುವ ಮಾತುಗಳು ಈ ಅನುಭಾವದತ್ತ ನಡೆಯನ್ನು ತೋರಿಸುತ್ತವೆ. ಬದುಕಿನಲ್ಲಿ ಒಂದಲ್ಲ ಒಂದು ಹಂತದಲ್ಲಿ ಹುಟ್ಟುವ ನಿರ್ವಾಣ ಸ್ಥಿತಿಯನ್ನು ವಿನಯ್ ಕತೆಯ ಉತ್ತರಾಂತ್ಯದಲ್ಲಿ ಹೇಳುತ್ತಾರೆ.
ಐಟಿ ಪ್ರೊಫೆಶನರ್‌ನಿಗೆ ಈ ಸ್ಥಿತಿಯ ಕಲ್ಪನೆ ನಮ್ಮ ಪುರಾಣಗಳಲ್ಲಿ ಬರೋ ಈ ಋಷಿ, ಮಹರ್ಷಿ, ರಾಜರ್ಷಿ, ಬ್ರಹ್ಮರ್ಷಿ ಪದವಿಗಳೆಲ್ಲ, ಈಗಿನ ಡೈರೆಕ್ಟರ್, ವೈಸ್ ಪ್ರೆಸಿಡೆಂಟ್, ಸಿಇಒ, ಛೇರ್ಮನ್ ಥರದ ಬಿರುದುಗಳಂತೆಯೇ ಕಾಣುತ್ತದೆ. ಇದು ಶೂನ್ಯದೆಡೆಗೆ ಕತೆಯ ಸೊಗಸು. ಇದನ್ನು ಕತೆಯಾಗಿಯೂ, ನೀಳ್ಗತೆಯಾಗಿಯೂ, ಕಾದಂಬರಿಯಾಗಿಯೂ ನೀವು ಓದಿಕೊಳ್ಳಬಹುದು. ಅಲ್ಲಲ್ಲಿ ಕಾವ್ಯದ ಮಿಳಿತವೂ ಕಾಣುತ್ತದೆ. ಅದನ್ನೂ ಸ್ವೀಕರಿಸಿ ಮುನ್ನಡೆಯಬಹುದು.
-ಗೋಪಾಲಕೃಷ್ಣ ಕುಂಟಿನಿ